ರಾಜ್ಯಸಭೆ ಚುನಾವಣೆ: ಪಕ್ಷದ ಒತ್ತಾಯಕ್ಕೆ ಮಣಿದ ದೇವೇಗೌಡ, ನಾಳೆ ನಾಮಪತ್ರ ಸಲ್ಲಿಕೆ

ರಾಜ್ಯಸಭೆಯ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. 
ದೇವೇಗೌಡ
ದೇವೇಗೌಡ

ಬೆಂಗಳೂರು: ರಾಜ್ಯಸಭೆಯ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. 

ಈವರೆಗೆ ತಮ್ಮ ಸ್ಪರ್ಧೆ ಬಗ್ಗೆ ಬಹಿರಂಗವಾಗಿ ಯಾವುದೇ ಗುಟ್ಟು ಬಿಟ್ಟುಕೊಡದಿರುವ ಗೌಡರು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದ ನಂತರವೇ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ. 

ಈಗಾಗಲೇ ಪಕ್ಷದ ಶಾಸಕಾಂಗ ಸಭೆಯಲ್ಲಿ ದೇವೇಗೌಡರೇ ಅಭ್ಯರ್ಥಿಯಾಗಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆ ನಿರ್ಣಯವನ್ನು ಗೌಡರಿಗೆ ತಲುಪಿಸಿಯೂ ಆಗಿದೆ. ಆದರೆ, ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಗೌಡರು ರಾಜ್ಯಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದರು. ಇದೀಗ ಪಕ್ಷದ ಶಾಸಕರು ಹಾಗೂ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. 

ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಎರಡು ಮತ್ತು ಕಾಂಗ್ರೆಸ್'ಗೆ ಒಂದು ಸ್ಥಾನ ನಿರಾಯಾಸವಾಗಿ ಲಭಿಸಲಿವೆ. ಇನ್ನುಳಿದ ಒಂದು ಸ್ಥಾನವನ್ನು ಏಕಾಂಗಿಯಾಗಿ ಪಡೆಯಲು ಮೂರು ಪಕ್ಷಗಳಿಂದಲೂ ಸಾಧ್ಯವಿಲ್ಲ. ಹೀಗ್ಗಿ ಜೆಡಿಎಸ್'ಗೆ ಬೆಂಬಲ ನೀಡಲು ಕಾಂಗ್ರೆಸ ನಿರ್ಧರಿಸಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರು ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ. 

ಬಿಜೆಪಿ ಮೂರನೇ ಅಭಿಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಮತದಾನ ನಡೆಯದೇ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ. ಇದುವರೆಗೆ ಹಿಂಬಾಗಿಲಿನ ರಾಜಕಾರಣಕ್ಕೆ ಆದ್ಯತೆ ನೀಡದಿದ್ದ ಗೌಡರು ಯಾವಾಗಲೂ ನೇರ ಚುನಾವಣಾ ರಾಜಕಾರಣಕ್ಕೇ ಪ್ರಾಶಸ್ತ್ಯ ಕೊಟ್ಟಿದ್ದರು. ಕೊನೆಯ ಚುನಾವಣೆ ಎಂದೇ ಬಿಂಬಿತವಾಗಿದ್ದ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೌಡರು ಸೋಲು ಅನುಭವಿಸಿದ್ದರಿಂದ ಅದರ ಆಘಾತದಿಂದ ಕುಟುಂಬದ ಸದಸ್ಯರು ಹೊರಬಂದಿಲ್ಲ. ಜೊತೆಗೆ ಗೌಡರೂ ಆ ಸೋಲಿನ ಗುಂಗಿನಲ್ಲೇ ಇದ್ದಾರೆ. 

ಈಗ ರಾಜ್ಯಸಭೆಗೆ ಆಯ್ಕೆಯಾಗಿ ದೆಹಲಿ ರಾಜಕಾರಣದತ್ತ ಗಮನಹರಿಸಿದರೆ ಮತ್ತೆ ಲವಲವಿಕೆಯಿಂದ ಇರುತ್ತಾರೆ ಎಂಬುದು ಕುಟುಂಬದ ಸದಸ್ಯರ ಒತ್ತಾಸೆ. ಹೀಗಾಗಿ, ಅವರ ಮನವೊಲಿಕೆ ಯಶಸ್ವಿಯಾಗಿದೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ.9ರ ಮಂಗಳವಾರವೇ ಕೊನೆಯ ದಿನವಾಗಿದೆ. ಆ ದಿನ ಗೌಡರಿಗೆ ಒಳ್ಳೆಯದು ಎಂಬುದಾಗಿ ಜ್ಯೋತಿಷಿಗಳು ಹೇಳಿದ್ದರಿಂದ ಅಂದೇ ನಾಮಪತ್ರ ಸಲ್ಲಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com