ಬೀದಿಗೆ ಬಂತು 'ಕೈ' ನಾಯಕರ ಮುಸುಕಿನ ಗುದ್ದಾಟ: 'ಸಿದ್ದು' ವಿರುದ್ದವೇ ಕಾರ್ಯಕರ್ತರ ಪ್ರತಿಭಟನೆ

ಕೆಪಿಸಿಸಿ ನಾಯಕತ್ವಕ್ಕಾಗಿ ಪಕ್ಷದ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು, ಹುದ್ದೆ ವಿಭಜನೆಗೆ ವಿರೋಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕರಾದ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ಕೆಪಿಸಿಸಿ ನಾಯಕತ್ವಕ್ಕಾಗಿ ಪಕ್ಷದ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು, ಹುದ್ದೆ ವಿಭಜನೆಗೆ ವಿರೋಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಹಿರಿಯ ನಾಯಕರಾದ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದೀಗ ಸಿದ್ದರಾಮಯ್ಯ ವಿರುದ್ಧ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆಯೇ ಪ್ರತಿಭಟನೆ ಮಾಡುವ ಮೂಲಕ ನಾಯಕತ್ವದ ಗಲಾಟೆಯನ್ನು ಬೀದಿಗೆ ತಂದಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡು ಹುದ್ದೆಗಳು ಪ್ರತ್ಯೇಕವಾಗಬೇಕೆಂದು ಪರಮೇಶ್ವರ್ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ತಾವು ಗುಂಪು ಕಟ್ಟಿಕೊಂಡು ಹೈಕಮಾಂಡ್ ಮುಂದೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. 

ಇದಕ್ಕಿಂತಲೂ ಮುಖ್ಯವಾಗಿ ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆಯೇ ಪ್ರತಿಭಟನೆ ಮಾಡುವ ಮೂಲಕ ಎರಡೂ ಬಣಗಳ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬರುವಂತೆ ಮಾಡಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸ್ ನಾಯಕರ ನಡುವೆ ಇಷ್ಟು ದಿನ ಕೆಪಿಸಿಸಿ ಅಧ್ಯಕ್ಷರ ನೇಮಕ ಹಾಗೂ ಶಾಸಕಾಂಗ ನಾಯಕ ಮತ್ತು ಪ್ರತಿಪಕ್ಷದ ನಾಯಕನ ಆಯ್ಕೆ ವಿಭಜನೆ ಕುರಿತು ತೆರೆ ಮರೆಯಲ್ಲಿ ನಡೆಯುತ್ತಿದ್ದ ಕಸರತ್ತು ಈಗ ಬಹಿರಂಗವಾಗಿಯೇ ಆರಂಭವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಮುಂಚೂಣಿಯಲ್ಲಿದೆ ಎಂದು ಗೊತ್ತಾದ ತಕ್ಷಣ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಅದನ್ನು ಬಹಿರಂಗ ವಾಗಿಯೇ ಹೇಳಿದ್ದರು.

ಆದರೆ, ಮೂಲ ಕಾಂಗ್ರೆಸ್ಸಿಗರು ಅವರ ಪ್ರಯತ್ನಕ್ಕೆ ತೆರೆಮರೆಯಲ್ಲಿ ಕಾರ್ಯಾಧ್ಯಕ್ಷರ ನೇಮಕವಾಗದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದರು. ಆದರೆ, ಸೋಮವಾರ ಡಾ.ಜಿ.ಪರಮೇಶ್ವರ್‌, ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ನೇರವಾಗಿಯೇ ತಿರುಗಿ ಬಿದ್ದಿದ್ದಾರೆ.

ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸ್‌ ನಾಯಕರ ನಡುವೆ ಶೀತಲ ಸಮರ ಆರೋಪ ಪ್ರತ್ಯಾರೋಪಗಳ ಮೂಲಕ ಬಯಲಿಗೆ ಬಂದಿದ್ದರೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಲರಾಮ್‌ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಮೂಲ ಕಾಂಗ್ರೆಸ್‌ ಬಣದ ಅಸಮಾಧಾನ ಇರುವುದನ್ನು ಬಹಿರಂಗಗೊಳಿಸಿದ್ದಾರೆ.

ಪಕ್ಷದ ಕಚೇರಿ ಎದುರೇ ಪಕ್ಷದ ನಾಯಕನ ವಿರುದ್ಧ ಬಹಿರಂಗ ಪ್ರತಿಭಟನೆ ಮಾಡಿರುವುದರ ಹಿಂದೆ ಮೂಲ ಕಾಂಗ್ರೆಸ್‌ ನಾಯಕರು ಇದ್ದಿರಬಹುದು ಎಂಬ ಮಾತುಗಳು ಸಿದ್ದರಾಮಯ್ಯ ಬಣದಲ್ಲಿ ಕೇಳಿರುತ್ತಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಲರಾಮ್‌, ಮಂಜುನಾಥ ಹಾಗೂ ಕೆಂಚೇಗೌಡ ಮೂಲ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಎನ್‌ಎಸ್‌ಯುಐನಿಂದಲೂ ಕಾಂಗ್ರೆಸ್‌ನಲ್ಲಿ ವಿವಿಧ ಹಂತದಲ್ಲಿ ಪಕ್ಷದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com