ಅಭಿಮಾನಿಗಳ ಮಧ್ಯೆ ಡಿಸಿಎಂ ಕಾರಜೋಳ ಜನ್ಮದಿನ ಆಚರಣೆ

ಮುಧೋಳ ನಗರದಲ್ಲಿ ಒಟ್ಟು ೫ ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. 
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜನ್ಮ ದಿನ ಆಚರಣೆ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜನ್ಮ ದಿನ ಆಚರಣೆ

ಬಾಗಲಕೋಟೆ: ಮುಧೋಳ ನಗರದಲ್ಲಿ ಒಟ್ಟು ೫ ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಶನಿವಾರ ಅಭಿಮಾನಿಗಳು ಹಮ್ಮಿಕೊಂಡ ಹುಟ್ಟು ಹಬ್ಬದ ಸಮಾರಂಭವನ್ನು ಉದ್ದೇಶಿಸಿ  ಮಾತನಾಡಿದ ಅವರು, ಮುಧೋಳ ನಗರ ಮಧ್ಯದಲ್ಲಿ ಬಸ್ ನಿಲ್ದಾಣ ಇರುವುದರಿಂದ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ೨ ಎಕರೆ ಜಮೀನಿನಲ್ಲಿ ೫ ಕೋಟಿ ರೂ.ಗಳ ವೆಚ್ಚದಲ್ಲಿ ಸಿಬ್ಬಂದಿಗಳ ನಿಲಯ, ವಾಹನಗಳ ಗ್ಯಾರೇಜ್ ಸೇರಿದಂತೆ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲಾಗುತ್ತಿದೆ. ಲೋಕಾಪೂರ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತಿ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಮುಧೋಳ ನಗರಕ್ಕೆ ವರ್ಷದ ೧೨ ತಿಂಗಳು ನೀರು ಪೂರೈಸುವ ನಿಟ್ಟಿನಲ್ಲಿ ಕೃಷ್ಣಾ ನದಿಯಿಂದ ಮುಧೋಳಕ್ಕೆ ನೀರು ತರುವ ಸಲುವಾಗಿ ೪೦ ಕೋಟಿ ರೂ.ಗಳ ಖರ್ಚು ಮಾಡಲಾಗುತ್ತಿದೆ. ನಗರದಲ್ಲಿ ಇದ್ದ ಕರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. 

ಮುಧೋಳದಿಂದ ಮಲ್ಲಾಪೂರ ಕ್ರಾಸ್ ವರೆಗೆ ೪.೮೧ ಕ.ಮೀ ರಸ್ತೆ ನಿರ್ಮಾಣಕ್ಕೆ ೨೧ ಕೋಟಿ, ಮುಧೋಳದಿಂದ ಅನಗವಾಡಿ ಕ್ರಾಸ್‌ವರೆಗೆ ೨೦ ಕಿ.ಮೀ ರಸ್ತೆ ನಿರ್ಮಾಣಕ್ಕೆ ೯ ಕೋಟಿ ರೂ. ಅದೇ ರಸ್ತೆಯಿಂದ ರಾಜ್ಯ ಹೆದ್ದಾರಿ ಹಾಗೂ ಮುಖ್ಯ ರಸ್ತೆವರೆಗೆ ೧೧.೮೭ ಕಿ.ಮೀ ರಸ್ತೆ ಸೇರಿ ಒಟ್ಟು ೭೯ ಕಿ.ಮೀ ರಸ್ತೆ ನಿರ್ಮಾಣಕ್ಕೆ ಒಟ್ಟು ೧೫೫ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರಕಾರದ ಯೋಜನೆಯಿಂದ ಲೋಕಾಪೂರದ ಹತ್ತಿರ ೧೦೦ ಎಕರೆ ಜಮೀನಿನಲ್ಲಿ ೮೦೦ ಕೋಟಿ ರೂ.ಗಳ ವೆಚ್ಚದಲ್ಲಿ ೪೦೦ ಕೆವಿ ವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಧಾರವಾಡ ಹೊರತುಪಡಿಸಿ ಎಲ್ಲಿ ಇಂತಹ ವಿದ್ಯುತ್ ಕೇಂದ್ರ ಇರುವದಿಲ್ಲ. ೪೦೦ ಕೆವಿ ವಿದ್ಯುತ್ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು. 

 ಜಿಲ್ಲೆಗೆ ೮ ಹೊಸ ವಸತಿ ನಿಲಯಗಳಿಗೆ ಮಂಜೂರಾತಿ ನೀಡಲಾಗಿದೆ. ಲೋಕಾಪೂರದಲ್ಲಿ ಪದವಿ ವಿದ್ಯಾರ್ಥಿನಿಯರಿಗೆ, ಮುಧೋಳದಲ್ಲಿ ಪದವಿ ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ನಿಲಯ, ಯಡಹಳ್ಳಿ, ಮಹಾಲಿಂಗಪೂರ, ತೇರದಾಳ, ಬಾಗಲಕೋಟೆ ಹಾಗೂ ಬೀಳಗಿಯಲ್ಲಿ ತಲಾ ಒಂದರಂತೆ  ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುರುರಾಜ ಕಟ್ಟಿ, ರಾಸನಗೌಡ ಗಣೇಕಲ್, ಕುಮಾರ ಹುಲಕುಂದ, ಬಿ.ಎಚ್. ಪಂಚಗಾವಿ, ಅರುಣ ಕಾರಜೋಳ, ಜಿಪಂ. ಸದಸ್ಯರಾದ ಭೀಮನಗೌಡ ಪಾಟೀಲ,  ಕೆ.ಆರ್. ಮಾಚಪ್ಪನವರ, ರಾಮಣ್ಣ ತಳೇವಾಡ, ಜಿಪಂ. ಸದಸ್ಯೆ ರತ್ನಕ್ಕ ತಳೇವಾಡ ಸೇರಿದಂತೆ ಇತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com