ಬಾಗಲಕೋಟೆ ಕಮಲ ಪಡೆಗೆ ಎಸ್.ಟಿ.ಪಾಟೀಲ ನೂತನ ಸಾರಥಿ

ರಾಜ್ಯ ಸಚಿವ ಸಂಪುಟದ ಹಗ್ಗ ಜಗ್ಗಾಟದ ಮಧ್ಯೆಯೇ ಕಗ್ಗಂಟಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ಪಟ್ಟ ಕೊನೆಗೂ ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಎಸ್.ಟಿ. ಪಾಟೀಲ ನೇಮಕಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಟಿ. ಪಾಟೀಲ
ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಟಿ. ಪಾಟೀಲ

ಬಾಗಲಕೋಟೆ : ರಾಜ್ಯ ಸಚಿವ ಸಂಪುಟದ ಹಗ್ಗ ಜಗ್ಗಾಟದ ಮಧ್ಯೆಯೇ ಕಗ್ಗಂಟಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ಪಟ್ಟ ಕೊನೆಗೂ ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಎಸ್.ಟಿ. ಪಾಟೀಲ ನೇಮಕಗೊಂಡಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಗಾದಿಗೆ ಐದಾರು ಜನ ಯುವ ಮುಖಂಡರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರೂ ಎಸ್.ಟಿ. ಪಾಟೀಲರ ನೇಮಕಕ್ಕೆ ಒಲವು ಹೊಂದಿದ್ದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹಾಂತೇಶ ಮಮದಾಪೂರ, ಮಹಾಂತೇಶ ಕೋಲ್ಕಾರ ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಹಾಂತೇಶ ಮಮದಾಪೂರ ಅವರನ್ನು ರಾಜಕೀಯವಾಗಿ ಹಣಿಯಲು ಬಾದಾಮಿಯ ಕ್ಷೇತ್ರದ ಮುಖಂಡರೆಲ್ಲ ಒಟ್ಟಾಗಿ ಎಸ್.ಟಿ.ಪಾಟೀಲರ ಪರ ನಿಂತಿದ್ದರು. ಆ ಮೂಲಕ ಅವರೆಲ್ಲ ಮಮದಾಪುರ ಅವರನ್ನು ರಾಜಕೀಯವಾಗಿ ಹಣಿಯುವಲ್ಲಿ ಯಶಸ್ಸು ಕಂಡಿದ್ದಾರೆ. ಬಾದಾಮಿ ಮುಖಂಡರ ತಂತ್ರಕ್ಕೆ ಇತರ ಕ್ಷೇತ್ರಗಳ ಶಾಸಕರೂ ಸಾಥ್ ನೀಡಿದ್ದರ ಪರಿಣಾಮ ಜಿಲ್ಲಾಧ್ಯಕ್ಷ ಸ್ಥಾನ ಮಮದಾಪುರ ಕೈ ತಪ್ಪಿ ಎಸ್.ಟಿ.ಪಾಟೀಲರ ಪಾಲಾಗಿದೆ

ನಿಕಟಪೂರ್ವ ಅಧ್ಯಕ್ಷರು ಜಿಲ್ಲೆಯ ಜಮಖಂಡಿ ವಿಭಾಗದವರು ಆಗಿದ್ದರು. ಈ ಬಾರಿ ಬಾಗಲಕೋಟೆ ವಿಭಾಗದವರು ಆಗಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು.

ಜಿಲ್ಲಾಧ್ಯಕ್ಷರ ನೇಮಕಕ್ಕೆ ವಯಸ್ಸಿನ ನಿರ್ಬಂಧ ಹಾಕಿದ್ದರ ಹಿನ್ನೆಲೆಯಲ್ಲಿ ಕೋರ ಕಮೀಟಿಯಲ್ಲಿಯೇ ಸಾಕಷ್ಟು ಜನ ಆಕಾಂಕ್ಷಿಗಳು ಸ್ಪರ್ಧೆಯಿಂದ ಔಟ್ ಆಗಿದ್ದರು. ವಯಸ್ಸಿನ ನಿರ್ಬಂಧಕ್ಕೂ ಮುನ್ನ ರಾಜು ರೇವಣಕರ ಮತ್ತು ರಾಜು ನಾಯ್ಕರ ಹೆಸರು ಪ್ರಬಲವಾಗಿ ಕೇಳಿ ಬಂದಿದ್ದವು. ಪಕ್ಷದ ನಾನಾ ಮಾನದಂಡಗಳ ಹಿನ್ನೆಲೆಯಲ್ಲಿ ಉಭಯತರು ಸ್ಪರ್ಧೆಯಿಂದ ಹೊರ ಬಿದ್ದಿದ್ದರು.

ಕೋರ್  ಕಮೀಟಿಯಿಂದ ಪಕ್ಷದ ಹೈ ಕಮಾಂಡ್‌ಗೆ ಕಳುಹಿಸಲ್ಪಟ್ಟ ಹೆಸರುಗಳ ಪೈಕಿ ಎಸ್.ಟಿ. ಪಾಟೀಲರ ಪರವಾಗಿ ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಬಿ.ಶ್ರೀರಾಮುಲು ಮೊದಲಾದವರು ಬ್ಯಾಟಿಂಗ್ ಮಾಡಿದ ಪರಿಣಾಮ ಮಮದಾಪುರಗೆ ಹಿನ್ನೆಡೆ ಆಗಿ ಪಾಟೀಲರ ಹೆಗಲಿಗೆ ಜಿಲ್ಲಾಧ್ಯಕ್ಷ ಸ್ಥಾನದ ಅವಕಾಶ ಪ್ರಾಪ್ತವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ

ಸಹಕಾರಿ ಸಂಘಗಳ ಚುನಾವಣೆಗಳು ನಡೆಯುತ್ತಿದ್ದು, ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿವೆ.  ಈ ಚುನಾವಣೆಗಳಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ಮಹತ್ತರವಾಗಿದೆ. ಆರಂಭದಲ್ಲೆ ಎದುರಾಗಲಿರುವ ಆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.ಜಿಲ್ಲಾ ರಾಜಕಾರಣಕ್ಕೆ ಹೊಸಬರಾಗಿರುವ ಎಸ್.ಟಿ. ಪಾಟೀಲ ಪಕ್ಷದಲ್ಲಿನ ಆಂತರಿಕ ಬಣ ರಾಜಕಾರಣವನ್ನು ಹೇಗೆ ಸರಿದೂಗಿಸಿಕೊಂಡು ಹೋಗಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ
  
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಚಿವ ಬಿ. ಶ್ರೀರಾಮುಲು ಅವರ ಪರವಾಗಿ ಅತ್ಯಂತ ಮುತುವರ್ಜಿ ವಹಿಸಿ ಚುನಾವಣೆ ಪ್ರಚಾರ ಕಾರ್ಯ ಕೈಗೊಳ್ಳುವ ಮೂಲಕ ರಾಮುಲು ಅವರ ಶಿಷ್ಯ ಎಂದೇ ಇವರನ್ನು ಗುರುತಿಸಲಾಗುತ್ತಿದೆ. ಅದರ ಪರಿಣಾಮವೇ ಜಿಲ್ಲಾಧ್ಯಕ್ಷ ಸ್ಥಾನದ ಉಡುಗೋರೆ ಸಿಕ್ಕಿದೆ ಎಂದು ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಬಣ್ಣಿಸಲಾಗುತ್ತಿದೆ

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಸ್.ಟಿ. ಪಾಟೀಲ ನೇಮಕಗೊಂಡಿದ್ದು ಮಹಾಂತೇಶ ಮಮದಾಪುರ ಪಾಲಿಗೆ ಭಾರಿ ಹಿನ್ನೆಡೆ ಆಗಿದೆ. ಮಮದಾಪುರ ಅವರನ್ನು ರಾಜಕೀಯವಾಗಿ ಮಣಿಸಲೇಂದೇ ಪಕ್ಷದಲ್ಲಿನ ಪ್ರಬಲ ಶಕ್ತಿಗಳು ಎಸ್.ಟಿ. ಪಾಟೀಲ ಪರ ಬ್ಯಾಟಿಂಗ್ ಮಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com