ಟಿಕೆಟ್ ಸಿಕ್ಕಿದ ಖುಷಿಯಲ್ಲಿ ಆರ್. ಶಂಕರ್ ಕಣ್ಣೀರು: ಎಚ್.ವಿಶ್ವನಾಥ್ ಅಳಲು ಕೇಳೋರು ಯಾರು?

ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್‌ ಸಿಗುತ್ತಿದ್ದಂತೆ ಮಾಜಿ ಸಚಿವ ಆರ್. ಶಂಕರ್ ಗಳಗಳನೆ ಕಣ್ಣೀರು ಹಾಕಿದ್ದಾರೆ. ಸಂತೋಷದಿಂದ ಕಣ್ಣೀರು ಹಾಕಿದ ಅವರು ಕ್ಷೇತ್ರದ ಜನರನ್ನು ನೆನಪಿಸಿಕೊಂಡರು. ತಮ್ಮನ್ನು ಪಕ್ಷೇತರ ಶಾಸಕನಾಗಿ ಗೆಲ್ಲಿಸಿದ್ದ ಜನರಿಗೆ ಕೃತಜ್ಞನಾಗಿದ್ದೇನೆ. ಮತ್ತೆ ಅವರ ಸೇವೆ ಮಾಡಲು ಅವಕಾಶ ಸಿಕ್ಕಿದೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್‌ ಸಿಗುತ್ತಿದ್ದಂತೆ ಮಾಜಿ ಸಚಿವ ಆರ್. ಶಂಕರ್ ಗಳಗಳನೆ ಕಣ್ಣೀರು ಹಾಕಿದ್ದಾರೆ. ಸಂತೋಷದಿಂದ ಕಣ್ಣೀರು ಹಾಕಿದ ಅವರು ಕ್ಷೇತ್ರದ ಜನರನ್ನು ನೆನಪಿಸಿಕೊಂಡರು. ತಮ್ಮನ್ನು ಪಕ್ಷೇತರ ಶಾಸಕನಾಗಿ ಗೆಲ್ಲಿಸಿದ್ದ ಜನರಿಗೆ ಕೃತಜ್ಞನಾಗಿದ್ದೇನೆ. ಮತ್ತೆ ಅವರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಕ್ಷೇತ್ರ ಹಾಗೂ ತಾಲೂಕಿನ ಜನತೆಗೆ ಧನ್ಯವಾದ ಎಂದು ಹೇಳಿದರು.

ಈ ಮಧ್ಯೆ ವಿಧಾನ ಪರಿಷತ್‌ ಟಿಕೆಟ್‌ ಸಿಕ್ಕಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ನಾಯಕ್  ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿ ಬಿ ಫಾರಂ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಬಿಜೆಪಿ ಕಾರ್ಯಕರ್ತರ ಪಕ್ಷ. ಅಧಿಕಾರ ಇಲ್ಲದ ಸಂದರ್ಭದಲ್ಲಿಯೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ತಾವು ವಿಧಾನ ಪರಿಷತ್‌ಗೆ ಅಭ್ಯರ್ಥಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿರುವ ತಮ್ಮನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ. ಯಾವುದೇ ಅಪೇಕ್ಷೆಯಿಂದ ನಾವು ಕೆಲಸ ಮಾಡಿಲ್ಲ. ಆದರೆ ಪಕ್ಷ ಇದೀಗ ಗುರುತಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೇಲ್ಮನೆ ಟಿಕೆಟ್‌ ಕೈತಪ್ಪಿದ ಮಾಜಿ ಸಚಿವ ಎಚ್.ವಿಶ್ವನಾಥ್  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೇಸರ ವ್ಯಕ್ತಪಡಿಸಿದರು. ಇದ್ದ ಅಧಿಕಾರವನ್ನು ತ್ಯಾಗ ಮಾಡಿದವನು. ಸಮ್ಮಿಶ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಹೊರಬಂದಿದ್ದೆವು. ಅದರಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಅವರು ನಮ್ಮ ನಾಯಕರು ಮತ್ತು ಮುಖ್ಯಮಂತ್ರಿ. ಕೋರ್ ಕಮಿಟಿಯವರು ಒಮ್ಮತದಿಂದ ನಮ್ಮ ಹೆಸರನ್ನು ಕಳುಹಿಸಿಕೊಟ್ಟಿದ್ದರು. ಆದರೆ ದೆಹಲಿಯಲ್ಲಿ ಏನಾಯಿತು ಎಂಬುದು ಗೊತ್ತಿಲ್ಲ. ತಮ್ಮ ಹೆಸರನ್ನು ಕೈಬಿಟ್ಟು ಇತರರಿಗೆ ಅವಕಾಶ ನೀಡಲಾಗಿದೆ. ಷಡ್ಯಂತ್ರ ಏನಾಗಿದೆ ಹೇಗಾಗಿದೆ ಎಂಬುದನ್ನು ಸಂದರ್ಭ ಬಂದಾಗ ತಿಳಿಸುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಇದ್ದವರಿಗೆ ನಮ್ಮ ಮೇಲೆ ಭಾರೀ ಕೋಪವಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಅವಕಾಶಗಳು ನಿರೀಕ್ಷೆ ಮಾಡಿದಷ್ಟು ಸುಲಭದಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಸಿಗುತ್ತದೆ. ಏನಾಯಿತು ಎಂಬುದನ್ನು ಮುಖ್ಯಮಂತ್ರಿ ವಿವರಿಸಿದ್ದಾರೆ. ಮುಂದೆಯೂ ಪಕ್ಷದಲ್ಲೇ ಮುಂದುವರಿಯುತ್ತೇನೆ. ನನ್ನ ಅನುಭವವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಎಂ.ಟಿ.ಬಿ.ನಾಗರಾಜ್‌ ಕೂಡ
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, ಪರಿಷತ್ ಸ್ಥಾನಕ್ಕೆ ಟಿಕೆಟ್ ಸಿಕ್ಕಿದೆ. ಅದಕ್ಕಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ. 

ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿದೆ. ಮೂವರನ್ನೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಬಿಜೆಪಿ ಹೈಕಮಾಂಡ್‌ಗೆ ಒತ್ತಡ ಹಾಕಿದ್ದೆವು. ಆದರೆ ಅಂತಿಮವಾಗಿ ವಿಶ್ವನಾಥ್ ಅವರನ್ನು ಕೈಬಿಟ್ಟಿದ್ದಾರೆ. ಇದರಿಂದ ನಮಗೂ ಬೇಜಾರಾಗಿದೆ ಎಂದರು. ಸಚಿವ ಸಂಪುಟಕ್ಕೆ ಸೇರಿಸುವ ಬಗ್ಗೆ ಚರ್ಚೆ ಆಗಿಲ್ಲ. ಈ ಬಗ್ಗೆ ನಮ್ಮ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಎಂಟಿಬಿ ತಿಳಿಸಿದರು.

ಮತ್ತೋರ್ವ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಮಾತನಾಡಿ, ವಿಧಾನ ಪರಿಷತ್‌ಗೆ ಟಿಕೆಟ್ ನೀಡಲು ಪ್ರಯತ್ನಿಸಿದ ನಾಯಕರಾದ ಯಡಿಯೂರಪ್ಪ, ರಾಷ್ಟ್ರೀಯ ನಾಯಕರಾದ ಪ್ರಹ್ಲಾದ್ ಜೋಷಿ, ಬಿ.ಎಲ್.ಸಂತೋಷ್ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪಕ್ಷ ಆದ್ಯತೆ ನೀಡಿದೆ. ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಚಿಂಚೋಳಿ ಮತ ಕ್ಷೇತ್ರದ ಜನತೆಯ ಆಶಯವೂ ಇದಾಗಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com