ತೀವ್ರ ಟೀಕೆಯ ನಂತರ ಸಂವಿಧಾನದ ಕುರಿತ ತಮ್ಮ ಭಾಷಣ ತಿದ್ದುಪಡಿ ಮಾಡಿದ ಸ್ಪೀಕರ್ ಕಾಗೇರಿ

ಸಂವಿಧಾನ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್.ರಾವ್ ರಚಿಸಿಕೊಟ್ಟಿದ್ದರು. ಅದನ್ನು ಚರ್ಚಿಸಿ ಕೆಲವು ಮಾರ್ಪಾಡುಗಳನ್ನು ಮಾಡಿ ಭಾರತದ ಸಂವಿಧಾನ ರಚಿಸಲಾಯಿತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು...
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಸಂವಿಧಾನ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್.ರಾವ್ ರಚಿಸಿಕೊಟ್ಟಿದ್ದರು. ಅದನ್ನು ಚರ್ಚಿಸಿ ಕೆಲವು ಮಾರ್ಪಾಡುಗಳನ್ನು ಮಾಡಿ ಭಾರತದ ಸಂವಿಧಾನ ರಚಿಸಲಾಯಿತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ ಭಾಷಣಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆದಿಯಾಗಿ ಬಹಳಷ್ಟು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ತಮ್ಮ ಭಾಷಣವನ್ನು ತಿದ್ದುಪಡಿ ಮಾಡಲು ನಿರ್ಧರಿಸಿದ್ದಾರೆ.

ವಿಧಾನಸಭೆಯಲ್ಲಿ ಬಹುತೇಕ ಶಾಸಕರ ಒತ್ತಾಯದ ಮೇರೆಗೆ ಸ್ಪೀಕರ್ ಕಾಗೇರಿ ಅವರು ತಮ್ಮ ಹೇಳಿಕೆಯಲ್ಲಿದ್ದ ಆಕ್ಷೇಪಾರ್ಹ ಸಾಲುಗಳನ್ನು ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ವಿಷಯ ಕುರಿತು ನಿನ್ನೆ ಚರ್ಚೆ ಆರಂಭದ ಹಂತದಲ್ಲಿ ಸ್ಪೀಕರ್ ಅವರು ಭಾಷಣ ಮಾಡಿ ಸಂವಿಧಾನ ರಚನೆಯಲ್ಲಿ ವಿಶೇಷವಾಗಿ ಸರ್.ಬಿ.ಎನ್.ರಾವ್ ಇವರ ಕೊಡುಗೆ ಅಪಾರವಾದದ್ದು, ಮೂಲತಃ ಮಂಗಳೂರಿನವರಾದ ಇವರು ಭಾರತ ಸಂವಿಧಾನದ ರಚನಾ ಸಭೆಯ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದರು ಹಾಗೂ ಶ್ರೀಯುತರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನ ಕರಡು ಸಮಿತಿಗೆ ಕಳುಹಿಸಲಾಯಿತು ಎಂದು ಹೇಳಿದ್ದರು. ಆದರೆ  ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನ ಎಚ್.ಕೆ.ಪಾಟೀಲ್ ಅವರು ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದಿಯಾಗಿ ಬಹಳಷ್ಟು ಮಂದಿ ಸದಸ್ಯರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಶ್ರಮ ಅವಿರತವಾದದ್ದು ಎಂದು ಹೇಳಿದ್ದರು.

 ಸ್ಪೀಕರ್ ಅವರು ಮಾಡಿರುವ ಭಾಷಣ ಇತಿಹಾಸವನ್ನು ತಪ್ಪಾಗಿ ದಾಖಲಿಸಿದಂತಾಗುತ್ತದೆ. ಕೂಡಲೇ ಅದನ್ನು ತಿದ್ದುಪಡಿ ಮಾಡಿ ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ಕಾಂಗ್ರೆಸ್‍ನ ಶಾಸಕರು ಧರಣಿ ನಡೆಸುತ್ತಿರುವ ವೇಳೆ ನೀವು (ಸ್ಪೀಕರ್) ಸಂವಿಧಾನದ ಚರ್ಚೆಗೆ ಚಾಲನೆ ನೀಡಿ ಭಾಷಣ ಮಾಡಿದ್ದೀರಿ. ಅದರೆ 7ನೇ ಪುಟದಲ್ಲಿ ಬಿ.ಎನ್.ರಾವ್ ಅವರ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಶಾಸನ ರಚನಾ ಸಮಿತಿ ಸದಸ್ಯರಾಗಿದ್ದ ಅವರು ಮೂಲ ಕರಡನ್ನು ರಚಿಸಿಕೊಟ್ಟಿದ್ದರು ಎಂದು ನೀವು ಹೇಳಿರುವುದು ತಪ್ಪಾಗಿದೆ. ಶಾಸಕರು ಈ ರೀತಿ ಮಾತನಾಡಿದ್ದರೇ ಬಿಟ್ಟು ಬಿಡಬಹುದಿತ್ತು. ಆದರೆ ಸ್ಪೀಕರ್ ಪೀಠದಿಂದ ನೀಡುವ ಹೇಳಿಕೆ ಅಧಿಕೃತವಾಗಿ ದಾಖಲಾಗುತ್ತದೆ. ಹೀಗಾಗಿ ಅದನ್ನು ಹಿಂಪಡೆಯಬೇಕು ಎಂದು ಹೇಳಿದರು. 

ಎಚ್.ಕೆ.ಪಾಟೀಲ್ ಅವರ ಸಲಹೆಗೆ ಮಾನ್ಯತೆ ನೀಡಿದ ಸ್ಪೀಕರ್, ಬಿ.ಎನ್.ರಾವ್ ಅವರು ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಈ ಮೂಲ ಕರಡನ್ನು ರಚನಾ ಸಭೆಯಲ್ಲಿ ಚರ್ಚಿಸಿ ಎಂಬವರೆಗಿನ ವಾಕ್ಯಗಳನ್ನು ಸ್ಪೀಕರ್ ಅವರು ಹಿಂಪಡೆದಿದ್ದಾರೆ. ತಿದ್ದುಪಡಿ ಮಾಡಿ ಬೇರೆ ಲಿಖಿತ ಭಾಷಣದ ಪ್ರತಿಯನ್ನು ಎಲ್ಲ ಸದಸ್ಯರಿಗೆ ಕಳುಹಿಸುವುದಾಗಿ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com