ನನ್ನದೇನಿದ್ದರೂ ಕಾಂಗ್ರೆಸ್ ವಿರುದ್ಧದ ಹೋರಾಟ ಮಾತ್ರ: ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂಬ ಉದ್ದೇಶ ಕಾಂಗ್ರೆಸ್‌ ನಾಯಕರಿಗಿದೆ. ನನ್ನ ಹೋರಾಟ ಏನಿದ್ದರೂ ಕಾಂಗ್ರೆಸ್ ವಿರುದ್ಧವೇ ಹೊರತು ಬಿಜೆಪಿಯ ವಿರುದ್ಧವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್  ಪಕ್ಷವನ್ನು ಮುಗಿಸಬೇಕೆಂಬ ಉದ್ದೇಶ ಕಾಂಗ್ರೆಸ್‌ ನಾಯಕರಿಗಿದೆ. ನನ್ನ ಹೋರಾಟ ಏನಿದ್ದರೂ ಕಾಂಗ್ರೆಸ್ ವಿರುದ್ಧವೇ ಹೊರತು ಬಿಜೆಪಿಯ ವಿರುದ್ಧವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 60 ವರ್ಷಗಳ ರಾಜಕಾರಣಕ್ಕೆ ಧಕ್ಕೆ ಬರಬಾರದೆಂದು ಸುಮ್ಮನಿದ್ದೇನೆ. ನನಗೆ ಬಿಜೆಪಿಯಿಂದಲೂ ಆಹ್ವಾನವಿತ್ತು. ಆದರೆ ಹಾಗೆ ಮಾಡಲಿಲ್ಲ. ದೇವೇಗೌಡರಿಗೋಸ್ಕರ ಅಂದು ಕಾಂಗ್ರೆಸ್‌ನೊಂದಿಗಿನ ಮೈತ್ರಿಗೆ ಒಪ್ಪಿಕೊಳ್ಳಬೇಕಾಯಿತು. ಯಾರನ್ನೂ ಯಾರೂ ಸಹ ರಾಜಕಾರಣಕ್ಕಾಗಿ ಮುಗಿಸಲು ಸಾಧ್ಯವಿಲ್ಲ. ಈಗಿನ ಸಂದರ್ಭದಲ್ಲಿ ಬೇರೆ ರೀತಿಯ ಬೆಳವಣಿಗೆಗಳಿಗೆ ಬಿಜೆಪಿ ನಾಯಕರು ಆಸ್ಪದ ಕೊಡಬಾರದು ಎಂದು ಸೂಚ್ಯವಾಗಿ ನುಡಿದರು.

ಯಡಿಯೂರಪ್ಪ ಹಿಂದೆ ಬಿಜೆಪಿ ಬಿಡದೇ ಹೋಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ. ಸದ್ಯ ಕಾಂಗ್ರೆಸ್ ನಾಯಕರು ಯಾರೂ ಸಹ ತಮ್ಮ ಸಂಪರ್ಕದಲ್ಲಿಲ್ಲ. ತಮ್ಮ ಹೋರಾಟವಿರುವುದು ಕಾಂಗ್ರೆಸ್ ವಿರುದ್ಧವಾಗಿದೆ. ಇದೇ ಕಾಂಗ್ರೆಸ್ ನವರು ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದ್ದರು. ನಮ್ಮನ್ನು ಕಾಂಗ್ರೆಸ್ ಹೇಗೆ ಯಾವಾಗ ಬಳಸಿಕೊಂಡಿದೆ ಎನ್ನುವುದು ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು. ಕಾಂಗ್ರೆಸ್ ನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಮೈತ್ರಿ ಮಾಡಿ ತಪ್ಪು ಮಾಡಿದೆವು ಎಂದು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರೇ ಪ್ರಸ್ತಾಪ ಮಾಡಿದ್ದರು. ಅದಕ್ಕಾಗಿ ತಾವು ಕಾಂಗ್ರೆಸ್ ಗೆ ಉತ್ತರ ಕೊಡುತ್ತಿರುವುದಾಗಿ ಹೇಳಿದರು. 

ಕಳೆದ ಚುನಾವಣೆಯಲ್ಲಿ 60 ಸ್ಥಾನಗಳನ್ನು ಗೆಲ್ಲಬೇಕಿತ್ತು. ಕಾಂಗ್ರೆಸ್ ನ ಕುತಂತ್ರದಿಂದ ಸ್ಥಾನ ಕಡಿಮೆಗಳಿಸಬೇಕಾಯಿತು. ಕಾಂಗ್ರೆಸ್ ನ ಹೋರಾಟ ಜನರಿಗಾಗಿ ಅಲ್ಲ. ಅವರ ಹೋರಾಟ ಪ್ರಚಾರಕ್ಕಾಗಿ ಮಾತ್ರ. ವಿಷಯಗಳು ಒಂದೇ ಇರುವುದಿಲ್ಲ. ಬದಲಾಗುತ್ತಲೇ ಇರುತ್ತವೆ. ಹಿಂದೆ ಬಿಜೆಪಿಯ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದು ತಾವು, ಅದನ್ನು ಕಾಂಗ್ರೆಸ್ ಉಪಯೋಗಿಸಿಕೊಂಡಿತು. ಹೋರಾಟ ಮಾಡಿ 2013 ರಲ್ಲಿ ಅಧಿಕಾರಕ್ಕೆ ಬಂತು ಎಂದು ಗಣಿ ಅವ್ಯವಹಾರದ ವಿರುದ್ಧದ ಹೋರಾಟವನ್ನು ಪ್ರಸ್ತಾಪಿಸಿದರು.

ಕೊರೊನಾ ಇರುವುದರಿಂದ ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೊಸದಾಗಿ ದುಡ್ಡು ಮಂಜೂರು ಮಾಡಿಸಲು ಆಗುವುದಿಲ್ಲ ಮೈತ್ರಿ ಸರ್ಕಾರದಲ್ಲಿ ಪಾಸಾದ ಬಿಲ್ ಗಳನ್ನು ಕೆಲಸ ಮಾಡಿಸುತ್ತಿದ್ದೇನೆ ಅಷ್ಟೆ. ಸರ್ಕಾರ ಇರುವುದು 224 ಶಾಸಕರ ಕೆಲಸ ಮಾಡಲು. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲಸಕ್ಕೆ ಜೆಡಿಎಸ್ ಬೆಂಬಲ ಕೊಡಲಿದೆ ಎಂದು ಮುಕ್ತವಾಗಿಯೇ ಹೇಳಿದ್ದೇನೆ. ಜನರು ಕಷ್ಟದಲ್ಲಿದ್ದಾಗ ಸರ್ಕಾರವನ್ನು ಯಾರೂ ಅಸ್ಥಿರಗೊಳಿಸಲು ಹೋಗಬಾರದು. ಕೊರೊನಾ ವಿಚಾರಕ್ಕಾಗಿ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇನೆ. ಸರ್ಕಾರವನ್ನು ಅಸ್ಥಿರಗೊಳಿಸಲು ಹೋದರೆ ಅದರ ಪರಿಣಾಮ ಜನರು ಎದುರಿಸಬೇಕಾಗುತ್ತದೆ. ಇಂತಹ ತಪ್ಪನ್ನು ನಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದಿಂದ ಕುಮಾರಸ್ವಾಮಿ ಎಲ್ಲಾ ಸಹಕಾರ ಪಡೆಯುತ್ತಿದ್ದಾರೆ. ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ್ ಗೆ ಮೇಲ್ಮನೆ ಸ್ಥಾನ ಸಿಕ್ಕಿದ ತಕ್ಷಣ ಮೇಲಕ್ಕೆ ಹೋಗಬಾರದು.  ನನ್ನ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ಸಿ.ಪಿ.ಯೋಗೇಶ್ವರದ್ದು ಮಹತ್ತರ ಪಾತ್ರವಿತ್ತು. ಇದಕ್ಕೆ ದೆಹಲಿಯವರು ಸಿ.ಪಿ.ಯೋಗೇಶ್ವರ್ ಗೆ ಈಗ ಸ್ಥಾನಮಾನ ನೀಡಿದ್ದಾರೆ. ಮಂತ್ರಿಯಾಗುವ ಕನಸು ಅವರು ಕಾಣುತ್ತಿದ್ದಾರೆ. ನಾನು ಸ್ವಾರ್ಥಕ್ಕಾಗಿ ಅಧಿಕಾರಿಗಳನ್ನು ಉಪಯೋಗ ಮಾಡಿಕೊಳ್ಳಲಿಲ್ಲ.  ಜನರಿಗಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೈತ್ರಿ ಸರ್ಕಾರದಲ್ಲಿ ಆದಂತಹ ಕೆಲಸಗಳಿಗೆ ಈಗ ಅನುದಾನ ಪಡೆಯುತ್ತಿದ್ದೇನಷ್ಟೇ ಎಂದು ಸಮರ್ಥನೆ ನೀಡಿದರು.

ಸಿ.ಪಿ.ಯೋಗೇಶ್ವರ್ ಇನ್ನೂ ಮುಂದಾದರೂ ಸಣ್ಣತನದ ರಾಜಕಾರಣಬಿಟ್ಟು, ಬಿಜೆಪಿ ನಾಯಕರು ನೀಡಿದ ಗೌರವಯುತ ಸ್ಥಾನವನ್ನು ಸದುಪಯೋಗಪಡಿಸಿಕೊಳ್ಳಲಿ. ರಾಜಕಾರಣದಲ್ಲಿ ಏಳುಬೀಳಿನ ಚಕ್ರ ಉರುಳುವುದು ಸಹಜ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದು ಹೌದು. ಇಂದಿನ ಪರಿಸ್ಥಿತಿಯಲ್ಲಿ ನಾನು ಬಿಜೆಪಿ ಪರ ಮಾತನಾಡಿದರೆ ಅರ್ಥಗಳು ಬೇರೆಯಾಗಲಿವೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ಈಗಲೇ ಅಧಿಕಾರಿಗಳು ಕೆಲಸ ಮಾಡುವಲ್ಲಿ ನಿರ್ಲಿಪ್ತತೆ ತೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವದ ಬಗ್ಗೆ ಚರ್ಚೆಯಾದಾಗ ಅದರ ಪರಿಣಾಮ ಆಡಳಿತದ ಮೇಲಾಗುತ್ತದೆ. ಸರ್ಕಾರಗಳನ್ನು ಅಸ್ಥಿರಗೊಳಿಸುವುದು ಇವತ್ತಿನ ಸಂದರ್ಭದಲ್ಲಿ ಯಾರಿಗೂ ಶೋಭೆ ತರದು. ರಾಮನಗರದಲ್ಲಿ ನನ್ನ ಬಲವನ್ನು ಕುಗ್ಗಿಸಲು ಸ್ಥಳೀಯವಾಗಿ ಬಿಜೆಪಿ, ಕಾಂಗ್ರೆಸ್ ನವರು ಒಟ್ಟಾಗಿ ಸೇರಿಕೊಂಡು ಪ್ರಯತ್ನ ಮಾಡುತ್ತಿದ್ದಾರೆ. ಎಪಿಎಂಸಿ, ತಾಲೂಕು ಪಂಚಾಯಿತಿಯಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಸೇರಿವೆ. ನಾನು ಎಪಿಎಂಸಿ ತಾ.ಪಂ.ನಿಂದ ರಾಜಕಾರಣ ಮಾಡಬೇಕಾಗಿಲ್ಲ. ಟೀಕೆ ಮಾಡುವ ಸಮಯವಲ್ಲ. ಚರ್ಚೆ ಮಾಡಲು ಮುಂದಿನ ದಿನಗಳಿವೆ. ಈಗ ಕೊರೊನಾ ಬಗ್ಗೆ ಗಮನ ಕೊಡಬೇಕು ಎಂದರು.

ಲೋಪದೋಷಗಳನ್ನು ಹೇಳುವುದಕ್ಕಿಂತ ಸಕಾರಾತ್ಮಕ ಬೆಂಬಲ ಸಲಹೆ ನೀಡಬೇಕು. ಜನರ ಸಂಕಷ್ಟಕ್ಕೆ ನಿಲ್ಲಬೇಕು. ಜನರಲ್ಲಿ ವಿಶ್ವಾಸ, ಆತ್ಮಸ್ಥೈರ್ಯ ಮೂಡಿಸಬೇಕು. ಕಾಂಗ್ರೆಸ್ ನ ಬೀದಿ ಹೋರಾಟ ಯಾವುದೇ ಉಪಯೋಗಕ್ಕೆ ಬಾರದು. ರಾಜಸ್ಥಾನಕ್ಕಾಗಿ ಇವರು ಹೋರಾಟ ಮಾಡುತ್ತಾರೆ. ಕರ್ನಾಟಕದ ಸಮಸ್ಯೆಗಾಗಿ ಅವರು ಬೀದಿಗಿಳಿದು ಹೋರಾಟ ಮಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದೆ. ರಾಜಸ್ಥಾನಕ್ಕಾಗಿ ಇವರು ಇಲ್ಲಿ ಏಕೆ ಹೋರಾಟ ಮಾಡಬೇಕು. ಹಿಂದೆ ಹಿಡನ್ ಅಜೆಂಡಾ ಇದ್ದಾಗ ಕಾಂಗ್ರೆಸ್ ನವರು ಏಕೆ ಹೋರಾಟ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.

ಚುನಾವಣೆ ಬಂದಾಗ ರಾಜಕಾರಣ ಮಾಡಬೇಕು. ಈಗ ಜನರಿಗಾಗಿ ದುಡಿಯಬೇಕು. ಮಂತ್ರಿಗಳಲ್ಲಿ ಒಬ್ಬರಿಗೊಬ್ಬರಲ್ಲಿ ಸಹಕಾರವಿಲ್ಲ. ಯಡಿಯೂರಪ್ಪ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಳೆದ ವರ್ಷದ ಬಜೆಟ್ ನಾನು ಕೊಟ್ಟಿರುವುದು. ಯಡಿಯೂರಪ್ಪ ಹೊಸ ಬಜೆಟ್ ಕೊಟ್ಟಿಲ್ಲ. 2021ರ ಮಾರ್ಚ್ ಗೆ ಏನು ಮಾಡುತ್ತಾರೋ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡ ಯಾರೊಬ್ಬರಿಗೂ ಸಂಪೂರ್ಣವಾಗಿ 5 ಲಕ್ಷ ರೂ.ಸಿಕ್ಕಿಲ್ಲ. ಹಣ ಕೊಡುವುಂತಹದ್ದು ದೊಡ್ಡ ಕೆಲಸವೇನಲ್ಲ. ಒಂದು ಕಡೆ ನೆರೆ, ಕೊರೊನಾ ಸಂಕಷ್ಟ ಸರ್ಕಾರಕ್ಕೆ ಎದುರಾಯಿತು. ಇಂತಹ ಸಂದರ್ಭದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಹೇಗೆ ತಾನೇ ಮಾಡೀತು ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com