ಎಂಟಿಬಿ ನಾಗರಾಜ್ ಸೇರಿ ಬಿಜೆಪಿಯ ನಾಲ್ವರು ಪರಿಷತ್ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ
ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿರುವ ಎನ್. ನಾಗರಾಜು (ಎಂ.ಟಿ.ಬಿ), ಪ್ರತಾಪ್ ಸಿಂಹ ನಾಯಕ್. ಕೆ, ಆರ್. ಶಂಕರ್, ಸುನೀಲ್ ವಲ್ಯಾಪುರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
Published: 03rd July 2020 07:35 PM | Last Updated: 03rd July 2020 07:35 PM | A+A A-

ಪ್ರಮಾಣ ವಚನ ಸ್ವೀಕರಿಸಿದ ನಾಲ್ವರು ಬಿಜೆಪಿ ಸದಸ್ಯರು
ಬೆಂಗಳೂರು: ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿರುವ ಎನ್. ನಾಗರಾಜು (ಎಂ.ಟಿ.ಬಿ), ಪ್ರತಾಪ್ ಸಿಂಹ ನಾಯಕ್. ಕೆ, ಆರ್. ಶಂಕರ್, ಸುನೀಲ್ ವಲ್ಯಾಪುರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಸೌಧದಲ್ಲಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್‍ನ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಆರ್.ಶಂಕರ್, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಸಚಿವರ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದ್ದರಿಂದ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ಎಂಟಿಬಿ ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಪರಿಷತ್ ಸದಸ್ಯರಾಗಿ ಮಾಡಿದ್ದಾರೆ. ಮುಂದೆ ಸಚಿವ ಸ್ಥಾನ ನೀಡುವ ಭರವಸೆ ಇರುವುದಾಗಿ ಹೇಳಿದರು.ಕಾರಣಾಂತರಗಳಿಂದ ಎಚ್.ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಸ್ಥಾನ ಸಿಗಲಿದೆ. ಈ ಬಗ್ಗೆ ತಾವು ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ ಎಂದರು.
ಸುನಿಲ್ ವಲ್ಯಾಪುರೆ ಮಾತನಾಡಿ, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸರ್ಕಾರ ಚೆನ್ನಾಗಿ ನಡೆಯಬೇಕು. ಅದಕ್ಕೆ ನಾವು ಸಹಕಾರ ನೀಡುತ್ತೇವೆ. ತಮ್ಮ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಸರ್ಕಾರದ ಜೊತೆಗೆ ನಾವಿರುತ್ತೇವೆ ಎಂದು ಹೇಳಿದರು.
ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಾಯ ಆಗಿದೆ ಎನ್ನುವುದನ್ನು ತಾವು ಒಪ್ಪುವುದಿಲ್ಲ. ಅಂತಹ ಘಟನೆಗಳು ತಮ್ಮ ಗಮನಕ್ಕೆ ಬಂದಿಲ್ಲ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದರು.