ವಿಧಾನಸಭಾ ಅಧಿವೇಶನ: ಸಂವಿಧಾನ ಕುರಿತು ಸದಸ್ಯರಿಂದ ವಿಸ್ತೃತ ಚರ್ಚೆ

ವಿಧಾನಸಭೆಯಲ್ಲಿಂದು ಸಂವಿಧಾನ ಕುರಿತು ವಿಶೇಷ ಕಲಾಪದಲ್ಲಿ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ವಿಧಾನಸಭೆಯಲ್ಲಿಂದು ಸಂವಿಧಾನ ಕುರಿತ ವಿಶೇಷ ಕಲಾಪದಲ್ಲಿ ಬಹುತೇಕ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಯಲ್ಲಿ ಇನ್ನಷ್ಟು ಸದಸ್ಯರು ಮಾತನಾಡಲು ಇರುವುದರಿಂದ ಇನ್ನೊಂದು ದಿನ ವಿಶೇಷ ಕಲಾಪ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕಾಂಗ್ರೆಸ್ ಹಿರಿಯ ಸದಸ್ಯ ರಮೇಶ್ ಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ದನಿಗೂಡಿಸಿದರು. ಚರ್ಚೆ ನಡೆಸಲು ತಮ್ಮದೇನು ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಬಳಿಕ ಸ್ಪೀಕರ್ ಅವರು ಸಿದ್ದರಾಮಯ್ಯ ಅವರು ಸೋಮವಾರ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಸೋಮವಾರವೂ ಸಂವಿಧಾನದ ಬಗ್ಗೆ ಕಲಾಪ ನಡೆಯಲಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಒಂದು ಓಟಿನಲ್ಲಿ ಗೆದ್ದ ಶಾಸಕನಿಗೂ, ಒಂದು ಲಕ್ಷ ಓಟಿನ ಅಂತರದಲ್ಲಿ ಗೆದ್ದ ಶಾಸಕನಿಗೂ ಒಂದೇ ಅಧಿಕಾರ ಇದೆ. ಇದು ನಮ್ಮ ಸಂವಿಧಾನ ನಮಗೆ ನೀಡಿರುವ ಅಧಿಕಾರ, ಇದೇ ಸಮಾನತೆ. ರಾಜ್ಯದ ಜನಸಂಖ್ಯೆ 7 ಕೋಟಿ ಇದೆ. 3.5 ಕೋಟಿಯಷ್ಟು ಮಹಿಳೆಯರಿದ್ದಾರೆ. ಆದರೆ ಇಲ್ಲಿ ಎಷ್ಟು ಮಂದಿ ಶಾಸಕಿಯರಿದ್ದೇವೆ..? ಎಂದು ಪ್ರಶ್ನಿಸಿದ ಅವರು, ಇಷ್ಟೊಂದು ಮಹಿಳಾ ಜನಸಂಖ್ಯೆ ಇದ್ದರೂ ಬೆರಳೆಣಿಕೆ ಜನಪ್ರತಿನಿಧಿಗಳು ಆಯ್ಕೆಯಾಗಿ ಬರುತ್ತಿದ್ದಾರೆ. ಇನ್ನಷ್ಟು ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಬರುವಂತೆ ಆಗಬೇಕು ಎಂದರು.

ಇಂದಿಗೂ ಮಹಿಳೆಯರ ಮೇಲಿನ ಶೋಷಣೆ ಕಡಿಮೆಯಾಗಿಲ್ಲ. ಹೆಣ್ಣು ಮಕ್ಕಳು ಜಾಸ್ತಿ ಓದಿದರೆ ನಿನಗೆ ಗಂಡು ಎಲ್ಲಿ ಹುಡುಕುವುದು, ಮದುವೆಯಾದರೆ ಯಾವಾಗ ಮಕ್ಕಳು ಎಂದು ಕೇಳುತ್ತಾರೆ ? ಮಕ್ಕಳಾದರೆ ಇನ್ನು ಮುಂದೆ ಕೆಲಸ ಬೇಡ, ಮಕ್ಕಳನ್ನು ನೋಡಿಕೊಂಡಿರು ಎಂದು ಹೇಳುತ್ತಾರೆ. ಕೆಲಸದಲ್ಲಿ ಬಡ್ತಿ ಸಿಕ್ಕಿದರೂ ಅದನ್ನ ಹೇಗೆ ತೆಗೆದುಕೊಂಡಳು ಎಂದು ಮಾತನಾಡುತ್ತಾರೆ. 12ನೇ ಶತಮಾನದಿಂದ ಇಂದಿನವರೆಗೆ ಮಹಿಳೆ ಎಷ್ಟು ಮಂದಿ ಮುಂದೆ ಬಂದಿದ್ದಾಳೆ ಎಂಬುದನ್ನು ನೋಡಬೇಕಾಗಿದೆ. ಸಮಾನತೆ ಇನ್ನೂ ಬಂದಿಲ್ಲ. ಶಿಷ್ಟಾಚಾರಕ್ಕಾಗಿ ಮಾತ್ರ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಆಲೋಚನೆ ಮಾಡಬೇಕಾಗಿದೆ ಎಂದರು.

ಜೆಡಿಎಸ್‌ನ ಶಿವಲಿಂಗೇಗೌಡ ಮಾತನಾಡಿ, ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಕೇವಲ ಸ್ವಾತಂತ್ರ್ಯ ಕೊಟ್ಟು ಹೋಗಲಿಲ್ಲ. ಭಾರತೀಯರಿಗೆ ಕಲಿಸಬಾರದ್ದನ್ನೆಲ್ಲಾ ಕಲಿಸಿಹೋದರು. ಭ್ರಷ್ಟಚಾರವನ್ನು ಬಿಟ್ಟು ಹೋದರು. ಸುಸಂಸ್ಕೃತರು ನಮ್ಮ ಭಾರತೀಯರು, ನಾವು ಅರಳಿ ಮರ, ಗೋವುಗಳನ್ನು ದೇವರು ಎಂದು ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದ ಅವರು, ಜನಪ್ರತಿನಿಧಿಗಳು ಹಣ ಕೊಡದೇ ಚುನಾವಣೆ ಎದುರಿಸಿ ಗೆದ್ದು ಬಂದರೆ ಇಲ್ಲಿ ಭ್ರಷ್ಟಾಚಾರ ತನ್ನಿಂದ ತಾನೇ ಇಲ್ಲವಾಗುತ್ತದೆ. ಆದರೆ ವ್ಯವಸ್ಥೆ ಈ ರೀತಿಯಾಗಿಲ್ಲ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರಿಯಾಂಕ್ ಖರ್ಗೆ, ಶಾಸಕರು ಕೋಟಿ ಕೋಟಿಗೆ ಸೇಲ್ ಆಗುತ್ತಿರುವಾಗ ನಮಗೆ ಒಂದೆರಡು ಲಕ್ಷವೂ ರೇಟ್ ಇಲ್ಲವೇ? ನಾವು ಅಷ್ಟಕ್ಕೂ ಬೆಲೆ ಬಾಳಲ್ವಾ? ಎಂದು ನನ್ನ ಕ್ಷೇತ್ರದ ಗ್ರಾಮ ಪಂಚಾಯತ್ ಸದಸ್ಯರು ನನ್ನನ್ನು ಕೇಳುತ್ತಿದ್ದಾರೆ. ಶಾಸಕರ ಖರೀದಿಗೆ ನಮ್ಮ ರಾಜ್ಯ ಮಾದರಿಯಾಗಿದೆ. ಈ ವಿಚಾರ ಚರ್ಚೆ ಆಗಬೇಕು ಅಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತ್ರಿಕಾಲ ಜ್ಞಾನಿಗಳು. ಅವರಿಗೆ ಹಿಂದೆ ಏನಾಯ್ತು, ಈಗ ಏನಾಗುತ್ತಿದೆ, ಮುಂದೇನಾಗುತ್ತದೆ ಎಂಬುದು ತಿಳಿದಿತ್ತು. ಅದೇ ಅವರ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಹಾಗಾಗಿಯೇ ಸಂಘಪರಿವಾರದ ದತ್ತೋಪಂಥ ಹೆಗಡೆಯವರು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಮಹನೀಯರು, ಪ್ರಾಥಸ್ಮರಣೀಯರು ಎಂದು ಉಲ್ಲೇಖಿಸಿದ್ದಾರೆ‌ ಎಂದರು.

ಯತ್ನಾಳ್ ಮಾತನಾಡುವಾಗ, ಮಹಾಭಾರತ ಬರೆದವರು ಕೆಳಜಾತಿಯ ವಾಲ್ಮೀಕಿ ಅಂದು ಬಾಯ್ತಪ್ಪಿ ಹೇಳಿದರು. ತಕ್ಷಣ ಸರಿಪಡಿಸಿಕೊಂಡ ಅವರು, ಮಹಾಭಾರತವನ್ನು ವ್ಯಾಸರು ಎಂದು ಸರಿಪಡಿಸಿಕೊಂಡರು.

ಈ ದೇಶದಲ್ಲಿ ಇಬ್ಬರೇ ಗಾಂಧಿಗಳಿಗೆ ಮಾತ್ರ ಪ್ರಾಮುಖ್ಯತೆ ಸಿಕ್ಕಿದೆ. ಒಬ್ಬರು ಮಹಾತ್ಮಾಗಾಂಧಿ ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದೇ ಇಲ್ಲ. ಡಾ.ಅಂಬೇಡ್ಕರರು ಈ ದೇಶದ ಪ್ರಧಾನಿಯಾಗಬೇಕಿತ್ತು. ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಹಾಗಾಗಿಯೇ ಹಿಂದೂಗಳು ನೆಮ್ಮದಿಯಿಂದ ಇರುವಂತಾಯಿತು.

ಡಾ.ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿಎಎ ಜಾರಿಗೆ ತಂದಿದ್ದಾರೆ‌. ಆದರೆ ಅದರ ವಿರುದ್ದ ವ್ಯವಸ್ಥಿತ ಪಿತೂರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com