ಟಿಕೆಟ್ ಸಿಕ್ಕಿದ್ದರಲ್ಲಿ ಅಚ್ಚರಿ ಏನೂ ಇಲ್ಲ: ಸಿಎಂ ಭೇಟಿ ಬಳಿಕ ಈರಣ್ಣ ಕಡಾಡಿ ಪ್ರತಿಕ್ರಿಯೆ

ಬಿಜೆಪಿಯ ರಾಜ್ಯಸಭೆ ಅಭ್ಯರ್ಥಿ ಈರಣ್ಣ ಕಡಾಡಿ ಇಂದು ಬೆಳಗ್ಗೆ  ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ
ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

ಬೆಂಗಳೂರು: ಬಿಜೆಪಿಯ ರಾಜ್ಯಸಭೆ ಅಭ್ಯರ್ಥಿ ಈರಣ್ಣ ಕಡಾಡಿ ಇಂದು ಬೆಳಗ್ಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈರಣ್ಣ ಕಡಾಡಿ, ಟಿಕೆಟ್ ಸಿಕ್ಕಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಪ್ರಭಾಕರ್ ಕೋರೆ ಮತ್ತು ರಮೇಶ್ ಕತ್ತಿ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುವುದಾಗಿ ತಿಳಿಸಿದರು. 

ನಿನ್ನೆಯಷ್ಟೇ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ಬಿಜೆಪಿ ಕೇಂದ್ರದ ವರಿಷ್ಠರು ಘೋಷಿಸಿದ್ದರು. ಈ ಮೂಲಕ ರಾಜ್ಯ ನಾಯಕರು ಕಳುಹಿಸಿದ್ದ ಪಟ್ಟಿಯನ್ನು ತಿರಸ್ಕರಿಸಿ ಶಾಕ್ ನೀಡಿದ್ದರು. 

ಬೆಳಗಾವಿಯ ಈರಣ್ಣ ಕಡಾಡಿ ಲಿಂಗಾಯತ ( ಪಂಚಮಸಾಲಿ) ಸಮುದಾಯಕ್ಕೆ ಸೇರಿದವರಾಗಿದ್ದು, ಈ ಹಿಂದೆ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷರಾಗಿದ್ದರು. ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. ಮೊದಲಿನಿಂದಲೂ ಸಂಘ ಪರಿವಾರದ ಸಂಪರ್ಕ ಹೊಂದಿದವರಾಗಿದ್ದು, ಸಂಘಕ್ಕೆ ನಿಷ್ಠರಾಗಿದ್ದರು.

ಜೂನ್ 19 ರಂದು ಕರ್ನಾಟಕದ ರಾಜ್ಯಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿರುವುದರಿಂದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ.

ಮುಖ್ಯಮಂತ್ರಿ ಭೇಟಿ ಬಳಿಕ ಈರಣ್ಣ ಕಡಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡಿದ್ದಕ್ಕಾಗಿ ಪಕ್ಷದ ವರಿಷ್ಠರಿಗೆ, ರಾಜ್ಯದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಾವು ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. 32 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ತಮ್ಮನ್ನು ಗುರುತಿಸಿ ಈ ಸ್ಥಾನ ಕೊಟ್ಟಿದೆ ಎಂದು ಹೇಳಿದರು.

ರಮೇಶ್ ಕತ್ತಿ, ಪ್ರಭಾಕರ್ ಕೋರೆ ಅವರಿಗೆ ಟಿಕೆಟ್ ಸಿಗದೆ ಬೇಸರ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಡಾಡಿ ಅವರು, ಕತ್ತಿ, ಕೋರೆಯವರು ಸಹ ತಮಗೆ ನಾಯಕರು. ಟಿಕೆಟ್ ತಮಗೆ ನೀಡಿದ್ದಕ್ಕೆ ಅವರಿಗೆ ಬೇಸರ ಅಥವಾ ಅಸಮಾಧಾನ ಆಗಿಲ್ಲ. ತಮಗೆ ಟಿಕೆಟ್ ಸಿಕ್ಕಿದ್ದರಿಂದ ಯಾರಿಗೂ ಬೇಸರ ಆಗಿಲ್ಲ. ತಮಗೆ ಟಿಕೆಟ್ ಸಿಕ್ಕಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಬಿಜೆಪಿ ಕೇಡರ್ ಆಧಾರಿತ ಪಕ್ಷ. ತಳಮಟ್ಟದ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತದೆ. ಪಕ್ಷ ಅವಕಾಶ ಕೊಟ್ಟಿದ್ದಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಅವರೂ ಕೂಡ ತಮಗೆ ಆಶೀರ್ವಾದ ಮಾಡಿದ್ದಾರೆ. ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರ ಇದ್ದರೆ ಅದು ಕ್ಷಣಿಕ ಮಾತ್ರ ಎಂದು ಸ್ಪಷ್ಟಪಡಿಸಿದರು.

ಬಳಿಕ ಬಿ ಫಾರ್ಮ್ ಪಡೆಯಲು ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರು ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.
ಅಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಿಂದ ಬಿ ಫಾರ್ಮ್ ಅನ್ನು ಇಬ್ಬರು ಅಭ್ಯರ್ಥಿಗಳು ಪಡೆದರು. ಬಳಿಕ ಅವರು ವಿಧಾನಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com