ಕಮರಿದ ಆಸೆ, ಕೈ ಕೊಟ್ಟ ಕಮಲ: ಥ್ರಿಲ್ಲರ್ ಹೀರೋ ಆಗಬೇಕಿದ್ದ ವಿಶ್ವನಾಥ್ ದುರಂತ ನಾಯಕನಾಗಿದ್ದು ಏಕೆ?

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಗೊಳಿಸಿ ಹಲವು ಟ್ವಿಸ್ಟ್ ಮತ್ತು ಟರ್ನ್ ಗಳಿಗೆ ಕಾರಣವಾಗಿದ್ದ ಮಾಜಿ ಸಚಿವ ಅಡಗೂರು ವಿಶ್ವನಾಥ್ ಥ್ರಿಲ್ಲರ್ ಹೀರೋ ಆಗುವ ಬದಲು ದುರಂತ ನಾಯಕನಾಗಿ ನಿಂತಿದ್ದಾರೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಗೊಳಿಸಿ ಹಲವು ಟ್ವಿಸ್ಟ್ ಮತ್ತು ಟರ್ನ್ ಗಳಿಗೆ ಕಾರಣವಾಗಿದ್ದ ಮಾಜಿ ಸಚಿವ ಅಡಗೂರು ವಿಶ್ವನಾಥ್ ಥ್ರಿಲ್ಲರ್ ಹೀರೋ ಆಗುವ ಬದಲು ದುರಂತ ನಾಯಕನಾಗಿ ನಿಂತಿದ್ದಾರೆ.

ಸಮ್ಮಿಶ್ರ ಸರ್ಕಾರದ ಹಣೆ ಬರಹ ಬದಲಿಸಿದ್ದ ವಿಶ್ವನಾಥ್, ಯಡಿಯೂರಪ್ಪ ಅವರನ್ನು ಸಿಎಂ ಆಗಿ ಅಧಿಕಾರಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವಿಶ್ವನಾಥ್ ಈಗ ಏಕಾಂಗಿಯಾಗಿ ನಿಂತಿದ್ದಾರೆ. ಎರಡನೇ ಬಾರಿಯೂ ಶಕ್ತಿ ಸೌಧ ಪ್ರವೇಶಿಸುವ ಅವಕಾಶ ಕೈತಪ್ಪಿದೆ. ಅವರ ನಾಲ್ಕು ದಶಕಗಳ ರಾಜಕೀಯ ಜೀವನ ತುಂಬಾ ವರ್ಣಮಯವಾಗಿತ್ತು.

ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಬಹುತೇಕ ಎಲ್ಲಾ ಪಕ್ಷಗಳ ಕದ ತಟ್ಟಿದ್ದಾರೆ. ದೇವರಾಜ್ ಅರಸ್ ಅವರ ಚಿಂತನೆಯ ಶಾಲೆಯಿದ ಬಂದ ವಿಶ್ವನಾಥ್, ಸಿದ್ದರಾಮಯ್ಯ, ಎಸ್ ಎಂ ಕೃಷ್ಣ ಮತ್ತು ಎಚ್ ಡಿ ದೇವೇಗೌಡ ಅವರ ಜೊತೆ ಸಂಘರ್ಷ ಮಾಡಿಕೊಂಡು ಬಂದ ವಿಶ್ವನಾಥ್ ಹಳ್ಳಿ ಹಕ್ಕಿ ಮೂಲಕ ತಮ್ಮದೇ ಆದ ಛಾಪು ಮೂಡಿಸಿಕೊಂಡವರು.

ಕವಿ-ರಾಜಕಾರಣಿ ತನ್ನದೇ ಆದ ರಾಜಕೀಯ ಕಥೆಯು ಇಂತಹ ತಿರುವು ಪಡೆಯಬಹುದು ಎಂದು ಯಾವುತ್ತೂ ಎಣಿಸಿರಲಿಲ್ಲ, 2019ರ ರಾಜಕೀಯ ದಂಗೆಯಲ್ಲಿ ಭಾಗವಹಿಸಿದ್ದ ಅವರ ಸ್ನೇಹಿತರಿಗೆಲ್ಲಾ ತಲುಪಬಹುದೆಂಬ ತಕ್ಕ ಬಹುಮಾನ ಸಿಕ್ಕಿದೆ, ಆದರೆ ವಿಶ್ವನಾಥ್ ಗೆ ಅವಕಾಶ ಸಿಕ್ಕಿಲ್ಲ. 67 ವರ್ಷದ ವಿಶ್ವನಾಥ್ ಅವರನ್ನು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಸಿಕೊಂಡು ಕೈ ಬಿಡಲಾಗಿದೆ.

ಯಡಿಯೂರಪ್ಪ ಮತ್ತೊಮ್ಮೆ ಹಳ್ಳಿ ಹಕ್ಕಿ ಭವಿಷ್ಯವನ್ನು ಬದಲಿಸುವಂತಹ ಮಾಸ್ಟರ್ ಸ್ಟ್ರೋಕ್ ಕೊಡದಿದ್ದರೆ ವಿಶ್ವನಾಥ್ ಅವರ ರಾಜಕೀಯ ಜೀವನ ಅಂತ್ಯಗೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್ ನಿಂದ ಬಂದ ವಿಶ್ವನಾಥ್ ಹಿಂದುಳಿದ ವರ್ಗಗಗಳ ಪ್ರಬಲ ನಾಯಕರಾಗಿದ್ದರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆದು ತಂದರು, ಆದರೆ ತಮ್ಮ ರಾಜಕೀಯ ಜೀವನ ಮುಗಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ್ದರು.

ಗೌರವಯುತವಾಗಿ ತಮ್ಮ ರಾಜಕೀಯ ಜೀವನ ಮುಗಿಸಲು ಜೆಡಿಎಸ್ ನಿಂದ ಹುಣಸೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಗೆದ್ದ ಅವರಿಗೆ ಮಂತ್ರಿ ಸ್ಥಾನ ನೀಡುವ ಬದಲು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಗೊಂಡಿದ್ದರು. ಅದಾದ ನಂತರ 16 ಶಾಸಕರ ಜೊತೆಗೂಡಿ ಸಮ್ಮಿಶ್ರ
ಸರ್ಕಾರದ ವಿರುದ್ಧ ದಂಗೆಯೆದ್ದರು. ಇದಕ್ಕೆ ತಮ್ಮ ಸ್ನೇಹಿತರಾಗಿದ್ದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಬೆಂಬಲ ನೀಡಿದ್ದರು. ಅದಾದ ನಂತರ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಕದ ತಟ್ಟಬೇಕಾಯಿತು.

ಇದಾದ ನಂತರ ಹುಣಸೂರಿನಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಬಿಜೆಪಿ ನಾಯಕರು ಸಲಹೆ ನೀಡಿದ್ದರು. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು. ಆದರೆ ಟಿಕೆಟ್ ಪಡೆದುಕೊಳ್ಳುವಲ್ಲಿ ವಿಶ್ವನಾಥ್ ಯಶಸ್ವಿಯಾಗಿದ್ದರು. ಆದರೆ ಉಪ ಚುನಾವಣೆಯಲ್ಲಿ 30 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ಎಂಟಿಬಿ ನಾಗರಾಜ್, ಆರ್ ಶಂಕರ್ ಗೆ ಎಂಎಲ್ ಸಿ ಟಿಕೆಟ್ ಕೊಡಿಸಿದ್ದಾರೆ. ವಿಶ್ವನಾಥ್ ಅವರು ಹಿಂದುಳಿದ ವರ್ಗಗಳ ದನಿಯಾಗುತ್ತಾರೆ ಎಂದು ಎಣಿಸಲಾಗಿತ್ತು, ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ವಿಶ್ವನಾಥ್ ಅವರನ್ನು ಹೈಕಮಾಂಡ್ ಕೈ ಬಿಟ್ಟಿದೆ. ಹಳ್ಳಿ ಹಕ್ಕಿಯ ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com