ಬಿಜೆಪಿ ನೂತನ ಅಧ್ಯಕ್ಷ ಜೆ.ಪಿ.ನಡ್ಡಾ ಎದುರಿದೆ ಹಲವು ಸವಾಲುಗಳು!

ಇತ್ತೀಚೆಗಷ್ಡೇ ಜೆಪಿ ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಇತ್ತೀಚೆಗಿನ ಚುನಾವಣೆಗಳ ಸಾಲು ಸಾಲು ಸೋಲು ಜೆಪಿ ನಡ್ಡಾ ಅವರ ಮುಂದೆ ಹಲವು ಸವಾಲುಗಳನ್ನು ತಂದೊಡ್ಡಿದೆ.

Published: 24th January 2020 01:34 PM  |   Last Updated: 24th January 2020 03:10 PM   |  A+A-


JP Nadda

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ನವದೆಹಲಿ: ಇತ್ತೀಚೆಗಷ್ಡೇ ಜೆಪಿ ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಇತ್ತೀಚೆಗಿನ ಚುನಾವಣೆಗಳ ಸಾಲು ಸಾಲು ಸೋಲು ಜೆಪಿ ನಡ್ಡಾ ಅವರ ಮುಂದೆ ಹಲವು ಸವಾಲುಗಳನ್ನು ತಂದೊಡ್ಡಿದೆ.

ಕಳೆದ ಐದೂವರೆ ವರ್ಷಗಳಿಂದ ಬಿಜೆಪಿ ಚಾಣಕ್ಯ ಎಂದೇ ಕರೆಯಲಾಗುತ್ತಿದ್ದ ಅಮಿತ್ ಶಾ ಅವರು ಗೃಹ ಸಚಿವರಾಗಿ ನೇಮಕವಾದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಮತ್ತೋರ್ವ ಪ್ರಬಲ ನಾಯಕನಿಗಾಗಿ ಹುಡುಕಾಟ ನಡೆದಿತ್ತು. ಅಂತಿಮವಾಗಿ ಇದೀಗ ಜೆಪಿ ನಡ್ಡಾ ಅವರಿಗೆ ಈ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ್ದು, ಬಿಜೆಪಿಗೆ ಬಲ ತುಂಬುವ ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ನಡ್ಡಾ ರೂಪಿಸಬೇಕಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಜಯಗಳಿಸಿದೆ. ಆದರೆ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಗಳಲ್ಲಿ ವೈಫಲ್ಯ ಅನುಭವಿಸಿದೆ. ಈ ಸಾಲುಸಾಲು ಸೋಲಿನಿಂದ ಕಳಾಹೀನವಾಗಿರುವ ಪಕ್ಷಕ್ಕೆ ತುರ್ತಾಗಿ ಗೆಲುವಿನ ಮದ್ದು ಬೇಕಿದೆ.

ಪ್ರಮುಖವಾಗಿ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ಮತ್ತು ಶೀಘ್ರದಲ್ಲೇ ಘೋಷಣೆಯಾಗಲಿರುವ ಬಿಹಾರ ಚುನಾವಣೆಗಳು ನಡ್ಡಾ ಅವರಿಗೆ ಆರಂಭಿಕ ಸವಾಲಾಗಿದ್ದು, ಅವರ ಪಕ್ಷವನ್ನು ಹೇಗೆ ಮುನ್ನಡೆಸಬಲ್ಲರು ಎಂಬುದಕ್ಕೆ ಈ ಚುನಾವಣೆಗಳು ಮಾನದಂಡವಾಗುವ ಸಾಧ್ಯತೆ ಇದೆ. ಇದಲ್ಲದೆ ದಕ್ಷಿಣದ ರಾಜ್ಯಗಳತ್ತಲೂ ಬಿಜೆಪಿ ಗಂಭೀರವಾಗಿ ನೋಡುತ್ತಿದ್ದು, ಪ್ರಮುಖವಾಗಿ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಕರ್ನಾಟಕದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸವಾಲು ನಡ್ಡಾ ಅವರ ಮೇಲಿದೆ.

ಪ್ರಮುಖವಾಗಿ ಕರ್ನಾಟಕ ಬಿಜೆಪಿಯಲ್ಲಿ ಪ್ರಬಲ ಲಿಂಗಾಯತ ಮುಖಂಡರಾಗಿರುವ ಮತ್ತು ಕರ್ನಾಟಕ ಬಿಜೆಪಿಯ ಆಧಾರ ಸ್ಥಂಬವಾಗಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಸರಿಸಮಾನವಾಗಿ ನಿಲ್ಲಬಲ್ಲ ನಾಯಕನನ್ನು ಮುಂದಿನ ದಿನಗಳಲ್ಲಿ ಹುಡುಕುವ ಕಾರ್ಯ ನಡ್ಡಾ ಅವರಿಂದಾಗಬೇಕಿದೆ. ಈ ಪಟ್ಟಿಯಲ್ಲಿ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತು ಆರ್ ಆಶೋಕ್ ಇದ್ದಾರೆಯಾದರೂ, ಯಡಿಯೂರಪ್ಪ ಅವರಷ್ಚು ವರ್ಚಸ್ಸು ಇವರಲ್ಲಿ ಇಲ್ಲ ಎನ್ನಲಾಗುತ್ತಿದೆ. 

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿದೆಯಾದರೂ, ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ವಿಸ್ತರಣೆ ಬಳಿಕ ಭುಗಿಲೇಳ ಬಹುದಾದ ಪಕ್ಷದ ಆಂತರಿಕ ಭಿನ್ನಮತ ಶಮನ ಮತ್ತು ಸರ್ಕಾರವನ್ನು ಉಳಿಸಿಕೊಳ್ಳುವ ಕಸರತ್ತಿನ ಜವಾಬ್ದಾರಿ ಕೂಡ ನಡ್ಡಾ ಅವರ ಮೇಲಿದೆ. ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆ, ಕಾರ್ಯಕರ್ತರ ಮತ್ತು ನಾಯಕರ ನಿರ್ವಹಣೆ ನಡ್ಡಾ ಅವರಿಗೆ ಪ್ರಮುಖ ಸವಾಲಾಗಿದೆ. ದಲಿತ ಮತ್ತು ಒಕ್ಕಲಿಗ ಸಮುದಾಯ ಪ್ರಭಾವವಿರುವ ಇಲ್ಲಿ ಇದೇ ಸಮುದಾಯಕ್ಕೆ ಸೇರಿದ ನಾಯಕರ ನಿರ್ವಹಣೆ ಕೂಡ ಮುಖ್ಯವಾಗುತ್ತದೆ. 

ಇದಲ್ಲದೆ ದೇಶದ ರಾಜಕಾರಣದ ಶಕ್ತಿಕೇಂದ್ರ ಎನಿಸಿರುವ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ದಶಕಗಳೇ ಕಳೆದಿವೆ. ದೆಹಲಿ ಚುನಾವಣೆಯಲ್ಲಿ ಬದಲಾದ ಇಮೇಜ್‌ನೊಂದಿಗೆ ಹೊಸ ಹುರುಪು ಪಡೆದುಕೊಂಡಿರುವ ಕೇಜ್ರಿವಾಲ್ ಬಿಜೆಪಿಗೆ ಸವಾಲೊಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳ ಪರಿಶ್ರಮದಿಂದ ಸಂಘಟನೆಯ ಬಲವೃದ್ಧಿಸಿಕೊಂಡಿರುವ ಬಿಜೆಪಿಗೆ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆ. ಮಮತಾ ದೀದಿಯಿಂದ ಅಧಿಕಾರ ಕಸಿದುಕೊಳ್ಳಬೇಕೆನ್ನುವ ಬಿಜೆಪಿ ನಾಯಕರ ಮಹತ್ವಾಕಾಂಕ್ಷೆಗೆ ನಡ್ಡಾ ನಿರ್ಧಾರಗಳು ಪೂರಕವಾಗಿದ್ದರೆ ಪಕ್ಷದ ಕನಸನ್ನು ನನಸು ಮಾಡಿದ ಸಾಧನೆಯಿಂದ ನಡ್ಡಾ ಬೀಗಬಹುದು. ಹಲವು ಕಾರಣಗಳಿಂದ ಕೇಂದ್ರ ನಾಯಕರೊಂದಿಗೆ ಮುನಿಸಿಕೊಂಡಿರುವ ಬಿಹಾರದ ನಿತೀಶ್ ಕುಮಾರ್ ಅವರನ್ನು ಸಂಭಾಳಿಸಿಕೊಂಡು ಅಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಪಕ್ಷದ ಮತ್ತು ನಡ್ಡಾ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಟಿಕೆಟ್ ಹಂಚಿಕೆ, ಪ್ರಚಾರ ಸಂಯೋಜನೆ ಸೇರಿದಂತೆ ಹಲವು ಎಡರುತೊಡರುಗಳನ್ನು ನಡ್ಡಾ ಎದುರಿಸಬೇಕಾಗುತ್ತದೆ.

ಇದರ ಜೊತೆಗೆ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಬಗ್ಗೆಯೂ ಹಲವು ಸಮುದಾಯಗಳಲ್ಲಿ ಆತಂಕ ವ್ಯಕ್ತವಾಗಿದೆ. ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವುದರಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಮಾತುಗಳೇ ಜನಾಭಿಪ್ರಾಯವಾಗಿ ಬದಲಾಗುವ ಅಪಾಯವನ್ನೂ ನಡ್ಡಾ ನಿರ್ವಹಿಸಬೇಕಿದೆ. ಪಕ್ಷ ಸಂಘಟನೆ, ಸಾರ್ವಜನಿಕರಲ್ಲಿ ಪಕ್ಷದ ಪರವಾಗಿ ಪೂರಕ ಅಭಿಪ್ರಾಯಗಳನ್ನು ರೂಪಿಸುವ ಸವಾಲು ಮತ್ತು ಸರ್ಕಾರದ ಜೊತೆಗೆ ಹೊಂದಾಣಿಕೆಯನ್ನು ನಡ್ಡಾ ಹೇಗೆ ಸಮತೋಲನದಿಂದ ನಿರ್ವಹಿಸಬಲ್ಲರು ಎಂಬುದನ್ನು ಕಾದು ನೋಡಬೇಕಿದೆ.

Stay up to date on all the latest ರಾಜಕೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp