ರಾಜ್ಯ ಬಜೆಟ್: ಕೈ ಪಾಳಯದಲ್ಲಿ ಮುಂದುವರೆದ ಕಾರ್ಯಾಧ್ಯಕ್ಷ ಕಲಹ, ನಾಯಕರಿಲ್ಲದೆ ಕಾಂಗ್ರೆಸ್ ಕಂಗಾಲು

2020-21ನೇ ಸಾಲಿನ ರಾಜ್ಯ ಬಜೆಟ್ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕೈ ಪಾಳಯದಲ್ಲಿ ಕಾರ್ಯಾಧ್ಯಕ್ಷ ಕಲಹ ತೀವ್ರಗೊಂಡಿದೆ. ಇದೀಗ ನಾಯಕರಿಲ್ಲದೆ ಕಾಂಗ್ರೆಸ್ ಪಕ್ಷ ಕಂಗಾಲಾಗಿದೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 2020-21ನೇ ಸಾಲಿನ ರಾಜ್ಯ ಬಜೆಟ್ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕೈ ಪಾಳಯದಲ್ಲಿ ಕಾರ್ಯಾಧ್ಯಕ್ಷ ಕಲಹ ತೀವ್ರಗೊಂಡಿದೆ. ಇದೀಗ ನಾಯಕರಿಲ್ಲದೆ ಕಾಂಗ್ರೆಸ್ ಪಕ್ಷ ಕಂಗಾಲಾಗಿದೆ. 

ಕೆಪಿಸಿಸಿ ಅಧ್ಯಕ್ಷರ ಜೊತೆಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾಗಬೇಕು ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಿಗೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ಪ್ರಬಲವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಕೆಪಿಸಿಸಿ ಹುದ್ದೆಯ ಮತ್ತೊಬ್ಬ್ ಆಕಾಂಕ್ಷಿ ಕೆ.ಹೆಚ್.ಮುನಿಯಪ್ಪ ಹಾಗೂ ಪಕ್ಷದ ಹಿರಿಯ ನಾಯಕ ಹೆಚ್.ಕೆ.ಪಾಲೀಟ್ ಅವರೂ ಕೂಡ ಸಿದ್ದರಾಮಯ್ಯ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಕಾರ್ಯಾಧ್ಯಕ್ಷ ಪಟ್ಟಕ್ಕಾಗಿ ಕಾಂಗ್ರೆಸ್ ನಾಯಕರು ತಿಕ್ಕಾಟದಲ್ಲಿ ಮುಳುಗಿದ್ದರೆ, ಇತ್ತ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ರಾಜ್ಯ ಬಜೆಟ್'ಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಬಾರಿ ಬಜೆಟ್'ಗೆ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಾವುದೇ ಸಿದ್ಧತೆಗಳನ್ನೂ ನಡೆಸಿಲ್ಲ. ಈ ವರೆಗೂ ಬಜೆಟ್ ಗೆ ಸಂಬಂಧಿಸಿದಂತೆ ಯಾವುದೇ ಸಭೆಗಳನ್ನೂ ನಡೆಸಿಲ್ಲ ಎಂದು ವರದಿಗಳು ತಿಳಿಸಿವೆ. 

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರವಾಹ ಸಂತ್ರಸ್ತರಿಗೆ ಕೋಟಿಗಟ್ಟಲೆ ಪರಿಹಾರವನ್ನು ನೀಡಿದೆ. ಪರಿಹಾರ ಬಂದರೂ ಕೂಡ ಪ್ರವಾಹ ಸಂತ್ರಸ್ತರ ನೆರವಿನ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ. ಆದರೂ ಈ ಬಗ್ಗೆ ವಿರೋಧ ಪಕ್ಷಗಳು ಯಾವುದೇ ಪ್ರಶ್ನೆಗಳನ್ನೂ ಎತ್ತುತ್ತಿಲ್ಲ. 

ಉಪಚುನಾವಣೆಯ ಸೋಲಿನ ಬಳಿಕ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದೀಗ ಸ್ಥಾನಗಳಿಗೆ ಇನ್ನೂ ಯಾವುದೇ ನಾಯಕರೂ ನೇಮಕಗೊಂಡಿಲ್ಲ. 

ಕಚೇರಿಯಲ್ಲಿ ಯಾವುದೇ ನಾಯಕರೂ ಇಲ್ಲ. ಕಚೇರಿ ಬಳಿ ಹಲವು ದಿನಗಳಿಂದ ನಾನೊಬ್ಬನೇ ಕುಳಿತುಕೊಂಡಿದ್ದೇನೆಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. 

ಕೆಪಿಸಿಸಿ ಸ್ಥಾನಕ್ಕೆ ಅಧ್ಯಕ್ಷರು ರಾಜೀನಾಮೆ ನೀಡಿದ ಬಳಿಕ ಉಪಾಧ್ಯಕ್ಷರು ಸ್ಥಾನವನ್ನು ಮುಂದುವರೆಸುತ್ತಾರೆ. ಆದರೆ ಇದೀಗ ಇಬ್ಬರೂ ಇಲ್ಲದ ಕಾರಣ ಕಾಂಗ್ರೆಸ್ ಪಾಳಯ ನಾಯಕರಿಲ್ಲದೆ ಕಂಗಾಲಾಗಿದೆ. ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷ ನಾಯಕರ ಸ್ಥಾನಗಳನ್ನು ವಿಭಾಗಿಸುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com