ಪರಿಷತ್ ಚುನಾವಣೆ: ಎಂಟಿಬಿ ನಾಗರಾಜ್ 1224 ಕೋಟಿ, ಬಿ.ಕೆ.ಹರಿಪ್ರಸಾದ್ 14 ಕೋಟಿ ಒಡೆಯ

ವಿಧಾನ ಪರಿಷತ್ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, 1224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, 1224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಇನ್ನು ಮೇಲ್ಮನೆಗೆ ಕಾಂಗ್ರೆಸ್‌‌ನಿಂದ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್‌ ತಮ್ಮ ಮತ್ತು ತಮ್ಮ ಪತ್ನಿಯ ಹೆಸರಲ್ಲಿ ಒಟ್ಟು 14.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು 64 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಕೈಯಲ್ಲಿ 20 ಸಾವಿರ ರು. ನಗದು, ವಿವಿಧ ಬ್ಯಾಂಕುಗಳಲ್ಲಿ 10.40 ಲಕ್ಷ ರೂ. ಠೇವಣಿ, 3 ಲಕ್ಷ ರೂ.ಮೌಲ್ಯದ ಶೇರು, ಡಿಬೆಂಚರ್‌, 9.36 ಲಕ್ಷ ರೂ.ಬೆಲೆಬಾಳುವ ಒಂದು ಹುಂಡೈ ಕ್ಸೆಂಟ್‌, 3.50 ಲಕ್ಷ ರೂ. ಮೌಲ್ಯದ ಮಾರುತಿ ಝೆನ್‌ ವಾಹನ ಸೇರಿ 26.48 ಲಕ್ಷ ರೂ.ಮೌಲ್ಯದ ಚರಾಸ್ತಿ ಇದೆ ಎಂದಿದ್ದಾರೆ.

ಇನ್ನು ತಮ್ಮ ಪತ್ನಿ ಬಳಿ 10 ಸಾವಿರ ರೂ. ನಗದು, ವಿವಿಧ ಬ್ಯಾಂಕುಗಳಲ್ಲಿ 6.64 ಲಕ್ಷ ರು. ಠೇವಣಿ, 31.43 ಲಕ್ಷ ರು. ಮೌಲ್ಯದ 700 ಗ್ರಾಂ. ಚಿನ್ನಾಭರಣವಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನ ಆರ್‌ಟಿ ನಗರದಲ್ಲಿ ತಮ್ಮ ಹೆಸರಿನಲ್ಲಿರುವ 4000 ಚ.ಅಡಿ ವಿಸ್ತೀರ್ಣದ ನಿವೇಶನದಲ್ಲಿ 10.50 ಕೋಟಿ ರೂ.ಮೌಲ್ಯದ ವಾಣಿಜ್ಯ ಕಟ್ಟಡ, ಪತ್ನಿ ಹೆಸರಿನಲ್ಲಿ ಆರ್‌ಎಂವಿ ಎಕ್ಸ್‌ಟೆನ್ಷನ್‌ನಲ್ಲಿ 3,750 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ 4.12 ಕೋಟಿ ರೂ ಮೌಲ್ಯದ ವಸತಿ ಸಮುಚ್ಛಯದಲ್ಲಿ ಶೇ.50ರಷ್ಟು ಪಾಲುದಾರಿಕೆ ಹೊಂದಿದ್ದು, ಹರಿಪ್ರಸಾದ್ ಹೆಸರಿನಲ್ಲಿ 12.47 ಲಕ್ಷ ಸಾಲ, ಪತ್ನಿ ಹೆಸರಿನಲ್ಲಿ 2 ಕೋಟಿ ಸಾಲವಿದೆ.

ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹ್ಮದ್ ಅವರು 17 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳಾದ  ಆರ್ ಶಂಕರ್ ಬಳಿ 301 ಕೋಟಿ, ಸುನೀಲ್ ವಲ್ಯಾಪುರೆ ಬಳಿ 20 ಕೋಟಿ ರೂ. ಹಾಗೂ ಪ್ರತಾಪ್ ಸಿಂಹ ನಾಯಕ್ 2.29 ಕೋಟಿ ಮತ್ತು ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು 80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com