ಮೈತ್ರಿ ಹಳಸಿದರೂ ಮುಗಿಯದ ಕಾಂಗ್ರೆಸ್-ಜೆಡಿಎಸ್ ಜಂಗಿಕುಸ್ತಿ

ಮಳೆ ನಿಂತರೂ ಮಳೆ ಹನಿ ನಿಲ್ಲುತ್ತಿಲ್ಲ ಎಂಬ ಮಾತಿನಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಳಸಿ ಸರ್ಕಾರ ಪತನಗೊಂಡು ಒಂದು ವರ್ಷವಾದರೂ ಎರಡೂ ಪಕ್ಷಗಳ ನಡುವಿನ ಕಿತ್ತಾಟ ಮಾತ್ರ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. 
ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು: ಮಳೆ ನಿಂತರೂ ಮಳೆ ಹನಿ ನಿಲ್ಲುತ್ತಿಲ್ಲ ಎಂಬ ಮಾತಿನಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಳಸಿ ಸರ್ಕಾರ ಪತನಗೊಂಡು ಒಂದು ವರ್ಷವಾದರೂ ಎರಡೂ ಪಕ್ಷಗಳ ನಡುವಿನ ಕಿತ್ತಾಟ ಮಾತ್ರ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. 

ಇತ್ತೀಚೆಗೆ ಕಾಂಗ್ರೆಸ್ ಅನ್ನು ಒಂದಲ್ಲ ಒಂದು ಕಾರಣಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಟ್ವೀಟ್ ವಾರ್ ನಡೆಸಿದೆ. ಮೈತ್ರಿಮಾಡಿಕೊಳ್ಳುವಾಗ ಕಾಂಗ್ರೆಸ್ ಪಕ್ಷದ ನೈತಿಕತೆ ಚೆನ್ನಾಗಿತ್ತೇ ಎಂದು ಪ್ರಶ್ನಿಸಿದೆ.

ರಾಜಕಾರಣದಲ್ಲಿ ಯಾರು ಯಾರಿಗೆ ಯಾವಾಗ ಸ್ನೇಹಿತರಾಗುತ್ತಾರೆ? ಯಾವಾಗ ಶತ್ರುಗಳಾಗುತ್ತಾರೆ ಎಂಬುದನ್ನು ಕಾಲವೇ ಆಗಾಗ ಸಾಬೀತುಪಡಿಸುತ್ತಲೇ ಇದೆ. ಮೈತ್ರಿ ಹಳಸಿ ಬಿಜೆಪಿ ಸರ್ಕಾರಕ್ಕೆ ಬಂದು ಒಂದು ವರ್ಷವಾಗಿದೆ. ಇದೀಗ ಹಳೆಯ ಮೈತ್ರಿ ಹೊಸ ವೈರತ್ವದ ರೂಪ ಪಡೆದುಕೊಳ್ಳುತ್ತಿದೆ. ಮೈತ್ರಿ ಸರ್ಕಾರದಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದ ಜೆಡಿಎಸ್, ಕಾಂಗ್ರೆಸ್ ಮುಖಂಡರು ಇದೀಗ ಮೈತ್ರಿ ಹಳಸಿದ ಮೇಲೂ ಕಚ್ಚಾಟ ಮುಂದುವರೆಸಿದ್ದಾರೆ. ಆಡಳಿತ ವಿಪಕ್ಷ ನಡುವೆ ವಾಗ್ವಾದ ಆರೋಪ ಪ್ರತ್ಯಾರೋಪ ಸಾಮಾನ್ಯವಾಗಿದೆ. ಆದರೆ ಸದ್ಯ ರಾಜ್ಯ ರಾಜಕಾರಣದಲ್ಲಿ ವಿಪಕ್ಷಗಳ ನಡುವಿನ ಕಿತ್ತಾಟ ಜೋರಾಗಿದೆ.

ಪ್ರತಿನಿತ್ಯ ಕಾಂಗ್ರೆಸ್ - ಜೆಡಿಎಸ್ ನಡುವಿನ ವಾಕ್ಸಮರ ಟ್ವೀಟ್ ಸಮರ ಹೆಚ್ಚೆಚ್ಚು ಸುದ್ದಿಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕಷ್ಟವಾಗಿತ್ತು ಎಂದು ಹೇಳಿದ್ದ ತಮಗೆ ಮೈತ್ರಿ ಮಾಡಿಕೊಂಡಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ ಎಂದು ಕಾಂಗ್ರೆಸ್ ನ ಅತಿರಥ ಮಹಾರಥ ನಾಯಕರು ನೇರವಾಗಿ ಪ್ರಶ್ನಿಸಲಾಗದೇ ಟ್ವೀಟ್ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆರಂಭವಾಗಿರುವ ಚರ್ಚೆಯನ್ನು ತಾವೇ ಪೂರ್ತಿಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿ, ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ ನ ನೈತಿಕತೆ ಎಲ್ಲಿತ್ತು?. ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ಹೀಗಾಗಿ ಕಾಂಗ್ರೆಸ್ ಆಟಗಳನ್ನೆಲ್ಲ ತಿಳಿದಿದ್ದ ತಾವು ರಾಜ್ಯದ ಜನತೆಯ ಹಿತಕ್ಕಾಗಿ ಚಾಣಕ್ಯ ನೀತಿ ಪ್ರದರ್ಶಿಸಿ ರೈತರ ಹಿತ ರಕ್ಷಿಸಬೇಕಾಯಿತು. ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮೈತ್ರಿಯ ಪ್ರಸ್ತಾಪವಿಟ್ಟು ಮುಖ್ಯಮಂತ್ರಿ ಸ್ಥಾನದಲ್ಲಿ ತಮ್ಮನ್ನು ಕೂರಿಸಿ ಪೆದ್ದನನ್ನಾಗಿಸುವ ಹುನ್ನಾರ ಮಾಡಿದ್ದರು. ರೈತರ ಹಿತಕ್ಕಾಗಿ ತಾವು ಜಾಣತನ ಪ್ರದರ್ಶಿಸಬೇಕಾಯಿತು ಎಂದು ತಮ್ಮ ಮೈತ್ರಿಯ ರಹಸ್ಯವನ್ನು ಕುಮಾರಸ್ವಾಮಿ ತೆರೆದಿಟ್ಟಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ ನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ ಗೆ ಸಲಹೆ ನೀಡಿ, ಖರ್ಗೆ ಮುಖ್ಯಮಂತ್ರಿ ಆಗಲಿ ಎಂದರು. ಆದರೆ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರು, ಯಾರು ಎಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದೆಂದು ತಿರುಗೇಟು ನೀಡಿದ್ದಾರೆ.

ಮತ್ತೊಂದೆಡೆ ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟ್ವಿಟರ್ ಮೂಲಕ ಮತ್ತೊಂದು ವಾಗ್ದಾಳಿ ನಡೆಸಿದರು. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ?. ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರು ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ ಟ್ವಿಟರ್ ಖಾತೆಗೆ ಸೀಮಿತವೇ? ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ 'ಮಾರುವೇಶ' ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com