ಬಿಜೆಪಿಯಿಂದ ದುರುದ್ದೇಶದ ರಾಜಕಾರಣ; ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇನೆ: ಡಿ.ಕೆ. ಶಿವಕುಮಾರ್

ರಾಜಕೀಯ ದುರುದ್ದೇಶದಿಂದ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಪದೇಪದೇ ಅವಕಾಶ ನಿರಾಕರಿಸುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಪದೇಪದೇ ಅವಕಾಶ ನಿರಾಕರಿಸುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ದುರುದ್ದೇಶಪೂರಿತ ರಾಜಕೀಯ ಪ್ರೇರಿತ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದೇ ಬೀದಿ ಹೋರಾಟಗಾರರಾಗಿರುವ ತಾವು ಜನತಾ ನ್ಯಾಯಾಲಯದ ಮುಂದೆ ಪ್ರಸ್ತಾಪಿಸುವುದಾಗಿ ಸ್ಪಷ್ಟಪಡಿಸಿದರು.

ಜೂನ್14 ರಂದು ಅಧ್ಯಕ್ಷ ಸ್ಥಾನವನ್ನು ಸಾಂಪ್ರದಾಯಿಕವಾಗಿ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯರ ಆಶೀರ್ವಾದ ಪಡೆದು, ಹಿಂದಿನ ಅಧ್ಯಕ್ಷರುಗಳಿಗೆ ಗೌರವ ಸಮರ್ಪಿಸಲು ಮೂರು ಬಾರಿ ಕಾರ್ಯಕ್ರಮ ಹಾಕಿಕೊಂಡಿದ್ದೆ. ಈ ಬಗ್ಗೆ ತಾವೇ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ಅವರಿಗೂ ಸಹ ಮನವಿ ಮಾಡಿದ್ದೆ. ದೇಶದ ಯಾವ ರಾಜ್ಯದಲ್ಲಿಯೂ ಭಾನುವಾರ ಕರ್ಪ್ಯೂ ಇಲ್ಲದಿದ್ದರೂ ಕರ್ನಾಟಕದಲ್ಲಿ ಯಡಿಯೂರಪ್ಪ ಭಾನುವಾರ ಕರ್ಪ್ಯೂ ಜಾರಿ ಮಾಡಿದ್ದರು. ಸುಮಾರು 10,500 ಕಡೆಗಳಲ್ಲಿ ಆನ್ ಲೈನ್ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಈ ಕಾರ್ಯಕ್ರಮ ಮಾಡುವ ಬಗ್ಗೆ ಒಂದೂವರೆ ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಕೊರೋನಾ ನಿರ್ದೇಶನದ ನೆಪ ಹೇಳಿ ಅಧಿಕಾರಿಗಳ ಮೂಲಕ ಆದೇಶ ಕಳುಹಿಸಿದ್ದಾರೆ. ನಾವು ಯಾವ ರೀತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂಬ ಮಾಹಿತಿಯನ್ನು ಸರ್ಕಾರದ ಗಮನಕ್ಕೂ ತರಲಾಗಿತ್ತು. ಕೇವಲ 150 ಜನರಿಗೆ ಮಾತ್ರ ಅವಕಾಶ ಕೇಳಿದ್ದೆವು. ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ರಾಜಕೀಯ ದುರುದ್ದೇಶದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಅನೇಕ ಸಚಿವರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಜನರನ್ನು ಸೇರಿಸಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವದಲ್ಲಿ ಕರಾಳ ದಿನವಾಗಿದೆ. ಪಶ್ಚಿಮ ಬಂಗಾಳ, ಓಡಿಸ್ಸಾ, ಬಿಹಾರ ದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಕೇಂದ್ರ ಗೃಹ ಸಚಿವರು ಪಾಲ್ಗೊಂಡಿದ್ದರು. 70 ಸಾವಿರ ಎಲ್.ಇ ಡಿ ಬಳಕೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಅವರಿಗೊಂದು ಕಾನೂನು ನಮಗೊಂದು ಕಾನೂನಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸಿನ ವರ್ಚ್ಯುವಲ್ ಕಾರ್ಯಕ್ರಮವನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಬಿಜೆಪಿ ನಕಲು ಮಾಡಿಕೊಂಡು ಮುನ್ನಡೆಯುತ್ತಿದೆ. ನಮ್ಮ ಪದಗ್ರಹಣ ದಿನವಾದ ಜೂನ್ 14 ರಂದು ಬಿಜೆಪಿ "ಸೆಲ್ಪ್ ರಿಲೈಯಂಟ್ ಇಂಡಿಯಾ" ಎಂದ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಕಾರ್ಯಕ್ರಮ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆಷಾಢದಲ್ಲಿಯಾದರೂ ಪ್ರತಿಜ್ಞೆ ತೆಗೆದುಕೊಳ್ಳುತ್ತೇನೆ. ನನಗೂ ಸಾಕಷ್ಟು ನಂಬಿಕೆ ಇದೆ. ನಾನು ಕಾನೂನಿಗೆ ಗೌರವ ಕೊಟ್ಟೇ ಅಧಿಕಾರ ಸ್ವೀಕಾರ ಮಾಡುತ್ತೇನೆ. ಮುಖ್ಯಮಂತ್ರಿಗೆ ಮತ್ತೆ ಪತ್ರ ಬರೆದು ಅವಕಾಶ ಕೇಳುತ್ತೇನೆ. ಅವರು ಅವಕಾಶ ಕೊಟ್ಟಾಗ ಅಧಿಕಾರ ಸ್ವೀಕರಿಸುವುದಾಗಿ ಶಿವಕುಮಾರ್ ಸ್ಪಷ್ಟಪಡಿಸಿದರು.

ಮೇಲ್ಮನೆ ಚುನಾವಣೆ ಮುಗಿದ ತಕ್ಷಣ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ ಶಿವಕುಮಾರ್, ಪಕ್ಷದ ಧ್ವಜ ಹಿಡಿಯದೇ ಕೊರೊನಾ ವಿಷಯದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವೈಫಲ್ಯದ ಬಗ್ಗೆ ಎಲ್ಲ ಜನರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com