ಪಕ್ಷದಿಂದ ದೂರ ಉಳಿದ ಮಾಜಿ ಸಚಿವ ಜಿ.ಟಿ.ದೇವೇಗೌಡರ ವಿರುದ್ಧ ಕ್ರಮ ಕೈಗೊಳ್ಳಲು ವರಿಷ್ಠರ ಮೀನಾಮೇಷ

ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇ ಗೌಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ ಜಿ.ಟಿ.ದೇವೇ ಗೌಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ನಂತರ ಪಕ್ಷದ ಕಾರ್ಯಕ್ರಮಗಳಿಂದ ದೂರ ಸರಿದಿರುವ ಜಿ.ಟಿ.ದೇವೇಗೌಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ. ಆದರೆ, ವರಿಷ್ಠರು ಇನ್ನು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ನಿಂದ ಬಹುತೇಕ ಹೊರಗುಳಿದಿರು ಜಿಟಿ ದೇವೇಗೌಡ ಅವರು ಈ ಹಿಂದೆ ಬಹಿರಂಗವಾಗಿಯೇ ಪಕ್ಷಗ ವರಿಷ್ಠರ ವಿರುದ್ಧ ಸಾರ್ವಜನಿಕವಾಗಿ ಗುಡುಗಿದ್ದರು. ಅಲ್ಲದೆ ಈ ಹಿಂದೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ನಾನು ಡಿಸಿಎಂ ಹಾಗೂ ಬಿಜೆಪಿಯ ಲಕ್ಷ್ಮಣ ಸವದಿಗೆ ಮತ ಹಾಕಿದ್ದೇನೆ. ಲಕ್ಷ್ಮಣ ಸವದಿ ಈ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ ಅವರಿಗೆ ಓಟ್ ಹಾಕೋದು ನಮ್ಮ ಕರ್ತವ್ಯ. ನಾನು ಜೆಡಿಎಸ್ ಪಕ್ಷದ ಶಾಸಕ, ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಗೆಲ್ಲಿಸಿದ್ದಾರೆ. ಯಾರಿಗೆ ಮತ ಹಾಕಬೇಕು ಅಥವಾ ಹಾಕಬಾರದು ಎಂದು ಯಾವ ನಿರ್ದೇಶನವನ್ನೂ ನನಗೆ ಕೊಟ್ಟಿಲ್ಲ. ನನ್ನ ಬಳಿ ಯಾರೂ ಕೂಡಾ ಮಾತಾಡಿಲ್ಲ. ಚುನಾವಣೆಯಲ್ಲಿದ್ದ ಪಕ್ಷೇತರ ಅಭ್ಯರ್ಥಿ ನಿವೃತ್ತಿ ಪಡೆದುಕೊಂಡಿದ್ದಾರೆ. ಶಾಸಕರಾಗಿ ನಮ್ಮ ಮತ ವ್ಯರ್ಥ ಆಗಬಾರದು. ಲಕ್ಷ್ಮಣ ಸವದಿ ಈ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು ಅವರಿಗೆ ಮತ ಹಾಕುವುದು ನನ್ನ ಕರ್ತವ್ಯ. ನಾನು ಅದನ್ನು ಮಾಡಿದ್ದೇನೆ ಎಂದರು. ಆ ಮೂಲಕ ಬಹಿರಂಗವಾಗಿಯೇ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದರು. 

ಇದೇ ವಿಚಾರವಾಗಿ ಮಾತನಾಡಿದ್ದ ಪಕ್ಷದ ವರಿಷ್ಠ ನಾಯಕ ಎಚ್ ಡಿ ಕುಮಾರಸ್ವಾಮಿ ಜಿಟಿ ದೇವೇಗೌಡರು ಪಕ್ಷದಲ್ಲಿರುವುದೇ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ಅವರು ಈಗಾಗಲೇ ಹಲವಾರು ಹೇಳಿಕೆಗಳನ್ನ ಕೊಟ್ಟುಕೊಂಡಿದ್ದಾರೆ, ಇಲ್ಲಿರ್ತಾರೋ ಎಲ್ಲಿರ್ತಾರೋ ಅಂತ ಕಾದು ನೋಡೋಣ ಎಂದು ಹೇಳಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಈ ಬಗ್ಗೆ ಪರೋಕ್ಷ ಕಿಡಿಕಾರಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಪಕ್ಷ ಬಿಟ್ಟು ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ.  ಯಾರೋ ಒಬ್ಬರು ಹೋಗುತ್ತಾರೆ ಎಂದ ಮಾತ್ರಕ್ಕೆ ಪಕ್ಷ ಮುಳುಗುವುದಿಲ್ಲ. ಈ ಹಿಂದೆಯೂ ಜಿ. ಟಿ. ದೇವೇಗೌಡ ಬಿಜೆಪಿಗೆ ಹೋಗಿ ಅಲ್ಲಿ ಅಧಿಕಾರ ಅನುಭವಿಸಿದ್ದರು. ಜಿ. ಟಿ. ದೇವೇಗೌಡರು ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಆ ಪಕ್ಷ ಬಿಟ್ಟು ಜೆಡಿಎಸ್‌ಗೆ ವಾಪಸ್ ಆದರು. ಮತ್ತೆ ಹೋಗಬಹುದು. ಅದಕ್ಕೆ ಹೆದರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com