'ನನ್ನ ತಂದೆ ಪರಿಷತ್ ಸದಸ್ಯರಾಗಿದ್ದರೂ ಊರಿನಲ್ಲಿದ್ದ ಕ್ಷೌರದ ಅಂಗಡಿಯೊಳಗೆ ಪ್ರವೇಶ ಸಿಗುತ್ತಿರಲಿಲ್ಲ'

ಸಚಿವ ಸಿ.ಟಿ‌.ರವಿ ತಮ್ಮದೇ ಇತಿಹಾಸ ಹೇಳಿದರೆ ಹೊರತು ಭಾರತದ ವಾಸ್ತವ ಇತಿಹಾಸವನ್ನಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸಚಿವರಿಗೆ ಕುಟುಕಿದರು.

Published: 10th March 2020 09:15 AM  |   Last Updated: 10th March 2020 09:15 AM   |  A+A-


G.Parameshwara

ಜಿ.ಪರಮೇಶ್ವರ

Posted By : Shilpa D
Source : UNI

ಬೆಂಗಳೂರು: ಸಚಿವ ಸಿ.ಟಿ‌.ರವಿ ತಮ್ಮದೇ ಇತಿಹಾಸ ಹೇಳಿದರೆ ಹೊರತು ಭಾರತದ ವಾಸ್ತವ ಇತಿಹಾಸವನ್ನಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸಚಿವರಿಗೆ ಕುಟುಕಿದರು.

ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲಿನ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಮನಸ್ಸಿನಲ್ಲಿ ನೋವಿದೆ‌. ಏಕೆಂದರೆ ನಾನು ದಲಿತ ಸಮುದಾಯಕ್ಕೆ ಸೇರಿದವನು.

ನಾನು 7ನೆ ತರಗತಿಯಲ್ಲಿ ಓದುವಾಗ ನಾನು ಹಾಗೂ ನನ್ನ ಅಕ್ಕ ಬೇರೆ ಊರಿಗೆ ಶಾಲೆಗೆ ಹೋಗಬೇಕಿತ್ತು. ಆಗ ಆ ಊರಿನಲ್ಲಿ ಕುಡಿಯಲು ನೀರು ಕೇಳಲು ಹೋದರೆ, ಮೊದಲು ನಮ್ಮನ್ನು ವಿಚಾರಿಸುತ್ತಿದ್ದರು. ನನಗೆ ಮನೆಯ ಹೊರಗೆ ನಿಲ್ಲಿಸಿ ನೀರನ್ನು ಮೇಲಿನಿಂದ ಹರಿಸುತ್ತಿದ್ದರು. ಬೊಗಸೆಯಲ್ಲಿ ಹಿಡಿದು ನೀರು ಕುಡಿಯಬೇಕಾಗಿತ್ತು ಎಂದು ಅವರು ಹೇಳಿದರು.

ನನ್ನ ತಂದೆ ಚಿಕ್ಕಮಗಳೂರಿನಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಆದರೂ, ನಮಗೆ ಊರಿನಲ್ಲಿದ್ದ ಕ್ಷೌರದ ಅಂಗಡಿಯೊಳಗೆ ಪ್ರವೇಶ ಸಿಗುತ್ತಿರಲಿಲ್ಲ. ಅಂಗಡಿ ಹೊರಗೆ ನಮ್ಮನ್ನು ಕೂರಿಸಿ ಕ್ಷೌರ ಮಾಡುತ್ತಿದ್ದರು. ನಾವು ನಿರ್ಲಕ್ಷಕ್ಕೆ ಒಳಗಾದ, ತುಳಿತಕ್ಕೊಳಗಾಗುವ ಜನ. ಈ ಅವಮಾನವನ್ನು ಸ್ವತಃ ನಾನು ಒಬ್ಬ ದಲಿತನಾಗಿ ಅನುಭವಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ಉನ್ನತ ಶಿಕ್ಷಣಕ್ಕಾಗಿ ನಾನು ಆಸ್ಟ್ರೇಲಿಯ ದೇಶಕ್ಕೆ ಹೋಗಿದ್ದೆ. ಅಲ್ಲಿ ನನ್ನ ಪ್ರೊಫೆಸರ್ ಒಬ್ಬರು ಪರಮೇಶ್ವರ್ ಭಾರತದಲ್ಲಿ ಅಸ್ಪೃಶರು ಎಂದು ಕರೆಯಲ್ಪಡುವವರು ಹೇಗೆ ಕಾಣುತ್ತಾರೆ ಎಂದು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ನಾವು ಅನುಭವಿಸುವ ನೋವನ್ನು ಇಲ್ಲಿಯೂ ಹೇಳಿಕೊಳ್ಳಬೇಕೆ ಎಂದು ನನಗೆ ಅನಿಸುತ್ತಿತ್ತು ಎಂದು ಅವರು ಹೇಳಿದರು.

1989ರಲ್ಲಿ ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನಂತರ ನನ್ನನ್ನು ಕ್ಷೇತ್ರಾದ್ಯಂತ ಮೆರವಣಿಗೆ ಮಾಡಿಸಿದರು. ಈ ವೇಳೆ ಆಂಜನೇಯ ಸ್ವಾಮಿ ದೇವಸ್ಥಾನವೊಂದಕ್ಕೆ ನನ್ನನ್ನು ಕರೆದುಕೊಂಡು ಹೋದರು. ನಾನು ಅಲ್ಲಿಂದ ತೆರಳಿದ ಬಳಿಕ ನನ್ನನ್ನು ದೇವಸ್ಥಾನದ ಒಳಗೆ ಪ್ರವೇಶ ಕೊಟ್ಟ ವಿಚಾರವನ್ನು ಮುಂದಿಟ್ಟುಕೊಂಡು ಜಗಳ ಮಾಡಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾವು ಆಧುನಿಕ ಸಮಾಜದಲ್ಲಿದ್ದೇವೆ ಎಂದು ಹೇಳುತ್ತಿದ್ದೇವೆ. ಆದರೆ, ಇನ್ನು ಎಷ್ಟು ವರ್ಷಗಳು ಬೇಕು ಈ ಪರಿಸ್ಥಿತಿ ಬದಲಾವಣೆಯಾಗಲು. ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟು ಹೋಗುತ್ತೇವೆ. ಸಂವಿಧಾನದ ಕಲಂ 17ರಲ್ಲಿ ಜಾತಿ ನಿರ್ಮೂಲನೆ ಬಗ್ಗೆ ತಿಳಿಸಲಾಗಿದೆ. ಅದನ್ನು ನಾವು ಆದ್ಯತೆ ಮೇರೆಗೆ ಮಾಡಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ದೇಶದಲ್ಲಿ ಶೇ.18ರಷ್ಟು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಅವರು ಭಾರತೀಯರಲ್ಲವೇ ? ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಇವತ್ತು ಆಡಳಿತದಲ್ಲಿದೆ. ಬಿಜೆಪಿಯು 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಗೂ ಟಿಕೆಟ್ ನೀಡಿಲ್ಲ ಎಂದು ಅವರು ಟೀಕಿಸಿದರು.

ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ಕಂದಕವನ್ನು ಮುಚ್ಚಲು ನಾವೆಲ್ಲ ಪ್ರಯತ್ನಿಸಬೇಕಿದೆ. ದೇಶದಲ್ಲಿ ಶೇ.38ರಷ್ಟು ಬಡತನವಿದೆ. ಆದರೆ, ಈಗ ನಮ್ಮ ಪ್ರಧಾನಿಗೆ ಪೌರತ್ವ ಕೊಡುವುದು ಆದ್ಯತೆಯಾಗಿದೆ. ಈ ದೇಶಕ್ಕೆ ಯಾವುದು ಮುಖ್ಯ ಬಡತನ ನಿವಾರಣೆಯೇ ಅಥವಾ ಜಾತೀಯತೆಯೆ ಎಂದು ಪರಮೇಶ್ವರ್ ಪ್ರಶ್ನಿಸಿದರು.


ಕೆ.ಎಸ್‌.ಈಶ್ವರಪ್ಪ ಅವರು, ನನ್ನ ಕ್ಷೇತ್ರ ಶಿವಮೊಗ್ಗದಲ್ಲಿ 12 ಮುಸ್ಲಿಂ ಬೂತ್‌ಗಳಿವೆ. 1989 ರಲ್ಲಿ ನಾನು ಚುನಾವಣೆಗೆ ನಿಂತು ಗೆದ್ದಾಗಲೂ ನನಗೆ ಒಂದೇ ಒಂದು ಮತ ಹಾಕಿರಲಿಲ್ಲ. ಮೂರ್‍ನಾಲ್ಕು ಚುನಾವಣೆಗಳಲ್ಲೂ ನನಗೆ ಮತ ಬರಲಿಲ್ಲ, ಆದರೂ ನಾನು ಆ ಸಮುದಾಯದವರು ಸಮಸ್ಯೆ ಹೇಳಿಕೊಂಡು ಬಂದಾಗ ಪರಿಹಾರ ಕಲ್ಪಿಸುತ್ತಿದ್ದೆ. ನನ್ನ ಪ್ರಯತ್ನ ನಾನು ಮಾಡುತ್ತಿದ್ದೆ, ಕಳೆದ ಚುನಾವಣೆಯಲ್ಲಿ 362 ಮತ ಬಂದಿದೆ. ಕಾಂಗ್ರೆಸ್‌ನವರು ಬಿಜೆಪಿಗೆ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಅವರು ನಮ್ಮತ್ತ ಬರುತ್ತಿರಲಿಲ್ಲ, ಆದರೆ, ಅವರಿಗೆ ವಾಸ್ತವ, ಸತ್ಯ ಗೊತ್ತಾದ ಮೇಲೆ ಬಂದೇ ಬರುತ್ತಾರೆ ಎಂದರು.

ಆಗ, ಪರಮೇಶ್ವರ್‌, ನೀವೇ ಮುಸ್ಲಿಂ ಸಮುದಾಯದವರಿಗೆ ಬಿಜೆಪಿ ಟಿಕೆಟ್‌ ಬೇಕು ಎಂದರೆ ಬಿಜೆಪಿ ಕಚೇರಿಯಲ್ಲಿ ನಾಲ್ಕೈದು ವರ್ಷ ಕಸ ಗುಡಿಸಬೇಕು ಎಂದು ಹೇಳಿದ್ದೀರಿ ಎಂದು ನೆನಪಿಸಿದರು. 

Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp