ಒಕ್ಕಲಿಗ ಅಸ್ಮಿತೆ ಪ್ರಶ್ನೆ ಹುಟ್ಟಿದ್ದೇಕೆ? ಡಿಕೆಶಿಯಿಂದ ಗೌಡರ ಕುಟುಂಬದ ಓಲೈಕೆ? ಎಚ್ ಡಿಕೆ 'ಟ್ರಂಪ್ ಕಾರ್ಡ್'!

ಸಮುದಾಯದ ಬಲದಿಂದ ನಾಯಕರಾಗಿ ಹೊರಹೊಮ್ಮಿದವರು ಚುನಾವಣೆಯಲ್ಲಿ ಸೋತ ಬಳಿಕವೂ ದೀರ್ಘಕಾಲ ತಮ್ಮ ಗುರುತು ಉಳಿಸಿಕೊಂಡಿದ್ದಾರೆ. ಈ ಸಾಲಿಗೆ ಒಕ್ಕಲಿಗ ಸಮುದಾಯದ ಎಚ್. ಡಿ. ದೇವೇಗೌಡ, ಹಿಂದುಳಿದ ಸಮುದಾಯದ ಕುರುಬ ಜನಾಂಗಕ್ಕೆ ಸೇರಿದ ಸಿದ್ದರಾಮಯ್ಯ,
ಒಕ್ಕಲಿಗ ನಾಯಕರು
ಒಕ್ಕಲಿಗ ನಾಯಕರು

ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯವಾಗಿ ಮೇಲೇರಬೇಕಾದರೆ ವರಿಷ್ಠರ ಕೃಪಾಕಟಾಕ್ಷಕ್ಕಿಂತ ಜಾತಿ, ಸಮುದಾಯಗಳ ಬೆಂಬಲ ಬೇಕು ಎಂಬುದು ರಾಜಕಾರಣದಲ್ಲಿ ಸಾಬೀತಾದ ಸತ್ಯ. ಧರ್ಮ, ಜಾತಿ ಮೀರಿ ಬೆರಳೆಣಿಕೆಯಷ್ಟು ನಾಯಕರು ಮುಂಚೂಣಿಗೆ ಬಂದರಾದರೂ ಹೆಚ್ಚು ಕಾಲ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಲಾಗಲಿಲ್ಲ.

ಅದೇ ಜಾತಿ ಸಮುದಾಯದ ಬಲದಿಂದ ನಾಯಕರಾಗಿ ಹೊರಹೊಮ್ಮಿದವರು ಚುನಾವಣೆಯಲ್ಲಿ ಸೋತ ಬಳಿಕವೂ ದೀರ್ಘಕಾಲ ತಮ್ಮ ಗುರುತು ಉಳಿಸಿಕೊಂಡಿದ್ದಾರೆ. ಈ ಸಾಲಿಗೆ ಒಕ್ಕಲಿಗ ಸಮುದಾಯದ ಎಚ್. ಡಿ. ದೇವೇಗೌಡ, ಹಿಂದುಳಿದ ಸಮುದಾಯದ ಕುರುಬ ಜನಾಂಗಕ್ಕೆ ಸೇರಿದ ಸಿದ್ದರಾಮಯ್ಯ, ಲಿಂಗಾಯತ ಸಮುದಾಯದ ಬಿ. ಎಸ್. ಯಡಿಯೂರಪ್ಪ ಜನನಾಯಕರಾಗಿ ಸಾಕ್ಷಿಯಾಗಿದ್ದಾರೆ. ಈಗ ಇಂತಹದ್ದೇ ಒಂದು ಅಸ್ಮಿತೆ ಒಕ್ಕಲಿಗ ಸಮುದಾಯದ್ದಾಗಿದೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ಒಕ್ಕಲಿಗ ಅಸ್ಮಿತೆಯ ಪ್ರಶ್ನೆ ತಲೆದೋರಿದ್ದು, ರಾಜಕಾರಣದಲ್ಲಿ ಪ್ರಭಾವಿಯಾಗಿರುವ ಈ ಸಮುದಾಯಕ್ಕೆ ನಾಯಕನ್ಯಾರು ಎಂಬ ಜಿಜ್ಞಾಸೆ ಹುಟ್ಟುಕೊಂಡಿದೆ. ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಈ ಮೂರು ಜಾತಿಗಳು ರಾಜಕೀಯವಾಗಿ ಪ್ರಭಾವಿಯಾಗಿರುವ, ಅಧಿಕಾರದ ಆಯಕಟ್ಟಿನ ಜಾಗದಲ್ಲಿ ಆಸೀನವಾಗಿವೆ.

ಲಿಂಗಾಯತ ನಾಯಕರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಂಬಿತರಾಗಿದ್ದಾರೆ‌. ಈ ಬಲವನ್ನು ಕುಗ್ಗಿಸಲು ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ವೀರಶೈವ ಪ್ರತ್ಯೇಕ ಲಿಂಗಾಯತ ಧರ್ಮದ ಚೆಂಡನ್ನು ಉರುಳಿಸಿದ್ದರಾದರೂ ಕೇಂದ್ರದ ಅಂಗಳದಲ್ಲಿ ಚೆಂಡು ಹಾಗೆಯೇ ಬಿದ್ದು ಇವರ ತಂತ್ರಗಳು 2018ರಲ್ಲಿ ಫಲಿಸಲಿಲ್ಲ. ಲಿಂಗಾಯತ ನಂತರ ಪ್ರಬಲ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಗ ನಾಯಕತ್ವ ಕಳೆದೊಂದು ದಶಕದಿಂದ ಕ್ಷೀಣಿಸಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಬಿಜೆಪಿ ಒಕ್ಕಲಿಗ ಭದ್ರಕೋಟೆಯನ್ನು ಒಡೆದುಹಾಕಿದೆ. 2014ರಲ್ಲಿ ನರೇಂದ್ರ ಮೋದಿ "ತಮ್ಮ ಸ್ಪರ್ಧೆ ಗುಜರಾತಿನ ಅಸ್ಮಿತೆಯ ಹೋರಾಟ. ಗುಜರಾತಿನ ಮಣ್ಣಿನ ಮಗ ನಾನು ನನಗೆ ಮಾಡುವ ಅವಮಾನ ಗುಜರಾತಿಗೆ ಮಾಡುವ ಅವಮಾನ ಎಂಬ ಟ್ರಂಪ್ ಕಾರ್ಡ್ ಬಳಸಿದ್ದರು" ಈಗ ಇದೇ ಮಾದರಿಯ ಟ್ರಂಪ್ ಕಾರ್ಡ್ ಬಳಕೆಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಬಳಸಲು ಮುಂದಾಗಿದ್ದಾರೆ.

ಬಿಜೆಪಿಯಲ್ಲಿ ಆರ್.ಅಶೋಕ್, ಸಿ.ಟಿ.ರವಿ ಸ್ಥಾನಮಾನ ಸಿಕ್ಕಿತ್ತಾದರೂ ಸಮುದಾಯದ ನಾಯಕರಾಗುವ ಚರಿಷ್ಮಾ ಹೊಂದಲಿಲ್ಲ. ಸಚಿವ ಸಿ.ಟಿ.ರವಿ ಜಾತಿ ಜೊತೆಗೆ ಗುರುತಿಸಿಕೊಳ್ಳದೇ ಅರ್‌ಎಸ್‌ಎಸ್, ಹಿಂದುತ್ವದ ಮೂಲಕ ಮುನ್ನಲೆಗೆ ಬಂದವರಾದ್ದರಿಂದ ಸಮುದಾಯ ಅವರನ್ನು ನಾಯಕ‌ನೆಂದು ಅಪ್ಪಿಕೊಳ್ಳಲಿಲ್ಲ. ಇಷ್ಟು ವರ್ಷ ಬಿಜೆಪಿ ಆರ್.ಅಶೋಕ್ ನಾಯಕರನ್ನು ಒಕ್ಕಲಿಗ ನಾಯಕನೆಂದು ನಡೆಸಿದ ಪ್ರಯತ್ನ ಕೈಹಿಡಿಯಲಿಲ್ಲ. ಹೀಗಾಗಿ ಒಕ್ಕಲಿಗ ಸಮುದಾಯದವರೇ ಆದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರನ್ನು ಒಕ್ಕಲಿಗ ನಾಯಕನೆಂದು ಮುನ್ನಲೆಗೆ ತರುವ ಪ್ರಯತ್ನವನ್ನು ಆರಂಭಿಸಿದೆ.

ಲಿಂಗಾಯತರೆಲ್ಲ ಬಿಜೆಪಿಯ ಜೊತೆಗಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಒಕ್ಕಲಿಗ ಸಮುದಾಯ ಈ ಹಿಂದೆ ಇತ್ತು. ಕಳೆದ ಹತ್ತು ವರ್ಷದಿಂದ ಒಕ್ಕಲಿಗ ಶಕ್ತಿ ದುರ್ಬಲವಾಗಿದೆ. ಕಳೆದ 20-25 ವರ್ಷದಿಂದ ಒಕ್ಕಲಿಗ ಭದ್ರಕೋಟೆ ಒಗ್ಗಟ್ಟನ್ನು‌ ಬಿಜೆಪಿ ವ್ಯವಸ್ಥಿತವಾಗಿ ಒಡೆದುಹಾಕಿದೆ.ಕಾಂಗ್ರೆಸಿನ‌ ಡಿ.ಕೆ.ಶಿವಕುಮಾರ್ ಗೂ ಒಕ್ಕಲಿಗ ಅಳಿವು ಉಳಿವಿನ ಪ್ರಶ್ನೆಯಾಗಿದೆ. ತಮ್ಮ ಮೇಲಿನ ಐಟಿ ದಾಳಿಯನ್ನು ಒಕ್ಕಲಿಗ ವಿರುದ್ಧದ ಸಂಚು ಎಂದು ಶಿವಕುಮಾರ್ ಬಿಂಬಿಸುತ್ತಿದ್ದಾರೆ.

ಒಕ್ಕಲಿಗ ಸಮುದಾಯದಲ್ಲಿ ಪ್ರಶ್ನಾತೀತ ನಾಯಕನ‌ ಕೊರತೆ ಕಾಣುತ್ತಿದ್ದು ಸ್ಥಾನ ತುಂಬುವ ಪ್ರಯತ್ನ ಸಾಗಿದೆ. ಈ ರಾಜಕೀಯ ಸೂಕ್ಷ್ಮ ಅರಿತೇ ಶಿವಕುಮಾರ್ ಎಚ್ಚರಿಕೆಯಿಂದ ದೃಢ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ದಶಕಗಳ ಹಿಂದೆ ಒಕ್ಕಲಿಗರ ನಾಯಕ ಎನಿಸಿಕೊಂಡಿದ್ದ ಎಸ್. ಎಂ. ಕೃಷ್ಣ ಗರಡಿಯಲ್ಲಿ ಪಳಗಿದ ಶಿವಕುಮಾರ್ ಅವರು ಕೃಷ್ಣ ಅವರ ರಾಜಕೀಯ ಪಟ್ಟುಗಳನ್ನು ಬಲ್ಲವರು. ಜಾತಿಯಲ್ಲಿ ಒಕ್ಕಲಿಗರೂ ಆಗಿರುವುದರಿಂದ ಶಿವಕುಮಾರ್ ಸಹಜವಾಗಿಯೇ ಒಕ್ಕಲಿಗ ನಾಯಕನಾಗಿ ಹೊರಹೊಮ್ಮುವ ಕನಸು ಕಾಣುತ್ತಿದ್ದವರು. ಈ ಮಧ್ಯೆ ದೇವೇಗೌಡರ ಕುಟುಂಬದೊಂದಿಗಿನ ವೈರತ್ವ ಇದ್ದುದರಿಂದ ಒಕ್ಕಲಿಗ ಸಮುದಾಯದವರು ಶಿವಕುಮಾರ್ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲಿಲ್ಲ. 

ತಮ್ಮ ನಾಯಕತ್ವವನ್ನು ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಹಳೇ ಮೈಸೂರು ಭಾಗಕ್ಕೆ ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಎಲ್ಲಾ ರಾಜಕೀಯ ಸೂಕ್ಷ್ಮದಿಂದ ಪಾಠ ಕಲಿತ ಶಿವಕುಮಾರ್ ಎಚ್ಚರಿಕೆಯಿಂದ ದೃಢ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ಅದಕ್ಕಾಗಿ ತಮ್ಮ ಪಕ್ಷದವರೇ ಆಗಿರುವ ಸಿದ್ದರಾಮಯ್ಯ ಅವರನ್ನು ಹಣಿಯುವ ಪ್ರಯತ್ನದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸಂಬಂಧಿಸಿದಂತೆ ದೇವೇಗೌಡ ಮತ್ತು ಕುಟುಂಬದವರನ್ನು ಸಮರ್ಥಿಸಿಕೊಳ್ಳುವ ಕೆಲಸಕ್ಕೆ ಶಿವಕುಮಾರ್ ಕುಮಾರಸ್ವಾಮಿ ನಡುವಿನ ಸಂಬಂಧ 2018ರ ಚುನಾವಣೆ ಸೋತ ಬಳಿಕ ಚಿಗುರಿದೆ.

ವೈಯಕ್ತಿಕವಾಗಿ ಒಕ್ಕಲಿಗ ಸಮುದಾಯ ಒಪ್ಪಿಕೊಳ್ಳುವ ವರ್ಚಸ್ಸು ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡ ಅವರಿಗಿತ್ತು. ಈಗ ಅವರ ಸಮಯ ವರ್ಚಸ್ಸು ಮುಗಿದೆ. ಇಂತಹ ವರ್ಚಸ್ಸು ಈಗ ಕುಮಾರಸ್ವಾಮಿ, ಶಿವಕುಮಾರ್ ಹೊಂದಲೆತ್ನಿಸುತ್ತಿದ್ದಾರೆ. ಶಿವಕುಮಾರ್‌ಗಿಂತಲೂ ಕುಮಾರಸ್ವಾಮಿ ಬಹಳ ಅಗ್ರೇಸಿವ್ ಆಗಿ ಒಕ್ಕಲಿಗ ದಾಳವನ್ನು ಉರುಳಿಸುತ್ತಿದ್ದಾರೆ. ಒಕ್ಕಲಿಗರ ನಾಯಕನ ಸ್ಥಾನ ತುಂಬಲು ಈಗ ಪೈಪೋಟಿ ಅಸ್ಮಿತೆಯ ಪ್ರಶ್ನೆ ಹುಟ್ಟಿಕೊಂಡಿದೆ.

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಿಂದೆ ಡಿ.ಕೆ. ಶಿವಕುಮಾರ್‌ ಉಪಾಧ್ಯಕ್ಷರಾಗಿದ್ದರು. ಸಿದ್ದರಾಮಯ್ಯ ಮೇಲೆ ಒತ್ತಡ ಹೇರುವ ಮೂಲಕ ಪ್ರಾಧಿಕಾರ ರಚನೆ ಮಾಡಿಸುವಲ್ಲಿ ಶಿವಕುಮಾರ್‌ ಯಶಸ್ವಿಯಾಗಿದ್ದರು. ಈ ಮೂಲಕ ಒಕ್ಕಲಿಗ ಸಮುದಾಯಕ್ಕೆ ತಾವೇ ಭವಿಷ್ಯದ ನಾಯಕ ಎಂದು ಬಿಂಬಿಸಿಕೊಳ್ಳುವ ಲೆಕ್ಕಾಚಾರವಿತ್ತು.

ಆದರೆ ಮೈತ್ರಿ ಸರಕಾರ ಪತನ ಬಳಿಕ ಯಡಿಯೂರಪ್ಪ ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಉಪಮುಖ್ಯಮಂತ್ರಿ ಡಾ. ಅಶ್ವಥ್‌ ನಾರಾಯಣ್‌ ಉಪಾಧ್ಯಕ್ಷರಾಗಿದ್ದಾರೆ. ಹೀಗಾಗಿ ಪ್ರಾಧಿಕಾರದ ಮೂಲಕ ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿಯಾಗಿಸುವಂಥ ಚಟುವಟಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಂಪೇಗೌಡರ ಬೃಹತ್‌ ಪ್ರತಿಮೆ ನಿರ್ಮಿಸುವ ಬಿಜೆಪಿ ಸರ್ಕಾರದ ಸಂಕಲ್ಪಈ ಸಮುದಾಯದ ವಿಶ್ವಾಸ ಗಳಿಸುವ ಲೆಕ್ಕಾಚಾರ ಕಮಲಪಾಳಯದ್ದಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಅಶ್ವತ್ಥ ನಾರಾಯಣ್ ಅವರನ್ನು ಕುಮಾರಸ್ವಾಮಿ ವಿರುದ್ಧ ಒಕ್ಕಲಿಗ ನಾಯಕನೆಂದು ಬಿಂಬಿಸಿ ಮತಗಳಿಕೆಯ ತಂತ್ರ‌ ಕಮಲ‌ನಾಯಕರದ್ದಾಗಿದೆ ಎನ್ನಲಾಗಿದೆ.

ಜೆಡಿಎಸ್ ಪಕ್ಷವನ್ನು ಬಲಪಡಿಸುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬಲ ಪ್ರದರ್ಶಿಸದೇ ಹೋದಲ್ಲಿ ತೆನೆಹೊತ್ತ ಮಹಿಳೆಯ ರಾಜಕೀಯ ಭವಿಷ್ಯ ಕಮರಿಹೋಗುವ ಭಯ ಕುಮಾರಸ್ವಾಮಿಯದ್ದು. ಹೀಗಾಗಿ ಇಷ್ಟು ದಿನ ಜಾತ್ಯತೀತತೆ ಎನ್ನುತ್ತಿದ್ದವರು ಇತ್ತೀಚೆಗೆ ಬಹಿರಂಗವಾಗಿ ಒಕ್ಕಲಿಗ ಸಮುದಾಯದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com