ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್ ಗೆ ವಿಜಯಮಾಲೆ
ಭಾರೀ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಗೆಲುವು ಸಾಧಿಸಿದ್ದಾರೆ. ಕಳೆದೆರಡು ಬಾರಿ ಜಿಪಂ ಅಧ್ಯಕ್ಷ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಬಿಜೆಪಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
Published: 01st July 2020 07:57 AM | Last Updated: 01st July 2020 07:57 AM | A+A A-

ವಿಜಯಪುರ ಜಿ.ಪಂ ಅಧ್ಯಕ್ಷೆ ಸುಜಾತ ಕಳ್ಳಿಮನಿ
ವಿಜಯಪುರ: ಭಾರೀ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಕಳ್ಳಿಮನಿ ಗೆಲುವು ಸಾಧಿಸಿದ್ದಾರೆ. ಕಳೆದೆರಡು ಬಾರಿ ಜಿಪಂ ಅಧ್ಯಕ್ಷ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಬಿಜೆಪಿಗೆ ಮತ್ತೊಮ್ಮೆ ನಿರಾಸೆಯಾಗಿದೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತ ಕಳ್ಳಿಮನಿ 22 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ 20 ಮತಗಳನ್ನು ಪಡೆಯುವುದರೊಂದಿಗೆ ಸೋಲನುಭವಿಸಿದರು. ಸೋಮವಾರ ಸಂಜೆ ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಅಧ್ಯಕ್ಷ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಉಮೇಶ ಕೋಳಕೂರ ರಾಜೀನಾಮೆ ನೀಡಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಆದರೂ, ಹೈ ವೋಲ್ಟೇಜ್ ಕದನದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಒಟ್ಟು 42 ಸದಸ್ಯರಿರುವ ಜಿಪಂನಲ್ಲಿ ಬಿಜೆಪಿ 20, ಕಾಂಗ್ರೆಸ್ 18, ಜೆಡಿಎಸ್ 3, ಪಕ್ಷೇತರ 1 ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ 22 ಸದಸ್ಯರ ಸಂಖ್ಯಾಬಲ ಬೇಕಿತ್ತು. ಈ ಕಾರಣದಿಂದ ಬಹುಮತದ ಸಂಖ್ಯಾಬಲಕ್ಕೆ ಸದಸ್ಯರ ಆಪರೇಷನ್ ಎರಡೂ ಪಕ್ಷಗಳಿಗೆ ಅನಿವಾರ್ಯವಾಗಿತ್ತು. ಆದರೆ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಬಾಹ್ಯ ಬೆಂಬಲದಿಂದ ಕಾಂಗ್ರೆಸ್‌ನ ಸುಜಾತಾ ಕಳ್ಳಿಮನಿ ವಿಜಯಪತಾಕೆ ಹಾರಿಸಿದ್ದಾರೆ. ಗೆಲುವಿನ ನಂತರ ಮಾತನಾಡಿದ ಸುಜಾತಾ ಕಳ್ಳಿಮನಿ ತಮ್ಮ ಗೆಲುವಿಗೆ ಸಹಾಯ ಮಾಡಿದ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.