ಸದನದ ಘನತೆ ಮೀರಿದ ರಮೇಶ್ ಕುಮಾರ್-ಸುಧಾಕರ್: ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದನೆ
ವಿಧಾನಸಭೆಯಲ್ಲಿ ಸಚಿವ ಡಾ.ಸುಧಾಕರ್ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ "ತಮಗೆ ಹಿಂದೆ ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ ಎಂದು ನೀಡಿದ ಹೇಳಿಕೆಗೆ ಆಕ್ರೋಶಗೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವರ ವಿರುದ್ಧ ಕೆಂಡಾಮಂಡಲರಾಗಿ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.
Published: 11th March 2020 09:10 AM | Last Updated: 11th March 2020 09:10 AM | A+A A-

ಸುಧಾಕರ್ ಮತ್ತು ರಮೇಶ್ ಕುಮಾರ್
ಬೆಂಗಳೂರು: ವಿಧಾನಸಭೆಯಲ್ಲಿ ಸಚಿವ ಡಾ.ಸುಧಾಕರ್ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ "ತಮಗೆ ಹಿಂದೆ ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ ಎಂದು ನೀಡಿದ ಹೇಳಿಕೆಗೆ ಆಕ್ರೋಶಗೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಚಿವರ ವಿರುದ್ಧ ಕೆಂಡಾಮಂಡಲರಾಗಿ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.
ಈ ವೇಳೆ ಉಭಯ ನಾಯಕರೂ ಪರಸ್ಪರ ಅವಾಚ್ಯ ಶಬ್ಧಗಳನ್ನು ಬಳಸಿದ ಪ್ರಸಂಗವೂ ನಡೆಯಿತು.
ಭೋಜನವಿರಾಮದ ಬಳಿಕ ಡಾ.ಸುಧಾಕರ್ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ತುರ್ತುಪರಿಸ್ಥಿತಿಯನ್ನು ವಿವರಿಸುತ್ತಾ, ಎಮರ್ಜೆನ್ಸಿಯಿಂದಾಗಿ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ರಮೇಶ್ ಕುಮಾರ್, ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ.
ನೀವು ಕಳೆದ ನಾಲ್ಕು ತಿಂಗಳ ಹಿಂದೆ ರಾಹುಲ್ ಗಾಂಧಿಯವರೊಂದಿಗೆ ಲಂಡನ್‌ನಲ್ಲಿದ್ದೀರಿ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದ ಯಡಿಯೂರಪ್ಪ, ಈಶ್ವರಪ್ಪರಂತಹ ನಾಯಕರು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇದಕ್ಕೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ ಸುಧಾಕರ್, ನೀವು ಜೆಡಿಎಸ್ ನಲ್ಲಿದ್ದವರು ಆನಂತರ ಕಾಂಗ್ರೆಸ್ ಸೇರಿದಿರಿ, ನಮ್ಮ ವಿರುದ್ಧ ಬೆರಳು ತೋರಿಸಿ ಆರೋಪ ಮಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಬೆರಳೆಣಿಕೆ ಶಾಸಕರಷ್ಟೇ ಸದನದಲ್ಲಿ ಇದ್ದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯರು ಮೊಗಸಾಲೆಯಲ್ಲಿದ್ದರು. ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ಶಾಸಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು.
ತೀವ್ರ ಸಿಟ್ಟಿಗೆದ್ದ ರಮೇಶ್ ಕುಮಾರ್ ಅವರು ಸುಧಾಕರ್ ವಿರುದ್ಧ ಹೂಂಕರಿಸುತ್ತಲೇ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಧಾವಿಸಿದರು. ರಮೇಶ್ ಕುಮಾರ್ ಮತ್ತು ಸುಧಾಕರ್ ನಡುವೆ ಏಕವಚನ ಪದ ಪ್ರಯೋಗವೂ ಆಯಿತು. ಅಸಭ್ಯ, ಅವಾಚ್ಯ ಪದಗಳ ವಿನಿಯಮಯವೂ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ಶಿವಾನಂದ ಪಾಟೀಲ್ ಕಲಾಪವನ್ನು ಮುಂದೂಡಿದರು.