ವಲಸಿಗರಿಗೆ ಸಚಿವಗಿರಿ ಕೈ ತಪ್ಪುವ ಆತಂಕ: ಸಂಪುಟ ವಿಸ್ತರಣೆಯಲ್ಲಿ ಪಕ್ಷ ನಿಷ್ಠರಿಗೆ ಕೊಕ್?

ಮುಖ್ಯಮಂತ್ರಿ ದಾವೋಸ್ ಪ್ರವಾಸದಿಂದ ವಾಪಸ್ ಬರುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದ್ದರೆ, ಕೆಲವು ಹಾಲಿ ಸಚಿವರಿಗೆ ಇರುವ ಹುದ್ದೆ ಕೈ ತಪ್ಪುತ್ತದೆಯೋ ಎನ್ನುವ ಆತಂಕ ಶುರುವಾಗಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ದಾವೋಸ್ ಪ್ರವಾಸದಿಂದ ವಾಪಸ್ ಬರುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದ್ದರೆ, ಕೆಲವು ಹಾಲಿ ಸಚಿವರಿಗೆ ಇರುವ ಹುದ್ದೆ ಕೈ ತಪ್ಪುತ್ತದೆಯೋ ಎನ್ನುವ ಆತಂಕ ಶುರುವಾಗಿದೆ.

ಮೂಲ ವಲಸಿಗರ ನಡುವೆ ಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿರುವುದರಿಂದ ಎಲ್ಲರನ್ನೂ ಸಮಾಧಾನ ಪಡಿಸಲು ಕೆಲವು ಪಕ್ಷ ನಿಷ್ಠರನ್ನು ಕೈ ಬಿಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಪಕ್ಷ ನಿಷ್ಠ ಸಚಿವರು ಜನವರಿ 29 ರ ನಂತರ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.

ಇನ್ನೊಂದೆಡೆ 17 ಜನ ವಲಸಿಗರಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗುತ್ತದೆ. ಸೋತವರಿಗೆ ಸಿಗದಿದ್ದರೇ ಏನು ಮಾಡುವುದು ಎನ್ನುವ ಬಗ್ಗೆ ವಲಸಿಗರ ಗುಂಪಿನ ನಾಯಕರು ಗೊಂದಲಕ್ಕೊಳಗಾಗಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ 12 ಜನರಲ್ಲಿ ಕೇವಲ 9 ಜನರಿಗೆ ಮಂತ್ರಿ ಸ್ಥಾನ ನೀಡಿ, ಉಳಿದ ನಾಲ್ಕು ಸ್ಥಾನಗಳನ್ನು ಪಕ್ಷದ ಮೂಲ ಶಾಸಕರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಸೋತವರಿಗೆ ಜೂನ್ ನಂತರ ಸಂಪುಟದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಅಲ್ಲದೇ, ಮುಖ್ಯಮಂತ್ರಿ ದಾವೋಸ್‍ನಿಂದ ಆಗಮಿಸಿದ ತಕ್ಷಣ ಗೆದ್ದವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಹೇಳಿದ್ದು, ವಲಸಿಗರಲ್ಲಿ ಸೋತವರು ಮತ್ತು ಸ್ಪರ್ಧಿಸದೇ ಹೊರಗುಳಿದಿರುವ ಆರ್. ಶಂಕರ್ ಅವರನ್ನು ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ.

ದಾವೋಸ್‌ ಪ್ರವಾಸದ ಬಳಿಕ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಬಿಎಸ್‌ವೈ ನೀಡಿದ್ದರು. ಆದರೆ ಈ ‘ಪರೀಕ್ಷೆ’ ಸಿಎಂ ಪಾಲಿಗೆ ಸುಲಭವಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಎಲ್ಲರ ಬೇಡಿಕೆಯನ್ನು ಈಡೇರಿಸುವುದು ಸಿಎಂ ಪಾಲಿಗೂ ಸವಾಲಿನ ಸಂಗತಿಯಾಗಿ ಪರಿಣಮಿಸಿದೆ.

ಗೆದ್ದ  ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆಯಾದರೂ ಇದನ್ನು ಈಡೇರಿಸಲು ಬಿಎಸ್‌ವೈಗೆ ಸಾಧ್ಯವಾಗುತ್ತಿಲ್ಲ. ವರಿಷ್ಠರು ಸದ್ಯ ಆರು ಜನ ‘ಅರ್ಹ’ ಶಾಸಕರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಿ ಎಂದಿದೆ. ಮೂಲ ಬಿಜೆಪಿ ಶಾಸಕರು ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿದ್ದು ಅವರಿಗೂ ಮಂತ್ರಿಗಿರಿ ನೀಡಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಲಾಗದು, ಬದಲಾಗಿ ದೆಹಲಿ ವಿಧಾನಸಭೆ ಚುನಾವಣೆ ನಂತರವ್ ವಿಸ್ತರಣೆ ಎನ್ನಲಾಗಿದೆ.

ಒಂದು ವೇಳೆ ನೂತನ ಶಾಸಕರ ಪೈಕಿ 6 ಜನರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕರೆ ಮುಂದಿನ ದಿನಗಳಲ್ಲಿ ಇದು ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚು. ಉಳಿದ ಐದು ಶಾಸಕರು ಬಂಡಾಯ ಸಾರುವ ಸಾಧ್ಯತೆಗಳಿರುವುದರಿಂದ ಸರಕಾರಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com