ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಸದ್ಯಕ್ಕಿಲ್ಲ: ಮತ್ತೊಂದು ಪತ್ರ ಬರೆಯಲು ಪಿಎಸಿ ನಿರ್ಧಾರ

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸದ್ಯಕ್ಕೆ ಹಕ್ಕುಚ್ಯುತಿ ಮಂಡಿಸದಿರಲು ನಿರ್ಧರಿಸಿದೆ. ಸ್ಪೀಕರ್ ಜೊತೆ ಈ ಸಂಬಂಧ ಸಭೆ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಲು ಮಂಗಳವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸದ್ಯಕ್ಕೆ ಹಕ್ಕುಚ್ಯುತಿ ಮಂಡಿಸದಿರಲು ನಿರ್ಧರಿಸಿದೆ. ಸ್ಪೀಕರ್ ಜೊತೆ ಈ ಸಂಬಂಧ ಸಭೆ ನಡೆಸಿ ಮುಂದೆ ನಿರ್ಧಾರ ಕೈಗೊಳ್ಳಲು ಮಂಗಳವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ.

ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯವಹಾರ ಸಂಬಂಧ ಸ್ಥಳ ಪರಿಶೀಲನೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿಗೆ ಮುಂದಾಗುವುದು ಬೇಡ. ಮತ್ತೊಮ್ಮೆ ಸ್ಪೀಕರ್ ಗಮನಕ್ಕೆ ತಂದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಬಿಜೆಪಿ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸದಿರಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.

ಸಭೆ ಬಳಿಕ‌ ಸುದ್ದಿಗಾರರೊಂದಿಗೆ ಎಚ್.ಕೆ.ಪಾಟೀಲ್ ಮಾತನಾಡಿ, ಸಮಿತಿಯನ್ನು ಶಾಸನಸಭೆ ರಚಿಸಿ, ಸಮಿತಿಗೆ ಸದಸ್ಯರ ನಾಮಕರಣ ಮಾಡಲಾಗಿರುತ್ತದೆ. ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೂ ಮುನ್ನ ಸ್ಪೀಕರ್ ಜೊತೆ ನಾವು ಸಭೆ ನಡೆಸಿ, ಅವ್ಯವಹಾರ ಪರಿಶೀಲನೆಗೆ ಅವಕಾಶ ನೀಡುವಂತೆ ಮತ್ತೊಮ್ಮೆ ಮನವಿ ಮಾಡಲಾಗುವುದು. ಒಂದು ವೇಳೆ ಪರಿಶೀಲನೆಗೆ ಅವಕಾಶ ನೀಡದಿದ್ದರೆ ಮುಂದಿನ ಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ನಿರ್ಧಾರದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಕಳೆದ ಮೇ 19ರಂದು ಸಮಿತಿ ಸಭೆ ನಡೆಸಿ, ಉಪಕರಣಗಳ ಖರೀದಿ ಪರಿಶೀಲನೆಗೆ ಮುಂದಾಗಿದ್ದೆವು. ಅವ್ಯವಹಾರ ಆರೋಪದ ಬಗ್ಗೆ ಪರಿಶೀಲನೆಗೆ ನಿರ್ಧರಿಸಿದ್ದೆವು. ಆದರೆ ನಮ್ಮ ಪರಿಶೀಲನೆಗೆ ತಡೆ ಬಿದ್ದಿತ್ತು. ಸಭಾಧ್ಯಕ್ಷರ ಆದೇಶದ ಮೇರೆಗೆ ನೊಟಿಫಿಕೇಶನ್ ಪ್ರಕಟಗೊಂಡಿತ್ತು. ನಂತರ ತಡೆಯನ್ನು ಪ್ರಶ್ನಿಸಿ ಸ್ಪೀಕರ್ ಗೆ ಪತ್ರವನ್ನು ಬರೆದ ಪರಿಶೀಲನೆಗೆ ಅವಕಾಶ ಕೋರಿದ್ದೆವು. ಹೀಗಾಗಿ ಇಂದು ಮತ್ತೆ ಸಮಿತಿ ಸಭೆ ನಡೆಸಿದ್ದೇವೆ. ತಡೆಯನ್ನು ತೆಗೆದು, ಪರಿಶೀಲನೆಗೆ ಅವಕಾಶ ನೀಡುವಂತೆ ಸ್ಪೀಕರ್ ಗೆ ಮತ್ತೊಂದು ಪತ್ರವನ್ನು ಬರೆಯುವಂತೆ ಇಂದಿನ ಸಭೆಯಲ್ಲಿ ನಿರ್ಧಾರವಾಗಿದೆ ಎಂದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ದಾಖಲೆ ಒದಗಿಸಿ ಪತ್ರ ಬರೆಯಲಿ. ಆ ನಂತರ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಸಭೆಯಲ್ಲಿ ಶಾಸಕರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ, ರವಿ ಸುಬ್ರಮಣ್ಯ, ನಡಹಳ್ಳಿ, ಪಿ ರಾಜು, ನಾರಾಯಣಸ್ವಾಮಿ, ಎ ಟಿ ರಾಮಸ್ವಾಮಿ, ಕೆ.ಜಿ. ಬೋಪಯ್ಯ, ಸಿ.ಎಂ. ಇಬ್ರಾಹಿಂ, ರಮೇಶ್ ಕುಮಾರ್, ನಾಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com