ಚುನಾವಣಾ ನೀತಿಸಂಹಿತೆಯಿಂದ ಮೂತ್ರ ವಿಸರ್ಜನೆಗೂ ತೊಂದರೆ: ಪರಿಷತ್ತಿನಲ್ಲಿ ಸರ್ವ ಸದಸ್ಯರ ಅಳಲು

ಚುನಾವಣಾ ನೀತಿ ಸಂಹಿತೆಯಿಂದ ಮೂತ್ರವಿಸರ್ಜನೆಗೂ ತೊಂದರೆಯಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯಿಂದ ಮೂತ್ರವಿಸರ್ಜನೆಗೂ ತೊಂದರೆಯಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಚುನಾವಣಾ ನೀತಿ ಸಂಹಿತೆ ಮೇಲೆ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳ ಮೇಲಾಗುತ್ತಿರುವ  ಪರಿಣಾಮದ ಬಗ್ಗೆ ಕಾಯಿದೆ ತಿದ್ದುಪಡಿಯಾಗಬೇಕೆಂಬ ಬಗ್ಗೆ ಚರ್ಚೆ ವಿಧಾನ ಪರಿಷತ್ತಿನಲ್ಲಿ ವ್ಯಕ್ತವಾಯಿತು.

ವಿಧಾನಸಭಾಧ್ಯಕ್ಷರು ಸಭಾಪತಿಗಳು ಹಾಗೂ ಸರ್ವಪಕ್ಷಗಳ ಸಭೆ  ಕರೆದು ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕೆಂಬ ಅಭಿಪ್ರಾಯವನ್ನು ಸದಸ್ಯರು ಪಕ್ಷಭೇದ  ಮರೆತು ವ್ಯಕ್ತಪಡಿಸಿದರು.

ಮೇಲ್ಮನೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ  ಸಂಬಂಧಿಸಿದಂತೆ ಕಾನೂನು ಸಚಿವ ಮಾಧುಸ್ವಾಮಿ, ಕಾಯಿದೆಯಿಂದ  ಜನಪ್ರತಿನಿಧಿಗಳ ಸ್ಥಿತಿ ಹಾಗೂ ನೀತಿ ಸಂಹಿತೆ ನೆಪದಲ್ಲಿ ಆಯೋಗ ಹಾಕುತ್ತಿರುವ ನಿಬಂಧನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಮಾಧುಸ್ವಾಮಿ ಅವರು ಹಾಕಿದ ಪೀಠಿಕೆಗೆ  ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಎಲ್ಲಾ ಪಕ್ಷಗಳ ಸದಸ್ಯರು ಪರಸ್ಪರ  ಭಿನ್ನಾಭಿಪ್ರಾಯ ಮರೆತು ನೀತಿಸಂಹಿತೆಗೆ ತಿದ್ದುಪಡಿ ಮಾಡಲೇಬೇಕೆಂದು ಒತ್ತಾಯಿಸಿದರು.

ಮಾಧುಸ್ವಾಮಿ ಮಾತನಾಡಿ, ಚುನಾವಣೆ  ಬಂದಾಗ ನಮ್ಮದು ವಿಲನ್‌ ಪಾಡು. ಚುನಾವಣಾ ಆಯೋಗ ಸಾಕಷ್ಟು ಕಿರಿಕಿರಿ ಮಾಡುತ್ತದೆ. ನಮ್ಮ ಮೇಲೆ ಅಧಿಕಾರ ಚಲಾಯಿಸಿ, ಇಲ್ಲಸಲ್ಲದ ನಿಯಮ‌ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಮೂತ್ರ ವಿಸರ್ಜನೆಗೂ ಅವಕಾಶ ನೀಡಲಿಲ್ಲ ಎಂದಾಗ, ಮಧ್ಯಪ್ರವೇಶಿಸಿದ ಸಚಿವ ಜಗದೀಶ್  ಶೆಟ್ಟರ್, ತಮ್ಮ‌ತಾಯಿಯ ತವರುಮನೆ ಬದಾಮಿ ತಾಲೂಕಿನ ಕೆರೂರಿಗೆ ಹೋಗಿದ್ದಾಗ ತಮಗೂ‌ ಇಂತಹ ಅನುಭವ ಆಗಿದೆ. ಶಾಲೆಯ ಶೌಚಾಲಯಕ್ಕೆ‌ ಹೋಗಲು ತಮ್ಮನ್ನು ಬಿಡಲಿಲ್ಲ. ಮುಖ್ಯಮಂತ್ರಿಯಾಗಿದ್ದ ತನಗೂ ಶೌಚಾಲಯಕ್ಕೆ ಬಿಡಲಿಲ್ಲ. ಕೊನೆಗೆ ಪರಿಚಯಸ್ಥರ ಮನೆಗೆ ಹೋಗಿ ಬರಬೇಕಾಯಿತು ಎಂದರು.

ತಮ್ಮ ಅನುಭವವನ್ನೂ‌ ಬಿಚ್ಚಿಟ್ಟ ಬಸವರಾಜ ಹೊರಟ್ಟಿ, ಹಾವೇರಿ ಜಿಲ್ಲಾ ಮಂತ್ರಿಯಾಗಿದ್ದಾಗ ಮೂತ್ರ ವಿಸರ್ಜನೆಗೆ ಐಬಿಗೆ ಹೊರಟಿದ್ದೆ. ಆದರೆ ಪೊಲೀಸರು ತಡೆದು ನಿಲ್ಲಿಸಿದರು. ಪೇದೆ ಒಳಗೆ ಬಿಡಲಿಲ್ಲ, ಕೊನೆಗೆ ಗೋಡೆ ಬಳಿ ಹೋಗಿ ವಿಸರ್ಜನೆ ಮಾಡಿ ಎಂದು ಐಬಿಯ ಬಾಗಿಲು ತೆಗೆಯಲೇ ಇಲ್ಲ. ಅದು ಹೇಗೋ ಮುಗಿಸಿಕೊಂಡು ಬಂದೆ ಎಂದಾಗ ಎಲ್ಲರೂ ಗೊಳ್‌ ಎಂದು ನಕ್ಕರು.

ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಮಾತನಾಡಿ, ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ಅತಿಯಾದ ನಿಬಂಧನೆ‌  ಹೇರುತ್ತಿದ್ದಾರೆ. ದೇವರ ಹುಂಡಿಗೆ ಐದು ರೂಪಾಯಿ ದಕ್ಷಿಣೆಯೂ ಹಾಕದಂತಾಗಿದೆ. ಎಲ್ಲದಕ್ಕೂ ನೀತಿ ಸಂಹಿತೆ ಎನ್ನುತ್ತಾರೆ. ಇನ್ನು ಉಪಚುನಾವಣೆಯಂತೂ ಕೇಳಲೇ ಬೇಡಿ ಎಂದರು.

ಆಗ ಜೆಡಿಸ್‌ನ ಮಾದೇಗೌಡ, ಮಂಡ್ಯದ ಮದ್ದೂರಿನ‌ ಶಾಲೆಯ ಕಾರ್ಯಕ್ರಮವೊಂದಕ್ಕೆ ತಮಗೆ ಆಹ್ವಾನ ಬಂದಿತ್ತು. ಗಡಿ ಭಾಗಕ್ಕೆ ತೆರಳುತ್ತಿದ್ದಂತೆ ಅಧಿಕಾರಿಗಳು ಕಾರನ್ನು ವಶಕ್ಕೆ  ಪಡೆದರು. ಸ್ವಂತ ಕಾರಿನಲ್ಲಿ‌ ಹೋದರೆ ಅದನ್ನೂ ವಶಪಡಿಸಿಕೊಂಡರು. ಚುನಾವಣೆ ನಡೆದಿದ್ದು ಕೆ.ಆರ್.ಪೇಟೆಯಲ್ಲಿ. ಇಡೀ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಎಂದರೇನು? ಆಗ ಅಧಿಕಾರಿಗಳಿಗೆ ಪತ್ರ ಬರೆದು ನಿಬಂಧನೆ ಸಡಿಲಿಸಬೇಕೆಂದು ಮನವಿ  ಮಾಡಿದೆ. ಬೆಂಗಳೂರಿನಲ್ಲಾದರೆ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ನೀತಿ‌ ಸಂಹಿತೆ  ಜಾರಿಯಲ್ಲಿರುತ್ತದೆ‌. ಬೇರೆ ಕ್ಷೇತ್ರಗಳಲ್ಲಾದರೆ ಇಡೀ ಜಿಲ್ಲೆಗೆ ನೀತಿ ಸಂಹಿತೆ  ಜಾರಿಯಲ್ಲಿರುತ್ತದೆ. ನಿಯಮಗಳ ಪ್ರಕಾರ ಚುನಾವಣೆ ಘೋಷಣೆಯಾದಾಗ ಹೊಸ ಕಾರ್ಯಕ್ರಮಗಳನ್ನು  ಘೋಷಣೆ ಮಾಡಬಾರದು. ಮತದಾರರ ಮೇಲೆ ಪ್ರಭಾವ ಆಗಬಾರದು ಎಂದು ಇದೆಲ್ಲ ಅನುಸರಿಸುತ್ತೇವೆ  ಎಂದರು.

ಆಗ ಕಾಂಗ್ರೆಸ್‌ನ ಸಿ‌ಎಂ.ಇಬ್ರಾಹಿಂ‌ ಮಾತನಾಡಿ, ಬಾದಾಮಿ ಕ್ಷೇತ್ರಕ್ಕೆ ಚುನಾವಣೆ ಪ್ರಚಾರಕ್ಕೆ ಹೋದಾಗ ಅಧಿಕಾರಿಗಳು ಅತಿಯಾದ ತಪಾಸಣೆ‌ ನಡೆಸಿದರು. ನನ್ನ ಬಟ್ಟೆ  ಬಿಚ್ಚುವುದನ್ನು ಒಂದು ಬಿಟ್ಟು ಉಳಿದ್ದೆಲ್ಲವೂ ಮಾಡಿದರು ಎಂದು ಹಾಸ್ಯ ಚಟಾಕಿ  ಹಾರಿಸಿದರು. ನಾಲ್ಕು ವರ್ಷಗಳ ಕಾಲ ನಾವು ಅಧಿಕಾರ ಚಲಾಯಿಸಿರುತ್ತೇವೆ. ಆದರೆ ಅಧಿಕಾರಿಗಳು ಬರೀ ಒಂದು ತಿಂಗಳಿನಲ್ಲಿ ತಮ್ಮ ಅಷ್ಟೂ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ ಎಂದರು.

ಜೆಡಿಎಸ್‌ನ ತಿಪ್ಪೇಸ್ವಾಮಿ, ಜನಪ್ರತಿನಿಧಿ ಕಾಯಿದೆಗಳಿಗೆ ಸಡಿಲಿಕೆ ತರಲು ನಿರ್ಣಯ ಕೈಗೊಳ್ಳಬೇಕು  ಎಂದು ಒತ್ತಾಯಿಸಿದರು.

ಜಗದೀಶ್ ಶೆಟ್ಟರ್ ಮಾತನಾಡಿ,‌ ಬರೀ ಚರ್ಚೆಯಿಂದ ಸಮಸ್ಯೆ ಪರಿಹಾರ  ಸಾಧ್ಯವಿಲ್ಲ. ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳೋಣ. ಸಭಾಪತಿ ಮತ್ತು ಸಭಾಧ್ಯಕ್ಷರು ಹಾಗೂ ಸರ್ವಪಕ್ಷಗಳ ಸಭೆ ಕರೆದು ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದು ಅಲ್ಲಿನ ಅಭಿಪ್ರಾಯವನ್ನು  ಆಯೋಗಕ್ಕೆ ತಿಳಿಸೋಣ ಎಂದರು.

ಇದಕ್ಕೂ ಮುನ್ನ ಚರ್ಚೆ ಆರಂಭಿಸಿದ ಮಾಧುಸ್ವಾಮಿ,  ಸಂವಿಧಾನದ ಆಶಯಗಳ ಮೇಲೆ‌ ಮಾತನಾಡಿ‌, ಸಂವಿಧಾನದ ಮಹತ್ವ ಮೂರು ಅಂಗಗಳ ಮಹತ್ವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com