ಕೆಪಿಸಿಸಿ ಅಧ್ಯಕ್ಷ ಆಯ್ತು, ಈಗ ಕಾಂಗ್ರೆಸ್ ಯುವಘಟಕ ಅಧ್ಯಕ್ಷರ ಸ್ಥಾನಕ್ಕೆ ಲಾಬಿ ಶುರು!

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ನೇಮಕಗೊಂಡ ಬಳಿಕ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. 

Published: 11th July 2020 08:02 AM  |   Last Updated: 11th July 2020 02:15 PM   |  A+A-


soumya reddy and Nalapad

ನಲಪಾಡ್ ಹಾಗೂ ಸೌಮ್ಯ ರೆಡ್ಡಿ

Posted By : Manjula VN
Source : The New Indian Express

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ನೇಮಕಗೊಂಡ ಬಳಿಕ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. 

ಹಿರಿಯ ಶಾಸಕರ ಮಕ್ಕಳು ಹಾಗೂ ನಾಯಕರ ಬೆಂಬಲಿಗರು ಯುವಘಟಕದ ಸಾರಥ್ಯ ವಹಿಸಿಕೊಳ್ಳಲು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದಾರೆ. 

ಬಸನಗೌಡ ಬಾದರ್ಲಿಯವರ ಅಧಿಕಾರಾವಧಿ ಅಂತ್ಯಗೊಂಡಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಕರ್ನಾಟಕ ಕಾಂಗ್ರೆಸ್ ಯುವಘಟಕ ಅಧ್ಯಕ್ಷ ಸ್ಥಾನ ಖಾಲಿಯಾಗಿಯೇ ಉಳಿದಿದೆ. ಹೀಗಾಗಿ ಯುವಘಟಕದ ಜವಾಬ್ದಾರಿ ವಹಿಸಿಕೊಳ್ಳಲು ಹಲವು ನಾಯಕರು ಈಗಾಗಲೇ ಲಾಬಿ ಶುರು ಮಾಡಿದ್ದಾರೆ.

ಶಾಸಕ ಕೆ.ಎನ್ ರಾಜಣ್ಣ ತಮ್ಮ ಪುತ್ರ ರಾಜೇಂದ್ರ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ತಮ್ಮ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯಾ ರಾಮಲಿಂಗಾ ರೆಡ್ಡಿ, ಶಾಸಕ ಎನ್.ಎ, ಹ್ಯಾರಿಸ್ ಅವರು ಅವರ ಪುತ್ರ ಮುಹಮ್ಮದ್ ನಲಪಾಡ್'ಗಾಗಿ ಲಾಬಿ ನಡೆಸುತ್ತಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಕರ್ನಾಟಕ ಅಧ್ಯಕ್ಷ) ಎಚ್.ಎಸ್.ಮಂಜುನಾಥ್ ಕೂಡ ಇದ್ದಾರೆನ್ನಲಾಗುತ್ತಿದೆ. 

ರಾಷ್ಟ್ರೀಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಂಜುನಾಥ್ ಅವರು ಡಿ,ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಈ ನಡುವೆ ಸೌಮ್ಯಾ ಅವರಿಗೆ ಕಾಂಗ್ರೆಸ್ ಯುವ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಸೌಮ್ಯ ರೆಡ್ಡಿಯವರು ಶಾಸಕಿಯಾಗಿದ್ದು, ಒಂದು ವೇಳೆ ಯುವ ಅಧ್ಯಕ್ಷ ಸ್ಥಾನ ದೊರೆತರೆ ಮೊದಲ ರಾಜ್ಯ ಕಾಂಗ್ರೆಸ್ ಯುವ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಇನ್ನು ಯುವ ಅಧ್ಯಕ್ಷ ಹುದ್ದೆಗೆ 38 ವರ್ಷ ವಯೋಮಿತಿ ಎಂದು ಹೇಳಲಾಗುತ್ತಿದ್ದು, ಪಕ್ಷವು ಈ ಮಿತಯನ್ನು ಸಡಿಲಗೊಳಿಸಬಹುದು ಎಂದು ಮೂಲಗಳು ತಿಳಿಸಿವೆ. 

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿರುವ ಸಲೀಮ್ ಅಹ್ಮದ್ ಅವರು ಈ ಬಗ್ಗೆ ಮಾತನಾಡಿ, ಕರ್ನಾಟಕವಷ್ಟೇ ಅಲ್ಲದೆ ಹಲವು ರಾಜ್ಯಗಳಲ್ಲೂ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರ ನೇಮಕವಾಗಬೇಕಿದೆ. ಈ ಬಗ್ಗೆ ಎಐಸಿಸಿ ಭಾರತೀಯ ಯುವ ಕಾಂಗ್ರೆಸ್ ಘಟಕದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಿದೆ. ಪ್ರಸ್ತುತ ರಾಜ್ಯ ಯುವಕ ಕಾಂಗ್ರೆಸ್ ಘಟಕದ ಅಧ್ಯಕ್ಷತೆ ಕುರಿತು ಈ ವರೆಗೂ ಯಾವುದೇ ನಿರ್ಧಾರಗಳನ್ನೂ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. 

ಈಶ್ವರ್ ಖಂಡ್ರೆಯವರು ಮಾತನಾಡಿ, ಈ ಕುರಿತು ನಿರ್ಧಾರ ಐಎಸಿಸಿಗೆ ಬಿಟ್ಟದ್ದಾಗಿದೆ. ಪ್ರಕ್ರಿಯೆಗಳಿಗಾಗಿ ನಾವು ಕಾಯಬೇಕಿದೆ ಎಂದಿದ್ದಾರೆ. 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮಾತನಾಡಿ, ಪರಿಸ್ಥಿತಿ ಸೂಕ್ತವಾಗಿಲ್ಲ. ರಾಹುಲ್ ಗಾಂಧಿಯವರು ಚುನಾವಣೆಯ ಪರವಾಗಿದ್ದಾರೆ. ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಎಐಸಿಸಿ ಬಳಿ ಮಾತನಾಡಲಾಗುತ್ತಿದೆ. ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿ ಇರುವುದರಿಂದ ಚುನಾವಣೆ ನಡೆಸಲುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. 

ಯುಎನ್ಐ ಸುದ್ದಿಸಂಸ್ಥೆಯ ವರದಿಗಳ ಪ್ರಕಾರ...

ಯುವಘಟಕಕ್ಕೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯಾರೆಡ್ಡಿ, ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಮಗ ಎಂ.ಎಸ್. ರಕ್ಷಾ ರಾಮಯ್ಯ, ಶಾಸಕ ಎನ್.ಎ.ಹ್ಯಾರೀಸ್ ಪುತ್ರ ನಲಪಾಡ್, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತುಮಕೂರು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿಗ ಎನ್ಎಸ್ ಯುಐನ ಮಂಜುನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆಂದು ಹೇಳಲಾಗಿದೆ. 

ಇಂಡಿಯನ್ ಯೂತ್ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಎಂ.ಎಸ್. ರಕ್ಷಾ ರಾಮಯ್ಯ ಸೇವೆ ಸಲ್ಲಿಸಿರುವ ಅನುಭವವಿದೆ. ಸೌಮ್ಯಾರೆಡ್ಡಿ ಶಾಸಕಿಯಾಗಿರುವ ಜೊತೆಗೆ ಕೆಪಿಸಿಸಿ ಯುವಘಟಕದಲ್ಲಿ ಕಾರ್ಯದರ್ಶಿಯೂ ಹೌದು. ಮಿಥುನ್ ರೈ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರು. ಅಲ್ಲದೇ ದಕ್ಷಿಣ ಕನ್ನಡ ಭಾಗದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ರಾಜೇಂದ್ರ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದವರು. 

ನಲಪಾಡ್ ಸಂಘಟನಾ ಚತುರುನಾಗಿರುವುದರಿಂದ ಅಲ್ಪಸಂಖ್ಯಾತರ ಕಾಂಗ್ರೆಸ್ ಮುಖಂಡರು ನಲಪಾಡ್ ಪರ ವಕಾಲತ್ತು ಶುರುಮಾಡಿದ್ದಾರೆ. ಹ್ಯಾರೀಸ್ ಸಹ ಪುತ್ರನಿಗೆ ಜವಾಬ್ದಾರಿ ವಹಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಒತ್ತಡ ಹೇರುತ್ತಿದ್ದಾರೆ. ರಾಜಣ್ಣ ತುಮಕೂರಿನಲ್ಲಿ ಪರಮೇಶ್ವರ್ ಸೋಲಿನಲ್ಲಿ ಪಾತ್ರವಹಿಸಿದ್ದರು ಕೂಡ. ಅಲ್ಲದೇ ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡ ಲೋಕಸಭಾ ಸೋಲಿಗೂ ಕಾರಣರಾಗಿದ್ದವರು.

ಇನ್ನು ಕನಕಪುರ ಮೂಲದ ಕೆಂಪರಾಜು, ಎನ್ಎಸ್ ಯುಐನ ಮಂಜುನಾಥ್ ಡಿ.ಕೆ.ಶಿವಕುಮಾರ್ ಬೆಂಬಲಿಗರಾಗಿದ್ದು, ತಮ್ಮನ್ನು ಸಹ ಯುವಘಟಕಕ್ಕೆ ಪರಿಗಣಿಸುವಂತೆ ಲಾಬಿ ನಡೆಸಿದ್ದಾರೆ. ಈ ಹಿಂದೆ ಯುವಘಟಕಕ್ಕೆ ಚುನಾವಣೆ ನಡೆಸಲಾಗುತ್ತಿತ್ತು. ಬಸನಗೌಡ ಬಾದರ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೋಲ್ಮಾಲ್ ಮಾಡಲಾಗಿದೆ. ಮತಪೆಟ್ಟಿಗೆಯಲ್ಲಿ ಬದಲಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. 

ಇದು ಎಐಸಿಸಿ ನಾಯಕ ರಾಹುಲ್ ಗಾಂಧಿ ಗಮನಕ್ಕೂ ಬಂದಿತ್ತು. ರಾಹುಲ್ ಗಾಂಧಿ ಯುವಕರನ್ನು ಪಕ್ಷದಲ್ಲಿ ಬೆಳೆಸಬೇಕು. ಹೀಗಾಗಿ ಕಾರ್ಯಕರ್ತರಿಗೆ ಯುವಘಟಕದಲ್ಲಿ ಹೆಚ್ಚು ಮನ್ನಣೆ ನೀಡಬೇಕೆಂದಿದ್ದರು. ಇತ್ತೀಚೆಗೆ ಯುವಘಟಕಕ್ಕೆ ಚುನಾವಣೆ ನಡೆಸದೇ ನೇರವಾಗಿ ಎಐಸಿಸಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲು ರಾಷ್ಟ್ರೀಯ ಕಾಂಗ್ರೆಸ್ ತೀರ್ಮಾನಿಸಿತ್ತು. ಅದರಂತೆ ಚುನಾವಣೆಯಿಲ್ಲದೇ ಯುವಘಟಕಕ್ಕೆ ಅಧ್ಯಕ್ಷರ ನೇಮಕವಾಗಲಿದೆ. ಹೀಗಾಗಿ ತಮ್ಮತಮ್ಮ ನಾಯಕರ ಮೂಲಕ ಸ್ಥಾನಕ್ಕೆ ಪೈಪೋಟಿ ಲಾಬಿಯೂ ಜೋರಾಗಿದೆ.

ಯುವಘಟಕವೂ ಕೂಡ ರಾಜ್ಯ ಕೆಪಿಸಿಸಿಯಲ್ಲಿ ಸಾಕಷ್ಟು ಸವಾಲು ಹಾಗೂ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಕನಕಪುರ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಬೆಂಬಲಿಗರಿಗೆ ಶಿವಕುಮಾರ್ ಮಣಿಯುವರೇ ಅಥವಾ ಶಾಸಕರು ತಮ್ಮ ಮಕ್ಕಳನ್ನು ಯುವಘಟಕದ ಸಾರಥ್ಯ ದೊರಕಿಸಿಕೊಳ್ಳುವಲ್ಲಿ ಸಖತ್ ಪೈಪೋಟಿ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಯುವಘಟಕ ಲಾಬಿಗೆ ಒಲಿಯುವುದೋ ಅಥವಾ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೂ ದಕ್ಕುವುದೋ ಕಾದುನೋಡಬೇಕಿದೆ.

Stay up to date on all the latest ರಾಜಕೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp