ಮೇಲ್ಮನೆ ಚುನಾವಣೆ: ಎಂಎಲ್ ಸಿ ಅಭ್ಯರ್ಥಿ ಆಯ್ಕೆ ಕುರಿತು ಇಂದು ಬಿಜೆಪಿ ಸಭೆ

ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಸೋಮವಾರ ಸಂಜೆ 4 ಗಂಟೆಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಸೋಮವಾರ ಸಂಜೆ 4 ಗಂಟೆಗೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. 

ಕಳೆದ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಹೈಕಮಾಂಡ್ ಅನುಸರಿಸಿದ ಮಾನದಂಡದ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. 

ಬಿಜೆಪಿಗೆ ಒಟ್ಟು 4 ಸ್ಥಾನಗಳು ಲಭಿಸುತ್ತಿದ್ದು, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ತೊರೆದು ಪಕ್ಷಕ್ಕೆ ವಲಸೆ ಬಂದಿದ್ದ ಎಂಟಿಬಿ ನಾಗರಾಜ್ ಹಾಗೂ ಎಸ್.ಶಂಕರ್'ಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮತ್ತೊಬ್ಬ ಮಾಜಿ ಶಾಸಕ. ಹೆಚ್.ವಿಶ್ವನಾಥ್'ಗೆ ಟಿಕೆಟ್ ನೀಡುವ ಬಗ್ಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ನಾಗರಾಜ್ ವಿರುದ್ಧ ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಅವರಿಗೆ ಸೋಲುಂಟಾಯಿತು. ಹೀಗಾಗಿ ಅವರಿಗೆ ಈಗ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ರೀತಿ ರಾಣೆ ಬೆನ್ನೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂಬ ಪಕ್ಷದ ಸಲಹೆ ಮನ್ನಿಸಿ ಕ್ಷೇತ್ರ ಬಿಟ್ಟುಕೊಟ್ಟಿದ್ದರಿಂದ ಶಂಕರ್'ಗೂ ಟಿಕೆಟ್ ಸಿಗುವುದು ನಿಚ್ಚಳವಾಗಿದೆ. ಆದರೆ, ಹುಣಸೂರು ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ಬೇಡ ಎಂಬ ಪಕ್ಷದ ಸಲಹೆಯನ್ನು ತಿರಸ್ಕರಿಸಿ ವಿಶ್ವನಾಥ್ ಅವರು ಪಟ್ಟು ಹಿಡಿದು ಸ್ಪರ್ಧಿಸಿ ಸೋಲು ಅನುಭವಿಸಿದ್ದರಿಂದ ಅವರಿಗೆ ಟಿಕೆಟ್ ನೀಡಲು ವಿರೋಧವಿದೆ. 

ಇವರೊಂದಿಗೆ ಪರಿಶಿಷ್ಟ ಜಾತಿಯ ಬಲಗೈ ಗುಂಪಿಗೆ ಸೇರಿದ ಛಲವಾದಿ ನಾರಾಯಣ ಸ್ವಾಮಿಯವರ ಹೆಸರು ಕೇಳಿ ಬಂದಿದೆ. ಅಲ್ಲದೆ, ಪಕ್ಷದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಶ್ರಮಿಸಿದ ಮಾಜಿ ಶಾಸಕ ಯೋಗೀಶ್ವರ್, ಮಹಿಳಾ ಕೋಟಾದಿಂದ ಮಾಜಿ ಶಾಸಕಿ ಭಾರತಿ ಶೆಟ್ಟಿ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com