'ಡಿ ಕೆ ಶಿವಕುಮಾರ್ ಜೊತೆ ದ್ವೇಷ, ಪೈಪೋಟಿ ಏನೂ ಇಲ್ಲ, ಅವರು ನನ್ನ ಒಳ್ಳೆಯ ಗೆಳೆಯ': ರಮೇಶ್ ಜಾರಕಿಹೊಳಿ 

ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ಆದೇಶವನ್ನು ಗೆಜೆಟ್ ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸಂದರ್ಭದಲ್ಲಿ ಜಲ ಸಂಪನ್ಮೂಲ ಇಲಾಖೆ ಮಹತ್ವ ಪಡೆದುಕೊಂಡಿದೆ. ಅದರ ನೂತನ ಸಚಿವ ರಮೇಶ್ ಜಾರಕಿಹೊಳಿ ಸಹಜವಾಗಿ ಖುಷಿಯಾಗಿದ್ದಾರೆ.

Published: 01st March 2020 08:46 AM  |   Last Updated: 01st March 2020 09:07 AM   |  A+A-


Ramesh Jarakiholi

ರಮೇಶ್ ಜಾರಕಿಹೊಳಿ

Posted By : Sumana Upadhyaya
Source : The New Indian Express

ಬೆಂಗಳೂರು: ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ಆದೇಶವನ್ನು ಗೆಜೆಟ್ ನಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸಂದರ್ಭದಲ್ಲಿ ಜಲ ಸಂಪನ್ಮೂಲ ಇಲಾಖೆ ಮಹತ್ವ ಪಡೆದುಕೊಂಡಿದೆ. ಅದರ ನೂತನ ಸಚಿವ ರಮೇಶ್ ಜಾರಕಿಹೊಳಿ ಸಹಜವಾಗಿ ಖುಷಿಯಾಗಿದ್ದಾರೆ.


ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟಕ್ಕೆ ರಮೇಶ್ ಜಾರಕಿಹೊಳಿಯವರು ಹೊಸಬರು. ಈ ಸಂದರ್ಭದಲ್ಲಿ ಸಂಡೆ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಅವರು, ಕಾಂಗ್ರೆಸ್ ಹಿರಿಯ ನಾಯಕ ಡಿ ಕೆ ಶಿವಕುಮಾರ್ ಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.


ಮಹದಾಯಿ ಜಲ ವಿವಾದ ನ್ಯಾಯಾಧೀಕರಣ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ಸಿಕ್ಕಿರುವ ನೀರಿನ ಪ್ರಮಾಣದಲ್ಲಿ 8.02 ಟಿಎಂಸಿ ನೀರನ್ನು ಜಲ ವಿದ್ಯುತ್ ಯೋಜನೆಗಳಿಗೆ ಮೀಸಲಿಡಲಾಗಿದೆ. ಹೊಸ ವರದಿ ಬರುವವರೆಗೆ ಮತ್ತು ಅಗತ್ಯ ಅನುಮೋದನೆ ಸಿಗುವವರೆಗೆ ಈ ನೀರನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೇಳಲಾಗಿದೆ.


ಹಾಗಾದರೆ ನೀರಿನ ಬಳಕೆಗೆ ಸಂಬಂಧಪಟ್ಟಂತೆ ಅಗತ್ಯ ಅನುಮೋದನೆ ಸಿಕ್ಕಿದೆಯೇ ಎಂದು ಸಚಿವ ರಮೇಶ್ ಜಾರಕಿಹೊಳಿಯವರನ್ನು ಕೇಳಿದಾಗ, ಇದು ಕೋರ್ಟ್ ಮುಂದಿದೆ. ನಾವು ಹೇಳುವುದು ನ್ಯಾಯಾಲಯದ ಕೇಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಇದಕ್ಕೆ ಎಲ್ಲರ ಸಹಕಾರ ಬೇಕು. ಕೋರ್ಟ್ ನ ಆದೇಶದ ನಂತರ ನಾವು ಹೆಚ್ಚಿನ ಮಾಹಿತಿ ನೀಡಬಹುದು. ಸದ್ಯಕ್ಕೆ ನಮಗೆ 13.42 ಟಿಎಂಸಿ ನೀರು ಸಿಕ್ಕಿದ್ದು ಅದರಲ್ಲಿ 8.02 ಟಿಎಂಸಿ ನೀರನ್ನು ಜಲ ವಿದ್ಯುತ್ ಯೋಜನೆಗೆ ಮತ್ತು ಉಳಿದ ನೀರನ್ನು ಕಳಸಾ ಬಂಡೂರಿ ಅಣೆಕಟ್ಟಿನಿಂದ ಕುಡಿಯುವ ಉದ್ದೇಶಕ್ಕೆ ಬಳಸಬಹುದಾಗಿದೆ. ನಾವು ಅಡ್ವೊಕೇಟ್ ಜನರಲ್ಗಳೊಂದಿಗೆ ಮತ್ತು ದೆಹಲಿಯಲ್ಲಿರುವ ನಮ್ಮ ಕಾನೂನು ತಂಡದೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇವೆ.

ಸಂದರ್ಶನದ ಮುಂದುವರಿದ ಭಾಗದಲ್ಲಿ ಪ್ರಶ್ನೆಗಳಿಗೆ ಸಚಿವ ಜಾರಕಿಹೊಳಿ ಈ ರೀತಿ ಉತ್ತರಿಸಿದ್ದಾರೆ. 
ಇದೇ 5ರಂದು ಮುಖ್ಯಮಂತ್ರಿಯವರು ಮಂಡಿಸುತ್ತಿರುವ ಬಜೆಟ್ ನಿಂದ ನಿಮ್ಮ ಇಲಾಖೆಗೆ ಏನು ಬಯಸುತ್ತೀರಿ?
ಮುಖ್ಯಮಂತ್ರಿಗಳು ಜಲ ಸಂಪನ್ಮೂಲ ಇಲಾಖೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ನಾನು ಬಯಸುವುದಕ್ಕಿಂತ ಹೆಚ್ಚಿನ ಹಣ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡುತ್ತಾರೆಂದು ನಾನು ನಂಬಿದ್ದೇನೆ.


ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ನಂತರ ಹೇಗಿದೆ?
ಬಿಜೆಪಿಯಲ್ಲಿ ಸಾಕಷ್ಟು ಶಿಸ್ತು ಇದೆ. ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸವಿದು. ಬಿಜೆಪಿಯಲ್ಲಿ ಯಾವುದೇ ಭಿನ್ನತೆಯಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ಇಲ್ಲಿ ನಿಮಗೆ ಮಾರ್ಗದರ್ಶನ ಮಾಡುವವರು ಮತ್ತು ನಿಮ್ಮ ತಪ್ಪುಗಳನ್ನು ಹೇಳುವವರು ಇರುತ್ತಾರೆ.


ನಿಮ್ಮ ಬಂಡಾಯದಿಂದ ಎಲ್ಲಾ ಬಂಡಾಯ ಶಾಸಕರು ಹೊಟೇಲ್ ನಲ್ಲಿ ಉಳಿದುಕೊಳ್ಳುವುದು, ಬಂಡಾಯ ಏಳುವುದು ನಂತರ ಬಿಜೆಪಿಗೆ ಸೇರಿದ್ದು ಎಲ್ಲವೂ ಒಳ್ಳೆಯದಾಯಿತು ಎಂದು ಅನಿಸುತ್ತಿದೆಯಾ?
-ಅವೆಲ್ಲಾ ಮುಗಿದು ಹೋಯಿತು, ಅವುಗಳನ್ನು ಮತ್ತೆ ಕೆಣಕುವುದು ಬೇಡ, ಇನ್ನು ಹೊಸ ಅಧ್ಯಾಯ, ಅದು ರಾಜ್ಯದ ಅಭಿವೃದ್ಧಿಯತ್ತ.


ಡಿ ಕೆ ಶಿವಕುಮಾರ್ ಜೊತೆಗೆ ನಿಮ್ಮ ದ್ವೇಷ,ಪೈಪೋಟಿ, ಸ್ಪರ್ಧೆ ಇದೆಯೇ?
-ಅಯ್ಯೋ ಅವೆಲ್ಲ ಇಲ್ಲ, ಅವರ ಜೊತೆಗೆ ದ್ವೇಷ, ಕೋಪ, ಪೈಪೋಟಿ ಏನೂ ಇಲ್ಲ, ಅವರು ನನ್ನ ಉತ್ತಮ ಗೆಳೆಯ. ರಾಜಕೀಯ ಬೇರೆ ವೈಯಕ್ತಿಕ ಬದುಕು ಬೇರೆ. ಅವರ ಜೊತೆ ಚೆನ್ನಾಗಿದ್ದೇನೆ. 


ನಿಮ್ಮ ಬಂಡಾಯ, ಬಿಜೆಪಿ ಸೇರ್ಪಡೆ ನಿಮ್ಮ ಸಹೋದರರು ರಾಜಕೀಯದಲ್ಲಿರುವುದರಿಂದ ಯಾವ ರೀತಿ ಪರಿಣಾಮ ಬೀರಿದೆ?
ಇದರಿಂದ ವೈಯಕ್ತಿಕ ಜೀವನಕ್ಕೆ ಏನೂ ಪರಿಣಾಮವಾಗಿಲ್ಲ. ನಾವು 30 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ. ರಾಜಕೀಯ ನಮ್ಮ ವೈಯಕ್ತಿಕ ಬದುಕು, ಕುಟುಂಬದ ಮೇಲೆ ಯಾವ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಕುಟುಂಬಕ್ಕೆ ಯಾರೂ ಪ್ರಭಾವ ಬೀರುವುದಿಲ್ಲ. ನಾವೆಲ್ಲರೂ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡಿದ್ದು ಅದನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. 


ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಏನು ಹೇಳುತ್ತೀರಿ? 
ಅದರ ಬಗ್ಗೆ ಈಗ ಮಾತನಾಡಲು ಸರಿಯಾದ ಸಮಯವಲ್ಲ. ಅವರಿಗೆ ಉತ್ತಮ ಅವಕಾಶ ಮುಂದಿನ ದಿನಗಳಲ್ಲಿ ಸಿಗಬಹುದು ಎಂಬ ವಿಶ್ವಾಸ ನನಗಿದೆ.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp