ಮುಂದಿನ ಮೂರು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ: ಡಿಸಿಎಂ ಲಕ್ಷ್ಮಣ್ ಸವದಿ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಹಬ್ಬಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಮುಂಬರುವ ಮೂರು ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರಿಗೇ ಮುಖ್ಯಮಂತ್ರಿ ಸ್ಥಾನ ಮೀಸಲಾಗಿದೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಹಬ್ಬಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಮುಂಬರುವ ಮೂರು ವರ್ಷಗಳ ಕಾಲ ಬಿ.ಎಸ್.ಯಡಿಯೂರಪ್ಪ ಅವರಿಗೇ ಮುಖ್ಯಮಂತ್ರಿ ಸ್ಥಾನ ಮೀಸಲಾಗಿದೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಿಂದ ಇಂದು ನಗರಕ್ಕೆ ವಾಪಸಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸವದಿ, ಪಕ್ಷವು ನನಗೆ ಈಗಾಗಲೇ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ಮುಖ್ಯಮಂತ್ರಿ ಆಗಬೇಕು ಎಂಬ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ. ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಭ್ರಮೆಯಲ್ಲೂ ನಾನಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಇರುವವರೆಗೆ ಅದನ್ನು ಪ್ರಶ್ನಿಸುವ ಸಂದರ್ಭ ಬರುವುದಿಲ್ಲ. ಯಾರಾದರೂ ಊಹಾಪೋಹ ಎಬ್ಬಿಸಿದರೆ ಅದಕ್ಕೆ ರೆಕ್ಕೆಪುಕ್ಕಗಳನ್ನು ಕಟ್ಟಲಾಗುತ್ತಿದೆ. ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾಗಿದ್ದು, ಯಾರು ಸಹ ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು ಎಂದಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವಾಗ ಇನ್ನೊಬ್ಬರು ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸುವುದು ಸರಿಯಲ್ಲ. ಯಾರೂ ಸಹ ಅಂತಹ ಆಪೇಕ್ಷೆ ಪಡುವಂತಹದ್ದಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದೇನೆ. ಸಾರಿಗೆ ಇಲಾಖೆಯ ಕೆಲಸಗಳ ನಿಮಿತ್ತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದೆ.‌ ಇದನ್ನು ಕಾರ್ಯಕರ್ತರು ತಪ್ಪಾಗಿ ಭಾವಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೇ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದನ್ನು ಆಧರಿಸಿ ಮಾಧ್ಯಮಗಳು ಕೂಡ ವರದಿ ಮಾಡಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com