ಎಸ್ ಎಂ ಕೃಷ್ಣ ನಿಂದನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಎಚ್ ಡಿ ದೇವೇಗೌಡ 

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆತ್ಮಚರಿತ್ರೆ ಬಿಡುಗಡೆಯಾಗಿತ್ತು. ಪುಸ್ತಕದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪ್ರಸ್ತಾಪವಿದೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು; ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆತ್ಮಚರಿತ್ರೆ ಬಿಡುಗಡೆಯಾಗಿತ್ತು. ಪುಸ್ತಕದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪ್ರಸ್ತಾಪವಿದೆ.


ಈ ಬಗ್ಗೆ ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆ ಸಂದರ್ಶನ ವೇಳೆ ದೇವೇಗೌಡರು, ಎಸ್ ಎಂ ಕೃಷ್ಣ ತಮ್ಮ ಪುಸ್ತಕದಲ್ಲಿ ನನ್ನ ಬಗ್ಗೆ ನಿಂದನೆ ಮಾಡಿ ದೂಷಿಸಿ ಬರೆದಿರುವುದಕ್ಕೆ ನಾನು ತಲೆಕೆಡಿಸಿಕೊಳ್ಳುವುದೂ ಇಲ್ಲ, ಪ್ರಾಮುಖ್ಯತೆ ಕೂಡ ನೀಡುವುದಿಲ್ಲ ಎಂದಿದ್ದಾರೆ.ಅವರ ಸಂದರ್ಶನದ ಆಯ್ದ ಭಾಗಗಳು ಹೀಗಿವೆ.


ಎಸ್ ಎಂ ಕೃಷ್ಣ ಪುಸ್ತಕದಲ್ಲಿ ನಿಮ್ಮ ಬಗ್ಗೆ ಪ್ರಸ್ತಾಪವಿದೆ?
-
ನಾನು ಪುಸ್ತಕ ಓದಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ ಮತ್ತು ಸ್ನೇಹಿತರು ಹೇಳಿದ ಪ್ರಕಾರ, ಅವರ ಮನೆಗೆ ನಾನು ರಿಕ್ಷಾದಲ್ಲಿ ಹೋಗಿದ್ದೆ ಇತ್ಯಾದಿಯಾಗಿ ನಿಂದನೆ ಮಾಡಿ ನನ್ನ ಬಗ್ಗೆ ಬರೆದಿದ್ದಾರೆ ಎಂದು ಗೊತ್ತಾಗಿದೆ. ಅವರ ಈ ನಿಂದನೆಗೆ ನಾನು ಪ್ರಾಮುಖ್ಯತೆ ನೀಡುವುದಿಲ್ಲ, ತಲೆಕೆಡಿಸಿಕೊಳ್ಳುವುದೂ ಇಲ್ಲ. ನನ್ನದು ಹೋರಾಟದ ಬದುಕು. 


1994ರಲ್ಲಿ ಕಾಂಗ್ರೆಸ್ ನಲ್ಲಿ ಕೇವಲ 34 ಶಾಸಕರಿದ್ದರು, ಕೃಷ್ಣ ಅವರು ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳು ಬೇಕಾಗಿದ್ದವು. ಬಿಜೆಪಿ ಪ್ರಭಾಕರ್ ಕೋರೆಯವರನ್ನು ಬೆಂಬಲಿಸಿತ್ತು. ಕೋರೆಯವರು ಆಯ್ಕೆಯಾಗಬೇಕೆಂದು ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ಕಡೆಯಿಂದ ಒತ್ತಡವಿತ್ತು. ಅಂದು ಕಾಂಗ್ರೆಸ್ ನಲ್ಲಿದ್ದ ಶರದ್ ಪವಾರ್ ಜೊತೆ ಮಾತನಾಡಿ ಪ್ರಭಾಕರ್ ಕೋರೆ ಆರಿಸಿ ಬರಬೇಕೆಂದು ಹೇಳಿದ್ದರು. ಆಗ ಬಿಜೆಪಿಯಲ್ಲಿ 39 ಶಾಸಕರಿದ್ದರು. ಅಂತಹ ಸಂದರ್ಭದಲ್ಲಿ ನನ್ನ ಬೆಂಬಲದಿಂದ ಎಸ್ ಎಂ ಕೃಷ್ಣ ರಾಜ್ಯಸಭೆಗೆ ಹೋದರು. ನಂತರದ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾದರು ಮತ್ತು 1999ರಲ್ಲಿ ಮುಖ್ಯಮಂತ್ರಿಗಳು ಕೂಡ ಆದರು. ದೇವೇಗೌಡರು ಬೇರೊಬ್ಬ ಒಕ್ಕಲಿಗ ನಾಯಕರನ್ನು ಸಹಿಸುವುದಿಲ್ಲ, ಅವರು ಬೆಳೆಯಲು ಬಿಡುವುದಿಲ್ಲ ಎಂದು ಎಸ್ ಎಂ ಕೃಷ್ಣ ಹೇಳುತ್ತಾರೆ. ಹಾಗಾದರೆ ಅವರ ಮಾತಿನಲ್ಲಿ ನಿಜಾಂಶವಿದೆಯೇ, ಒಕ್ಕಲಿಗ ಸಮುದಾಯದಿಂದ ಮುಖ್ಯಮಂತ್ರಿಯಾಗಿ ಪೂರ್ಣಾವಧಿಯ ಅಧಿಕಾರ ಪೂರೈಸಿದ್ದು ಮಾತ್ರ ಎಸ್ ಎಂ ಕೃಷ್ಣ ಸಾಧನೆ. 


ಕೆ ಆರ್ ಪೇಟೆ ಉಪ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ಸೋತಿದ್ದೇಗೆ?
ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಜೊತೆ ಸೇರಿ ಚುನಾವಣೆ ನಡೆಯುವ ದಿನದವರೆಗೂ ಮತದಾರರಿಗೆ ಹಣ ಹಂಚಿದರು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆವು. ಆದರೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಡಳಿತ ದುರುಪಯೋಗವಾಗುತ್ತಿದ್ದರೂ ಚುನಾವಣಾ ಆಯೋಗ ಕುರುಡನಂತೆ ವರ್ತಿಸಿತು. ಹೀಗಿರುವಾಗ ನಾವು ಗೆಲ್ಲಲು ಹೇಗೆ ಸಾಧ್ಯ?


ಜೆಡಿಎಸ್ ಉಪ ಚುನಾವಣೆ ಬಳಿಕ ಕುಗ್ಗಿಹೋಗಿದೆಯೇ?
ಮಂಗಳೂರಿನಲ್ಲಾದ ಗೋಲಿಬಾರ್ ಘಟನೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ಮೇಲೆ ನಿರಂತರ ಟೀಕೆ ಮಾಡಿದರು. ಪ್ರತಿ ವಿಷಯಗಳಿಗೂ ನಮ್ಮ ಪಕ್ಷ ಪ್ರತಿಕ್ರಿಯಿಸುತ್ತಾ, ಸರಿಯಿಲ್ಲದಿದ್ದರೆ ಟೀಕಿಸುತ್ತಾ ಬಂದಿದೆ. ನಾವು ಸುಮ್ಮನೆ ಕುಳಿತಿಲ್ಲ.


ಪಕ್ಷವನ್ನು ಬಲಪಡಿಸಲು ಏನು ಮಾಡುತ್ತೀರಿ?
-2018ರ ಚುನಾವಣೆಯಲ್ಲಿ ನಮಗೆ 37 ಶಾಸಕರು ಆರಿಸಿ ಬಂದರು. 35 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. 2004ರಲ್ಲಿ ನಮಗೆ 58 ಸೀಟುಗಳು ಬಂದರೆ ಕಾಂಗ್ರೆಸ್ ಗೆ 65 ಸೀಟುಗಳು ಬಂದವು. ಆಗಲೂ 3-4 ಕ್ಷೇತ್ರಗಳಲ್ಲಿ 1 ವೋಟುಗಳ ಅಂತರದಿಂದ ಸೋತಿದ್ದೇವೆ. ಮಾಧ್ಯಮಗಳು ಜೆಡಿಎಸ್ ವಿರುದ್ಧವಾಗಿ ಹೇಳುವುದು, ಬರೆಯುವುದು ಮಾಡಬಾರದು ಎಂದು ಕೇಳಿಕೊಳ್ಳುತ್ತೇನೆ.


ಅಭಿವೃದ್ಧಿ ನಿಧಿಯಲ್ಲಿ ಬಿಜೆಪಿ ನಮಗೆ ಕಡಿತ ಮಾಡುತ್ತಿದೆ ಎಂದು ನಿಮ್ಮ ಶಾಸಕ ನಾಗಣ್ಣ ಗೌಡ ಕಂದಕೂರು ಆರೋಪಿಸಿದ್ದಾರಲ್ಲವೇ?
ನಮಗೆ ಯಡಿಯೂರಪ್ಪ ಏನೂಂತ ಗೊತ್ತಿದೆ. ಜೆಡಿಎಸ್ ನ್ನು ಸರ್ವನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ.


ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಿರಿ?
-ರಾಷ್ಟ್ರಮಟ್ಟದಲ್ಲಿ ನೋಡುವುದಾದರೆ ಜಾತ್ಯತೀತತೆ ಗಂಭೀರ ಅಪಾಯದಲ್ಲಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆಯಿದೆ. ಜನರಲ್ಲಿ ಅಭದ್ರತೆ ಉಂಟಾಗಿದೆ. ಇದಕ್ಕೆಲ್ಲಾ ಯಾರನ್ನು ದೂರಬೇಕು? ಕೇಂದ್ರ ಸರ್ಕಾರವಲ್ಲವೇ? 2019ರಲ್ಲಿ ವಿರೋಧ ಪಕ್ಷಗಳು ಇಬ್ಭಾಗವಾದಾಗ ಈ ಬಿಜೆಪಿ ಸರ್ಕಾರ ಬಂತು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಾದರೆ ನಾವೆಲ್ಲಾ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒಂದಾಗಬೇಕಿದೆ.


ಜೆಎನ್ ಯು ದಾಳಿ ಬಗ್ಗೆ ನಿಮ್ಮ ಪಕ್ಷ ಪ್ರತಿಕ್ರಿಯೆ ಕೊಡಲಿಲ್ಲ.
ಆಗ ನಾನು ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದೆ. ನನಗೆ ದಾಳಿ ಬಗ್ಗೆ ಗೊತ್ತಾದಾಗ ಕೇರಳದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದೆ. ಟಿ ವಿ ಚಾನೆಲ್ ಗಳಲ್ಲಿ ನನ್ನ ಅಭಿಪ್ರಾಯ ಪ್ರಸಾರವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com