ಸಚಿವ ಸ್ಥಾನ ತ್ಯಾಗ... ಪಕ್ಷದ ನಿರ್ಧಾರಕ್ಕೆ ಬದ್ದ: ಡಿಸಿಎಂ ಗೋವಿಂದ ಕಾರಜೋಳ

ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎನ್ನುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಪಕ್ಷದ ನಿರ್ಧಾರಕ್ಕೆ ತಾವು ಬದ್ಧ ಎಂದು ತಿಳಿಸಿದ್ದಾರೆ.
ಗೋವಿಂದ್ ಕಾರಜೋಳ
ಗೋವಿಂದ್ ಕಾರಜೋಳ

ಬಾಗಲಕೋಟೆ: ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎನ್ನುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಪಕ್ಷದ ನಿರ್ಧಾರಕ್ಕೆ ತಾವು ಬದ್ಧ ಎಂದು ತಿಳಿಸಿದ್ದಾರೆ.

ನಗರದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನೂರಕ್ಕೆ ನೂರರಷ್ಟು ಬದ್ಧನಿರುವೆ. ಪಕ್ಷ ಕೈಗೊಳ್ಳುವ ನಿರ್ಧಾರ ಬಿಟ್ಟು ನಡೆದುಕೊಳ್ಳುವುದಿಲ್ಲ. ಪ್ರಧಾನಿ, ಗೃಹಮಂತ್ರಿ, ಸಿಎಂ ಬಿಎಸ್ವೈ ಬಿಜೆಪಿ ರಾಜ್ಯಾಧ್ಯಕ್ಷ ಇವರು ಏನು ನಿರ್ಣಯಿಸುತ್ತಾರೋ ಆ ನಿರ್ಣಯ ಪಾಲಿಸುವೆ ಎಂದರು.

ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ವರ್ಗಾವಣೆ ಮಾಡಬೇಕು ಇಲ್ಲದಿದ್ದರೆ ಅಧಿವೇಶನ ಮಾಡೋಕೆ ಬಿಡೋಲ್ಲ ಎನ್ನುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಕಾರಜೋಳ, ಮುಖ್ಯಮಂತ್ರಿ, ಸಚಿವರು ಆದವರು ಯಾರು ಕೂಡಾ ನಮ್ಮ ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಬಾರದು. ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಅವರ ಮೇಲಿರುತ್ತದೆ. ಕಾಲಕಾಲಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು. ಅದನ್ನು ತೆಗೆದುಕೊಂಡಿರುತ್ತಾರೆ, ಅದಕ್ಕೆ ಬೆಂಬಲ ನೀಡಬೇಕಾಗುತ್ತದೆ. ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ರೂಪಿಸಬೇಕು ಎನ್ನುವ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾವನೆ ಕುರಿತು ಮಾತನಾಡಿದ ಕಾರಜೋಳ, ಎಚ್‌ಡಿಕೆ ಅವರ ತಂದೆ ಪ್ರಧಾನಿ ಆಗಿದ್ದರು. ಆಗಲೇ ಅದನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಬಹುದಾಗಿತ್ತಲ್ಲ ಎಂದು ಟಾಂಗ್ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಇತಿಹಾಸ ಬಲ್ಲವರೇ ಆಗಿದ್ದರು. ಅವರೇ ಘೋಷಣೆ ಮಾಡಬಹುದಾಗಿತ್ತು. ಇದು ರಾಷ್ಟ್ರೀಯ ಸಮಸ್ಯೆ. ಒಂದು ರಾಜ್ಯದಲ್ಲಿ ಘೋಷಣೆ ಮಾಡಿದಲ್ಲಿ  ಇತರ ಎಲ್ಲಾ ರಾಜ್ಯದವರೂ ತಮ್ಮ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ರೂಪಿಸಿ ಎಂದು ಕೇಳುತ್ತಾರೆ. ಅದಕ್ಕೆ ಅದು ರಾಷ್ಟ್ರೀಯ ಯೋಜನೆ ಘೋಷಣೆ ಆಗೋಲ್ಲ. ಹೆಚ್ಚು ನೆರವು ಪಡೆದು ಯೋಜನೆ ಮುಗಿಸಲಿಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com