ಸಿಪಿ ಯೋಗೇಶ್ವರ್ ಗೆ ಸಮಸ್ಯೆ ಇದೆ: ಡಿ.ಕೆ. ಸುರೇಶ್

ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಬಾಯಿಚಪಲಕ್ಕೆ ಏನೇನೋ ಮಾತನಾಡುತ್ತಿರುವುದು ನೋಡಿದರೆ ಯೋಗೇಶ್ವರ್ ಮಾನಸಿಕ ಅಸ್ವಸ್ಥರಾಗಿರುವುದು ಸ್ಪಷ್ಟವಾಗುತ್ತಿದೆ.
ಡಿಕೆ ಸುರೇಶ್
ಡಿಕೆ ಸುರೇಶ್

ಬೆಂಗಳೂರು: ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಬಾಯಿಚಪಲಕ್ಕೆ ಏನೇನೋ ಮಾತನಾಡುತ್ತಿರುವುದು ನೋಡಿದರೆ ಯೋಗೇಶ್ವರ್ ಮಾನಸಿಕ ಅಸ್ವಸ್ಥರಾಗಿರುವುದು ಸ್ಪಷ್ಟವಾಗುತ್ತಿದೆ. ಹುಚ್ಚಾಸ್ಪತ್ರೆಯಿಂದ ಅವರನ್ನು ಬಿಜೆಪಿಯವರು ನೇರವಾಗಿ ಮೇಲ್ಮನೆಗೆ ಕರೆ ತಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಬಿದವರಿಗೆ ಮೋಸ ಮಾಡುವ ಯೋಗೇಶ್ವರ್ ಮೇಲ್ಮನೆ ಸದಸ್ಯರಾಗಿದ್ದು, ಈಗಲಾದರೂ ಭಗವಂತ ಅವರಿಗೆ ಒಳ್ಳೆಯದು ಮಾಡಲಿ, ಯೋಗೇಶ್ವರ್ ತಮಗೆ ನೀಡಿರುವ ಸ್ಥಾನಕ್ಕೆ ಗೌರವ ನೀಡಿ ಕೆಲಸ ಮಾಡಲಿ ಎಂದರು. 

ಸಹೋದರ ಡಿ.ಕೆ.ಶಿವಕುಮಾರ್-ಕುಮಾರಸ್ವಾಮಿ ಕುರಿತು ಯೋಗೇಶ್ವರ್ ನೀಡಿರುವ ಹೇಳಿಕೆಗೆ ಕಿಡಿಕಾರಿದ ಅವರು, ಯೋಗೇಶ್ವರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಯೋಗೇಶ್ವರ್ ಚಡ್ಡಿ ಹಾಕಿಕೊಂಡು ಕೆಲಸ ಮಾಡುತ್ತಾರೋ ಅಥವಾ ಬೇರೆ ಏನು ಹಾಕಿಕೊಂಡು ಕೆಲಸ ಮಾಡುತ್ತಾರೆಯೋ ಗೊತ್ತಿಲ್ಲ. ನಾವು ಹಗಲು ರಾತ್ರಿ ಒಂದೇ ಕೆಲಸ ಮಾಡುತ್ತೇವೆ, ಆದರೆ ಅವರು ರಾತ್ರಿ ಹಲವಾರು ನಾಯಕರ ಮನೆಗೆ ಹೋಗಿ ಕಾಲು ಕಟ್ಟುತ್ತಾರೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಅವರ ಪಕ್ಷದವರೇ ಓಡಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಎಂದಿಗೂ ನೇರವಾಗಿ ಮಾತನಾಡುವ ರಾಜಕಾರಣಿ. ಆದರೆ ಯೋಗೇಶ್ವರ್ ಇಷ್ಟುದಿನ
ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ದರು. ಈಗ ರಾಜಕೀಯದಲ್ಲಿ ನಾಟಕವಾಡುತ್ತಿದ್ದಾರೆ. ಅವರ ಯೋಗ್ಯತೆ ಏನು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. 

ಡಿ.ಕೆ.ಶಿವಕುಮಾರ್ ಎಂದಿಗೂ ಒಕ್ಕಲಿಗ ರಾಜಕೀಯ ಮಾಡಿಲ್ಲ. ಎಲ್ಲಾ ಜಾತಿ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ನೋಡೋಣ. ಆದರೆ ಕುಮಾರಸ್ವಾಮಿ ಕಾಂಗ್ರೆಸ್ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ಆದರೆ ಅವರ ಬಗ್ಗೆ ತಮಗೆ ಗೌರವವಿದೆ. ಪಿತೂರಿ ರಾಜಕಾರಣ ತಿಳಿಯದ ತಮಗೆ ಗೊತ್ತಿರುವುದು ಅಭಿವೃದ್ಧಿಯ ರಾಜಕೀಯ ಮಾತ್ರ ಎಂದರು.

ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಸರ್ಕಾರವೇ ನೇರಕಾರಣ. ಗಿನ್ನಿಸ್ ರೆಕಾರ್ಡ್ ಗಾಗಿ ಮಾತ್ರ ಸರ್ಕಾರ ಹಾಸಿಗೆಗಳನ್ನು ನಿರ್ಮಿಸಿದೆ. ಆದರೆ ನಿಜಕ್ಕೂ ಈ ಸರ್ಕಾರಕ್ಕೆ ಕೋವಿಡ್ ಸೋಂಕು ತಡೆಯುವ ಬಗ್ಗೆ ಚಿಂತನೆಯಾಗಲೀ ಕಾಳಜಿಯಾಗಲಿ ಇಲ್ಲ. ಸರ್ಕಾರದ್ದು ಬೆಳಗ್ಗೆ ಒಂದಿ ಆದೇಶವಾದರೆ, ಸಂಜೆ ಮತ್ತೊಂದು ಆದೇಶವಾಗಿದೆ. ಇದೆಲ್ಲವನ್ನೂ ನೋಡಿದರೆ ಸರ್ಕಾರದ ಆಡಳಿತ ಯಂತ್ರ ಸರಿಯಾಗಿಲ್ಲ ಎಂಬುದು ಸ್ಪಷ್ವವಾಗುತ್ತದೆ ಎಂದು ಸುರೇಶ್ ಟೀಕಿಸಿದರು.

ಕೋವಿಡ್ ಪರೀಕ್ಷೆ ಬಗ್ಗೆ ಸರ್ಕಾರ ಕೊಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು. ಸೂಕ್ತ ರೀತಿಯಲ್ಲಿ ಸೋಂಕು ಪತ್ತೆ ಪರೀಕ್ಷೆ ಮಾಡುತ್ತಿಲ್ಲ. ಸರಿಯಾಗಿ ಪರೀಕ್ಷೆ ಮಾಡಿದರೆ ಬೆಂಗಳೂರಿನಲ್ಲಿ ಪ್ರತಿದಿನ 5 ಸಾವಿರ ಸೋಂಕಿತರು ಪತ್ತೆಯಾಗುತ್ತಾರೆ. ಇವರು ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿದ್ದನ್ನು ಮಾತ್ರ ಹೇಳುತ್ತಿದ್ದಾರೆ. ರಾಮನಗರ ಜಿಲ್ಲೆಯಿಂದ 56 ಜನ ಕೋವಿಡ್ ನಿಂದ ಸತ್ತಿದ್ದಾರೆ .ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 30 ರಿಂದ 35 ಸತ್ತಿದ್ದಾರೆ. ಸರ್ಕಾರ ತಪ್ಪು ಬುಲೆಟಿನ್ ಕೊಡುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com