ಕೆಲಸ ನಮ್ಮದು ಟೇಪು ಬಿಜೆಪಿ ಅವರದ್ದು: ಮಾಧ್ಯಮ ವಿರುದ್ಧ ಎಚ್‌.ಡಿ.ಕೆ ಗರಂ

ನಮ್ಮ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಅದರ ಖ್ಯಾತಿಯನ್ನು ತನ್ನ ಹೆಸರಿಗೆ ಹಾಕಿಕೊಳ್ಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ನಮ್ಮ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಅದರ ಖ್ಯಾತಿಯನ್ನು ತನ್ನ ಹೆಸರಿಗೆ ಹಾಕಿಕೊಳ್ಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈಗಾಗಲೇ ನನಗೆ 65 ವರ್ಷ. ದೇವರು ಆಯಸ್ಸು ಕೊಟ್ಟರೆ ಇನ್ನೂ 10-15ವರ್ಷ ಬದುಕಬಹುದಷ್ಟೇ...ಹೀಗಂತ ಹೇಳಿದ್ದೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನದಿಂದಲೇ ಮಾತನಾಡಿದ ಅವರು, ಮಾಧ್ಯಮದವರು ತಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ. ಆದರೆ ದೇಶವನ್ನು ಉಳಿಸುವ ಕೆಲಸ ಮಾಡಬೇಕು. ಮಾಧ್ಯಮ ಮಿತ್ರರು ಯಾವುದೇ ಕಾರಣಕ್ಕೂ ದೇಶವನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಬಾರದು ಎಂದರು.

ಇದರಲ್ಲಿ ವರದಿಗಾರರ ತಪ್ಪು ಇಲ್ಲ, ಆದರೆ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿರುವ ಮಾಲೀಕರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ದೇಶವನ್ನು ಯುದ್ಧದ ವಿಷಯದಲ್ಲಿ ಹಾಳುಗೆಡವ ಬಾರದು. ನಾವು ಎಲ್ಲವನ್ನೂ ನೋಡಿ ಆಗಿದೆ. ಸರ್ಕಾರಗಳನ್ನು ಓಲೈಕೆ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಇವತ್ತಿನ ಸರ್ಕಾರದಂತೆ ಲೂಟಿ ಹೊಡೆಯುವ ಕೆಲಸ ತಾವು ಮಾಡಿಲ್ಲ. ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ‌ ಮಾಡುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬ್ರಾಹ್ಮಣರೂ ಅಲ್ಲ, ಮಾಧ್ಯಮಗಳನ್ನು ಓಲೈಸುವ ನಾಯಕರೂ ಅಲ್ಲ‌ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಕಳೆದ ಮೈತ್ರಿ ಸರ್ಕಾರದಲ್ಲಿ 9.75 ಲಕ್ಷ ರೂ.ವೆಚ್ಚದಲ್ಲಿ ನೆರೆ ಸಂತ್ರಸ್ತರಿಗೆ ಕಟ್ಟಿಸಿದ ಮನೆಗಳಿಗೆ ಈಗಿನ ಬಿಜೆಪಿ ಸರ್ಕಾರ ಟೇಪು ಕತ್ತರಿಸುತ್ತಿದೆಯಾದರೂ ತಮ್ಮ ಹೆಸರನ್ನು ಮಾತ್ರ ಅಪ್ಪಿ ತಪ್ಪಿಯೂ ಎಲ್ಲೂ ಹೇಳುತ್ತಿಲ್ಲ. ಕೆಲಸ ನಮ್ಮದು ಟೇಪು ಇವರದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಇದು ಯುದ್ಧ ಮಾಡುವ ಸಮಯವಲ್ಲ. ದೇಶದಲ್ಲಿ ಕೋವಿಡ್-19 ಸಮಸ್ಯೆ ತಲೆದೋರಿದಂತಹ ಇಂತಹ ಸಂದರ್ಭದಲ್ಲಿ ಚೀನಾ ಮತ್ತು ಭಾರತದ ಮಧ್ಯೆ ಯುದ್ಧದ ವಾತಾವರಣ ನಿರ್ಮಾಣವಾಗುವುದು ಜಗತ್ತಿಗೆ ಒಳ್ಳೆಯ ಬೆಳವಣಿಗೆಯಲ್ಲ. 1967ರ ಯುದ್ಧದ ಬಳಿಕ ಚೀನಾ ಮತ್ತು ಭಾರತದ ನಡುವೆ ಮಾತುಕತೆ ನಡೆದಿರಲಿಲ್ಲ. ಸುಮಾರು ಮೂವತ್ತೈದು ವರ್ಷಗಳ ನಂತರ ಮೊದಲ ಬಾರಿಗೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಮಾತುಕತೆ ನಡೆದಿತ್ತು. ಕನ್ನಡಿಗ ದೇವೇಗೌಡ ಪ್ರಧಾನಿಯಾಗಿದ್ದಾಗ ಇಂಗ್ಲಿಷ್ ಬರುವುದಿಲ್ಲ ಎಂದು ಅವರನ್ನು ಟೀಕಿಸಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿದ್ದಾಗ 1996ರಲ್ಲಿ ಮೊದಲ ಬಾರಿಗೆ ಚೈನಾದ ಪ್ರಧಾನಿ ಭಾರತಕ್ಕೆ ಅಗಮಿಸಿದ್ದರು. ಉಭಯ ದೇಶಗಳ ನಡುವೆ ಗಡಿವಿಚಾರಕ್ಕೆ ಸಂಬಂಧಿಸಿದಂತೆ ಒಂದು ಒಪ್ಪಂದವಾಗಿದ್ದು, ಇದು ಇತಿಹಾಸದ ಪುಟದಲ್ಲಿದೆ. ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರು ಈ ಬಗ್ಗೆ " ಎ ಟರ್ನಿಂಗ್ ಪಾಯಿಂಟ್" ಎಂಬ ಪುಸ್ತಕವನ್ನೇ ಬರೆದರು. ಪ್ರಚಾರದ ಕೊರತೆಯಿಂದ ದೇವೇಗೌಡರ ಈ ಸಾಧನೆ ಚೀನಾ ಜೊತೆಗಿನ ಒಪ್ಪಂದ ಅಷ್ಟು ಪ್ರಸಿದ್ಧಿಯಾಗಲಿಲ್ಲ ಎಂದು ಎಚ್ ಡಿಕೆ ಬೇಸರ ವ್ಯಕ್ತಪಡಿಸಿದರು.

ಪರಸ್ಪರ ಸಂಘರ್ಷಕ್ಕೆ ಎಡೆಮಾಡಿಕೊಡದೇ ಉಭಯ ದೇಶಗಳೂ ಸೌಹಾರ್ದಯುತವಾಗಿ ಎರಡು ದೇಶಗಳು ನಡೆದುಕೊಳ್ಳಬೇಕು. ಇಂತಹ ವಿಷಯವನ್ನು ವೈಭವೀಕರಿಸದೇ ಎರಡು ದೇಶಗಳು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಬಗ್ಗೆ ಸರಿಯಾದ ಕ್ರಮಕೈಗೊಳ್ಳಬೇಕೆಂದು. ದೇಶಕ್ಕೆ ಅಪಾಯ ಬಂದಾಗ ಹೋರಾಟ ಮಾಡಬೇಕು ನಿಜ. ಆದರೆ ಯುದ್ಧದ ಪರಿಸ್ಥಿತಿ ನಿರ್ಮಿಸಬಾರದು. ತಪ್ಪು ಸರಿಪಡಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಹಿಂದುತ್ವದ ಬಗ್ಗೆ ಚರ್ಚೆ ಎನ್ನುವ ಹೆಸರಿನಲ್ಲಿ ಹಳ್ಳಿಯಲ್ಲಿರುವ ದಲಿತ, ಒಕ್ಕಲಿಗರನ್ನು ಹತ್ಯೆಗೈಯುವ ಕೆಲಸ ನಡೆಯುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಸಂಘರ್ಷ ಎಬ್ಬಿಸಲಾಗುತ್ತಿದೆ. ಮಾಧ್ಯಮಗಳ ಮೂಲಕ ಯುವಕರ ಹಾದಿತಪ್ಪಿಸುತ್ತಿದ್ದಾರೆ. ನಮ್ಮ ಜವಾಬ್ದಾರಿ ಅರಿಯಬೇಕು ಎಂದು ಪರೋಕ್ಷವಾಗಿ ಸಂಘ ಪರಿವಾರ ಮತ್ತು ಬಿಜೆಪಿಯನ್ನು ಟೀಕಿಸಿದರು.

25ಸಾವಿರ ಕೋಟಿ ರೂ.ಗಳನ್ನು ಸಾಲ ಮನ್ನಾಕ್ಕಾಗಿ ಹಣ ಹೊಂದಿಸಿದ್ದೆ. ಆದರೆ ಈ ಸರ್ಕಾರ ಅದನ್ನು ಜಾರಿ ಮಾಡಿಲ್ಲ‌. ಮತ್ತೆ ರೈತರು ಸಾಲ ಮಾಡುತ್ತಿದ್ದಾರೆ. ರೈತರು ಸಾಲ ಮಾಡದಂತಹ ವ್ಯವಸ್ಥೆ ದೇಶದಲ್ಲಾಗಬೇಕು. ಪಕ್ಷದ ದುರದೃಷ್ಟವೋ ನಮ್ಮ ದುರದೃಷ್ಟವೋ ದೇವೇಗೌಡರು ಕೇವಲ ಹತ್ತು ತಿಂಗಳು ಪ್ರಧಾನಿಯಾಗಿ, ಹದಿನೆಂಟು ತಿಂಗಳು ಮುಖ್ಯಮಂತ್ರಿಯಾಗಿ ಹೊರಬಂದರು. ಒಮ್ಮೆ ಇಪ್ಪತ್ತೊಂದು ತಿಂಗಳು, ಮತ್ತೊಮ್ಮೆ ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ಹೊರಬರಬೇಕಾಯಿತು. ಐದು ವರ್ಷ ಸಂಪೂರ್ಣ ಅಧಿಕಾರ ನೀಡಿದ್ದರೆ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಇನ್ನಷ್ಟು ದುಡಿಯುತ್ತಿದ್ದೆವು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಜನರಲ್ಲಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com