ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುತ್ತೇವೆ ಎನ್ನುವುದು ಮೂರ್ಖತನದ ಪರಮಾವಧಿ: ಕೃಷ್ಣಬೈರೇಗೌಡ

ಇಸ್ರೇಲ್‌, ಇಸ್ತೋನಿಯಾದಂತಹ ಸಣ್ಣ ದೇಶಗಳಲ್ಲೂ ಏಕರೂಪ ನಾಗರಿಕ ಸಂಹಿತೆ ಸಾಧ್ಯವಾಗಿಲ್ಲ. ಆದ್ದರಿಂದ ಸಾವಿರಾರು ಭಾಷೆ, ಸಂಸ್ಕೃತಿ, ಧರ್ಮಗಳಿರುವ ಭಾರತದಲ್ಲಿ ಇಂತಹ ಪ್ರಯತ್ನ ಮೂರ್ಖತನದ ಪರಮಾವಧಿ.
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ

ಬೆಂಗಳೂರು: ಇಸ್ರೇಲ್‌, ಇಸ್ತೋನಿಯಾದಂತಹ ಸಣ್ಣ ದೇಶಗಳಲ್ಲೂ ಏಕರೂಪ ನಾಗರಿಕ ಸಂಹಿತೆ ಸಾಧ್ಯವಾಗಿಲ್ಲ. ಆದ್ದರಿಂದ ಸಾವಿರಾರು ಭಾಷೆ, ಸಂಸ್ಕೃತಿ, ಧರ್ಮಗಳಿರುವ ಭಾರತದಲ್ಲಿ ಇಂತಹ ಪ್ರಯತ್ನ ಮೂರ್ಖತನದ ಪರಮಾವಧಿ. ಇದನ್ನು ಭಾರತೀಯರು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಪ್ರತಿಪಾದಿಸಿದ್ದಾರೆ.

ವಿಧಾನಸಭೆಯಲ್ಲಿಂದು ಸಂವಿಧಾನದ ಮೇಲೆ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ಅದಕ್ಕೆ ಧಕ್ಕೆ ತಂದು ಏಕರೂಪತೆ ತರುತ್ತೇವೆ ಎಂಬುದು ಮೂರ್ಖತನ. ಇತ್ತೀಚಿನ ದಿನಗಳಲ್ಲಿ ವೈವಿಧ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿರುವುದು ಕಳಕಳಕಾರಿ ವಿಷಯ. ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಪ್ರಜಾಪ್ರಭುತ್ವವನ್ನು ಮೌಲ್ಯಮಾಪನ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಬಿಡುಗಡೆ ಮಾಡಿದ ವರದಿಯಲ್ಲಿ, 2014ರಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ 27ನೇ ಸ್ಥಾನದಲ್ಲಿತ್ತು. ಈಗ ಅದು 51ನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಿದೆ.

'ಫ್ರೀಡಂ ಹೌಸ್‌' ಎಂಬ ಜಾಗತಿಕ ಮಟ್ಟದ ಸಂಸ್ಥೆಯೊಂದು ಕಳೆದ ವಾರ ಬಿಡುಗಡೆ ಮಾಡಿದ ವರದಿಯಲ್ಲಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಾತ್ರವಲ್ಲ 86 "ಮುಕ್ತ ದೇಶ" (ಫ್ರೀ ಕಂಟ್ರಿ) ಎಂಬ ಪಟ್ಟಿ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತ, ಕೊನೆಯ ಮೂರನೆ ಸ್ಥಾನದಲ್ಲಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿರುವ ಭಾರತೀಯರ ಆತಂಕವನ್ನು ಹೆಚ್ಚಿಸಿದೆ ಎಂದರು.

ಸಂವಿಧಾನ ನಮ್ಮನ್ನು ಇದುವರೆಗೆ ಕಾಪಾಡಿದೆ. ನಮ್ಮ ವೈವಿಧ್ಯತೆ ದೇಶವನ್ನು ಕಾಪಾಡಿದೆ. ಈಗ ಎಚ್ಚರಗೊಳ್ಳದಿದ್ದರೆ ನಾವು ಇದುವರೆಗೆ ಮಾಡಿದ ಸಾಧನೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸಂವಿಧಾನದ ಮೂಲ ಆಶಯವನ್ನು ಅರ್ಥಮಾಡಿಕೊಂಡು, ಪ್ರಜಾಪ್ರಭುತ್ವ ಮೂಲತತ್ವಗಳನ್ನು ನಾವು ಎಲ್ಲರೂ ಅಳವಡಿಸಿಕೊಂಡರೆ ಪ್ರಜಾಪ್ರಭುತ್ವ ಅಡಿಪಾಯ ಹಾಕಿದವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಒಂದು ಗುಂಡು ಸೂಚಿಯನ್ನು ಕೂಡ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಗೋದಿಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅದಾದ ನಂತರ, ವಿಜ್ಞಾನ, ತಂತ್ರಜ್ಞಾನ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ದೇಶ ಅದ್ವಿತೀಯ ಸಾಧನೆ ಮಾಡಿದೆ. ಆಗ ಶಿಕ್ಷಣದ ಪ್ರಮಾಣ ಶೇ.17ರಷ್ಟಿತ್ತು. ಈಗ ದೇಶದ ಸಾಕ್ಷರತೆಯ ಪ್ರಮಾಣ ಶೇಕಡಾ 80ರ ಹತ್ತಿರ ಬಂದಿದೆ. ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುವ ಶಕ್ತಿಯನ್ನು ಸಹ ದೇಶ ಹೊಂದಿದೆ. ಐಟಿಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದೇವೆ. ಕೃಷಿಯಲ್ಲಿ ಪ್ರಗತಿ ಸಾಧಿಸಿ ಬೇರೆ ದೇಶಕ್ಕೆ ಆಹಾರ ಉತ್ಪನ್ನ ಕಳುಹಿಸುವ ಸಾಮರ್ಥ್ಯ ಹೊಂದಿದ್ದೇವೆ. ಈ ರೀತಿಯಲ್ಲಿ 70 ವರ್ಷಗಳಲ್ಲಿ ಪ್ರಗತಿ ಕಂಡು ಪ್ರಪಂಚದಲ್ಲಿ ಐದನೇ ಅಥವಾ ಆರನೇ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಇದಕ್ಕೆ ಸಂವಿಧಾನ ದಾರಿದೀಪವಾಗಿದೆ ಎಂದರು.

70 ವರ್ಷಗಳ ಕಾಲ ಕಳೆದಿದ್ದರೂ ನಮ್ಮ ಸಂವಿಧಾನ ಉಳಿದಿದೆ ಮತ್ತು ನಮ್ಮನ್ನು ಅದು ಮುಂದುವರಿಸಿಕೊಂಡು ಹೋಗುತ್ತಿದೆ ಎಂಬುದೇ ದೊಡ್ಡ ಸಾಧನೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಸಂವಿಧಾನ ಉಳಿದಿರುವುದೇ ದೊಡ್ಡ ಸಾಧನೆ ಎಂದು ಕೃಷ್ಣ ಬೈರೇಗೌಡ ಬಣ್ಣಿಸಿದರು.

ಪೋಲಂಡ್ ದೇಶದಲ್ಲಿ 10 ಬಾರಿ ಸಂವಿಧಾನ ಬದಲಾವಣೆಯಾಗಿದ್ದರೆ, ಗ್ರೀಕ್‌ ನಲ್ಲಿ 13 ಬಾರಿ, ಸಮಾನತೆ, ಪ್ರಜಾಪ್ರಭುತ್ವ ಘೋಷಣೆ ಹೊರಡಿಸಿದ ಫ್ರಾನ್ಸ್‌ನಲ್ಲಿ 16 ಬಾರಿ, ನಿಕರಾಗೋನಲ್ಲಿ 14 ಬಾರಿ, ವೆನಿಜುವೆಲಾದಲ್ಲಿ 24 ಬಾರಿ, ಡಾಮಿನಿಕ್ ರಿಪಬ್ಲಿಕ್ ನಲ್ಲಿ 32 ಬಾರಿ ಸಂವಿಧಾನ ಬದಲಾವಣೆ ಆಗಿದೆ. ನಮ್ಮ ಅಕ್ಕ ಪಕ್ಕದ ದೇಶಗಳಾದ ಪಾಕ್‌ ನಲ್ಲಿ 4 ಬಾರಿ, ಶ್ರೀಲಂಕಾ 3 ಬಾರಿ ಬದಲಾವಣೆ ಆಗಿದೆ. ಇಂತಹ ಸಂದರ್ಭದಲ್ಲಿ 70 ವರ್ಷಗಳಲ್ಲಿ ನಮ್ಮನ್ನು ನಮ್ಮ ಸಂವಿಧಾನ ಕಾಪಾಡಿದೆ, ಭಾರತೀಯರು ಕೂಡ ಅದನ್ನು ಗೌರವಿಸಿದ್ದಾರೆ. ಪ್ರಪಂಚದಲ್ಲೇ ಇದು ದೊಡ್ಡ ಸಾಧನೆ ಎಂದು ಅವರು ಬಣ್ಣಿಸಿದರು.

ಬಹುತೇಕ ರಾಷ್ಟ್ರಗಳಲ್ಲಿ ಸರಾಸರಿ 18 ವರ್ಷಗಳಲ್ಲಿ ಸಂವಿಧಾನ ಬದಲಾವಣೆ ಆಗುತ್ತಿದೆ. ಆದರೆ ನಮ್ಮ ದೇಶದ ಸಂವಿಧಾನ ಬದಲಾವಣೆ ಆಗದಿದ್ದುದಕ್ಕೆ ದೇಶಕ್ಕೆ ಅಡಿಪಾಯ ಹಾಕಿದ ನಾಯಕರ ದೂರದೃಷ್ಟಿಯ ಫಲವೇ ಆಗಿದೆ. ಇದು ಸಂಭ್ರಮಿಸುವ ವಿಷಯ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಇಷ್ಟೊಂದು ವೈವಿಧ್ಯತೆಯ ದೇಶ, ನಾನಾ ಭಾಷೆ, ಜನಾಂಗ, ಧರ್ಮ ಇರುವ ನಮ್ಮ ಭಾರತವನ್ನು ಹೋಲಿಸಿಕೊಳ್ಳಲು ಜಗತ್ತಿನಲ್ಲಿ ಇನ್ನೊಂದು ದೇಶವಿಲ್ಲ. ಆಹಾರ, ಭಾಷೆ, ಉಡುಗೆ ಬೇರೆ ಬೇರೆಯಾಗಿದ್ದರೂ ನಮ್ಮನ್ನು ಭಾರತೀಯತೆ ಒಗ್ಗಟ್ಟಾಗಿಸಿದೆ. ವೈವಿಧ್ಯತೆಯನ್ನು ಹತ್ತಿಕ್ಕಿದಾಗ ಒಂದಾಗಿ ಇರಲು ಸಾಧ್ಯವಿಲ್ಲ ಎಂದರು.

ಯೂನಿಟಿ ಎಂದರೆ ಏಕತೆ. ಏಕರೂಪತೆ ಅಲ್ಲ. ಏಕರೂಪ ಬೇರೆ, ಏಕತೆ ಬೇರೆ. ವೈವಿಧ್ಯತೆ ಉಳಿಯದಿದ್ದರೆ ಐಕ್ಯತೆ ಉಳಿಯುವುದಿಲ್ಲ. ಭಾರತ ದೇಶದ ಶಕ್ತಿಯೇ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಭಾರತದ ಸಂವಿಧಾನ ಪ್ರಪಂಚದಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುವ ಏಕ ಮಾತ್ರ ಸಂವಿಧಾನ ಎಂದು ತಜ್ಞರು ಹೇಳಿದ್ದಾರೆ. ಬೇರೆ ಯಾವ ಸಂವಿಧಾನವೂ ನಮ್ಮ ಸಂವಿಧಾನಕ್ಕೆ ಹತ್ತಿರವೂ ಬರುವುದಿಲ್ಲ ಎಂದರು.

ದೇಶದಲ್ಲಿ 116 ಸಮುದಾಯಗಳು ತಮ್ಮನ್ನು ಹಿಂದೂ ಮತ್ತು ಕ್ರಿಶ್ಚಿಯನ್‌ ಎಂದೂ, 35 ಸಮುದಾಯಗಳು ತಾವು ಹಿಂದೂಗಳು ಮತ್ತು ಇಸ್ಲಾಂ ಅನುಯಾಯಿಗಳು ಎಂದೂ, 94 ಸಮುದಾಯಗಳು ತಮ್ಮನ್ನು ಕ್ರಿಶ್ಚಿಯನ್ ಮತ್ತು ಬುಡಕಟ್ಟು ಅನುಯಾಯಿಗಳು ಎಂದೂ, 12 ಸಮುದಾಯಗಳು ತಮ್ಮನ್ನು ಮುಸ್ಲಿಮ್ ಮತ್ತು ಬ್ರಾಹ್ಮಣರು ಎಂದು ಕರೆದುಕೊಳ್ಳುತ್ತಾರೆ. 

ಇದು ಕೇಂದ್ರ ಸರ್ಕಾರದ ಎಎಸ್ಐ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶಗಳಾಗಿವೆ. ದೇಶದಲ್ಲಿ ಇಂತಹ ವೈವಿಧ್ಯತೆ ಇರುವಾಗ ಹೇಗೆ ಏಕರೂಪತೆ ಸಾಧ್ಯ. ಅವರ ಭಾವನೆಗಳನ್ನು ಗೌರವಿಸಬೇಕಾಗುತ್ತದೆ. ಈ ರೀತಿಯ ವೈವಿಧ್ಯತೆಯನ್ನು ದೇಶ ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಇತಿಹಾಸವನ್ನು ನಾವು ಸಂವಿಧಾನದ ಸಹಾಯದಿಂದ ನಿರ್ಮಿಸಿದ್ದೇವೆ. ಯಾರೂ ಮಾಡಲು ಸಾಧ್ಯವಾಗದ್ದನ್ನು ನಾವು ಮಾಡಿದ್ದೇವೆ. 2000ರಲ್ಲಿ ಯುರೋಪಿಯನ್‌ ಒಕ್ಕೂಟ ತಮ್ಮ ಮೋಟೋ ವನ್ನು "ಯುನೈಟೆಡ್ ಇನ್ ಡೈವರ್ಸಿಟಿ" ಎಂದು ಘೋಷಿಸಿಕೊಂಡಿದೆ. ಆದರೆ ಹಲವು ವರ್ಷಗಳ ಹಿಂದೆಯೇ ನಾವು ಈ ಘೋಷಣೆಯನ್ನು ಜಗತ್ತಿಗೆ ಹೇಳಿಕೊಟ್ಟಿದ್ದೇವೆ ಎಂದು ಕೃಷ್ಣಬೈರೇಗೌಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com