ಎಂಟಿಬಿ ನಾಗರಾಜ್ ಗೆ ಅನ್ಯಾಯ ಆಗಿದ್ದು ನಿಜ; ರಾಜಕೀಯ ಕಾರಣಕ್ಕೆ ಸಿದ್ದು ಆರೋಪ: ಬಿ.ಸಿ. ಪಾಟೀಲ್

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ ಆರೋಪಿಸಲಾಗುತ್ತಿದೆ. ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರ
ಸಚಿವ ಬಿಸಿ ಪಾಟೀಲ್
ಸಚಿವ ಬಿಸಿ ಪಾಟೀಲ್

ಕೊಪ್ಪಳ: ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ ಆರೋಪಿಸಲಾಗುತ್ತಿದೆ. ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು. ಚುನಾವಣೆ ಸಮಯದಲ್ಲಿ ನಮ್ಮ ಗೆಲುವಿಗಾಗಿ ಕುಟುಂಬ ಸದಸ್ಯರೆಲ್ಲರೂ ದುಡಿದಿರುತ್ತಾರೆ. ಹೀಗಾಗಿ ಕೆಲವೊಂದು ಸಲಹೆ, ಸೂಚನೆ ಕೊಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೇ ನಮ್ಮ ಪರವಾಗಿ ಆಡಳಿತ ನಡೆಸುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸಲಹೆ ನೀಡಬಹುದು. ಅದನ್ನು ಸ್ವೀಕಾರ ಮಾಡಬಹುದು ಅಥವಾ ಬಿಡಬಹುದು ಎಂದರು.

ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದಿಂದ ಮತ್ತು ಕಾಂಗ್ರೆಸ್ ಮೋಸ ಮಾಡಿದ್ದರಿಂದಲೇ ನಾವು ಪಕ್ಷ ಬಿಟ್ಟಿದ್ದು. ಸಿದ್ದರಾಮಯ್ಯ ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ಅಂತಹ ಸನ್ನಿವೇಶ ಸೃಷ್ಟಿಯಾಯಿತು ಎಂದು ಆರೋಪಿಸಿದರು.

ಆರ್.ಶಂಕರ್, ಎಂಟಿಬಿ ನಾಗರಾಜ, ವಿಶ್ವನಾಥ ತ್ಯಾಗ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಿಎಂ ಬಿಎಸ್ವೈ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಎಂಟಿಬಿಯವರಿಗೆ ಬಚ್ಚೆಗೌಡ ಕುಟುಂಬದಿಂದ ಅನ್ಯಾಯ ಆಗಿರುವುದು ನಿಜ. ಚುನಾವಣೆಯಲ್ಲಿ ಶರತ್ ಬಚ್ಚೆಗೌಡ ಸ್ಪರ್ಧೆ ಮಾಡದಂತೆ ಪಕ್ಷ ಸೂಚಿಸಿದರೂ ಸ್ಪರ್ಧೆ ಮಾಡಿದ್ದರಿಂದ ನಾಗರಾಜ ಸೋಲಬೇಕಾಯಿತು. ಯಡಿಯೂರಪ್ಪ ಅದನ್ನು ಸರಿಪಡಿಸುವರೆಂದು ವಿಶ್ವಾಸ ವ್ಯಕ್ತಪಡಿಸಿದರು. ಮೆಕ್ಕೆಜೋಳ ಬೆಳೆಗಾರರ ಖಾತೆಗೆ ಆನ್‌ಲೈನ್ ಮೂಲಕ ಪರಿಹಾರ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕೆಲ ರೈತರು ತಮ್ಮ ಚಾಲ್ತಿ ಖಾತೆಗೆ ಇನ್ನೂ ಆಧಾರ್ ಲಿಂಕ್ ಮಾಡಿಸಿಲ್ಲ. ಹಾಗಾಗಿ ಕೆಲವು ಕಡೆ ತೊಂದರೆ ಆಗಿರಬಹುದು. ಎಲ್ಲ ರೈತರು ತಮ್ಮ ಚಾಲ್ತಿ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕೆಂದು‌ ಮನವಿ ಮಾಡಿದರು.

ಕೊರೊನಾ ಬಗ್ಗೆ ತಿಳಿದುಕೊಳ್ಳಲು ಬರೀ ಕಾಮನ್ ಸೆನ್ಸ್ ಇದ್ದರೆ ಸಾಲದು, ಜೊತೆಗೆ ಜನರಲ್ ನಾಲೆಡ್ಜೂ ಇರಬೇಕು, ಕೊರೊನಾ ಮಾಹಿತಿಗಾಗಿ ಪಿಎಚ್‌ಡಿನೇ ಮಾಡಬೇಕೆಂದಿಲ್ಲ, ಕಾಮನ್ ಸೆನ್ಸ್ ಸಾಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯಗೆ ಪಾಟೀಲ ಟಾಂಗ್ ನೀಡಿದರು.

ಇಡೀ ಜಗತ್ತಿನಲ್ಲಿ ಕೊರೋನಾ ಕೇಸ್‌ಗಳು ಹೆಚ್ಚಾಗುತ್ತಿರುವುದು ಸಿದ್ದರಾಮಯ್ಯ ಅವರ ಅಧಿನಾಯಕಿ ಸೋನಿಯಾ ಗಾಂಧಿ ಅವರ ಇಟಲಿ ದೇಶದಲ್ಲಿ. ಅತ್ಯಂತ ಕಡಿಮೆ ಕೊರೋನಾ ಕೇಸ್‌ಗಳು ಪತ್ತೆಯಾಗುತ್ತಿರುವ ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ.‌ ಅದರಲ್ಲಿ ಕರ್ನಾಟಕದಲ್ಲಿ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು.

ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ೫೫ ಸ್ಯಾಂಪಲ್ ಪರೀಕ್ಷೆಯನ್ನು ಮಾಡಲಾಗಿದೆ. ೫೫ ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ. ಈಗ ಕೋವಿಡ್ ಟೆಸ್ಟ್ ಇಲ್ಲಿಯೇ ನಡೆಯುತ್ತದೆ. ಇದುವರೆಗೂ ಬಳ್ಳಾರಿ, ಬೆಂಗಳೂರಿಗೆ ಟೆಸ್ಟ್ ಕಳುಹಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿ ಲ್ಯಾಬ್ ಮಾಡಲಾಗಿದೆ ಎಂದರು.

ಸ್ಥಳೀಯ ಶಾಸಕರು ಮಂತ್ರಿಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ?
ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬುದು ನಿಜ. ಅವರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಅದಕ್ಕೆ ಅಸಮಾಧಾನ ಎನ್ನುವುದು ಸಮಂಜಸವಲ್ಲ. ನಾನೀಗ ಶಾಸಕನಾಗಿ, ಮಂತ್ರಿಯಾಗಿದ್ದೇನೆ. ಮುಂದೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವ ಆಸೆ ಇದೆ. ಹಾಗೆಯೇ ಎಲ್ಲರಿಗೂ ಬಯಕೆಗಳಿರುತ್ತವೆ. ನಿರೀಕ್ಷೆಗಳಿಗೆ ಕೊನೆ ಇಲ್ಲ. ಈ ಬಗ್ಗೆ ಸರಕಾರ ಗಮನ ಹರಿಸುತ್ತೆ ಎಂದರು.

ಪಾಲನೆಯಾಗದ ಸಾಮಾಜಿಕ ಅಂತರ
ಜಿಲ್ಲೆಯಲ್ಲಿ ಕೋವಿಡ್-19 ಲ್ಯಾಬ್ ಉದ್ಘಾಟಿಸಲು ಕೊಪ್ಪಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹಲವು ಸ್ಥಳಗಳಿಗೆ ಭೇಟಿ ನೀಡಿದರು. ಸಚಿವರ ಎಲ್ಲ ಕಾರ್ಯಕ್ರಮಗಳಲ್ಲೂ ಕೊರೋನಾ ನಿಯಂತ್ರಣದ ಸಾಮಾಜಿಕ ಅಂತರದ ನಿಯಮ ಎಲ್ಲೂ ಪಾಲನೆಯಾಗಲಿಲ್ಲ. ಸಚಿವರಿಂದಲೇ ಕೊರೋನಾ ನಿಯಮ ಉಲ್ಲಂಘನೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com