ಡಿಕೆಶಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಸಿದ್ದರಾಮಯ್ಯ ಹೊಸ ಸೂತ್ರವೇನು ಗೊತ್ತೆ?

ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಹೊಸ ತಿರುವು ಸಿಗುವ ಲಕ್ಷಣ ಕಾಣಿಸಿದೆ. ಮೂಲ ವಲಸೆ ಎಂದು ಕಿತ್ತಾಡುತ್ತಿದ್ದವರೀಗ ಒಂದಾಗುವಂತೆ ಕಾಣುತ್ತಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಹೊಸ ತಿರುವು ಸಿಗುವ ಲಕ್ಷಣ ಕಾಣಿಸಿದೆ. ಮೂಲ ವಲಸೆ ಎಂದು ಕಿತ್ತಾಡುತ್ತಿದ್ದವರೀಗ ಒಂದಾಗುವಂತೆ ಕಾಣುತ್ತಿದೆ.

ಮಾಜಿ ಸಂಸದ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿರುವ ವಿಪಕ್ಷ ಸಿದ್ದರಾಮಯ್ಯ ಇದಕ್ಕಾಗಿ ಷರತ್ತು ಬದ್ಧ ಸಹಮತ ವ್ಯಕ್ತಪಡಿಸಿದ್ದಾರೆ.

ಉಪಹಾರ ಸೇವನೆಯ ನೆಪದಲ್ಲಿ ಸಿದ್ದರಾಮಯ್ಯ ನಿನ್ನೆ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, “ಪಕ್ಷದ ಜವಾಬ್ದಾರಿಯನ್ನು ನೀವೆ ವಹಿಸಿಕೊಳ್ಳಿ. ನೀವು ಅಧ್ಯಕ್ಷರಾದರೆ ನಾನು ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರೆಯುತ್ತೇನೆ. ನೀವು ಅಧ್ಯಕ್ಷರಾದರೆ ಅಹಿಂದ ಮತಗಳು ಮತ್ತೆ ಕಾಂಗ್ರೆಸ್ ಪಕ್ಷದ ಕಡೆಗೆ ವಾಲುತ್ತದೆ.

ಯಡಿಯೂರಪ್ಪ ಅವರನ್ನು ಜೈಲಿಗೆ ಹೋಗಿ ಬಂದವರು ಎಂದು ನಾವು ಆರೋಪ ಮಾಡಿದ್ದೇವೆ. ಹೀಗಾಗಿ ಜೈಲಿಗೆ ಹೋಗಿ ಬಂದಿರುವ ಡಿ.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ, ಜನರ ನಡುವೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಡಿಕೆಶಿ ಅವರನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟ.

ಹೀಗಾಗಿ ನೀವೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಿರಿ, ಡಿ.ಕೆ. ಶಿವಕುಮಾರ್ ಮತ್ತು ಪರಮೇಶ್ವರ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಲಿ ಎಂದು” ಎಂದು ಸಿದ್ದರಾಮಯ್ಯ ಖರ್ಗೆಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇಷ್ಟು ದಿನ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಮತ್ತಷ್ಟು ಸಂಘಟನೆಯಾಗಲಿದೆ ಎನ್ನುತ್ತಿದ್ದರು. ಇದೇ ನೆಪದಲ್ಲಿ ಎಂ.ಬಿ. ಪಾಟೀಲ್ ಪರ ಹೈಕಮಾಂಡ್​ ಬಳಿ ಸಾಕಷ್ಟು ಲಾಭಿ ಮಾಡಿದ್ದರು.

ಆದರೆ, ಡಿ.ಕೆ. ಶಿವಕುಮಾರ್​ ಅವರನ್ನು ಪಕ್ಷದ ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಈ ಸೂತ್ರ ತಮ್ಮ ಕೈ ಹಿಡಿಯುವುದಿಲ್ಲ ಎಂಬುದು ಮನದಟ್ಟಾಗುತ್ತಿದ್ದಂತೆ, ಇದೀಗ ಅವರು ಖರ್ಗೆ ಪರ ಬ್ಯಾಟ್​ ಬೀಸುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಉತ್ತರ ನೀಡಬೇಕಾದ ಕಾಂಗ್ರೆಸ್​ ಹೈಕಮಾಂಡ್​ ಮಾತ್ರ ದೀರ್ಘ ಮೌನಕ್ಕೆ ಶರಣಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com