ಟ್ರಬಲ್ ಶೂಟರ್ ಗೆ ಕಂಟಕವಾಗುತ್ತಾ ಎಚ್ ಡಿಕೆ ಸ್ನೇಹ: ವಿಭಜನೆಯಾಗುತ್ತವಾ ಒಕ್ಕಲಿಗ ಮತಗಳು?

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಇಬ್ಬರಿಗೂ ತಳಮಳ ಮೂಡಿಸಿದೆ. ಇದು  ರಾಜ್ಯ ಕಾಂಗ್ರೆಸ್‌ಗೆ ವರದಾನವಾಗಿದ್ದರೆ ಜೆಡಿಎಸ್ ಗೆ ಸ್ವಲ್ಪ ಮಟ್ಟಿನ ತಲ್ಲಣ ಮೂಡಿಸಿದೆ.
ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಇಬ್ಬರಿಗೂ ತಳಮಳ ಮೂಡಿಸಿದೆ.  ಇದು  ರಾಜ್ಯ ಕಾಂಗ್ರೆಸ್‌ಗೆ ವರದಾನವಾಗಿದ್ದರೆ ಜೆಡಿಎಸ್ ಗೆ ಸ್ವಲ್ಪ ಮಟ್ಟಿನ ತಲ್ಲಣ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ಕಳೆದ 26 ವರ್ಷಗಳಿಂದ ಕಾಂಗ್ರೆಸ್​ ಪಕ್ಷಕ್ಕಾಗಿ ಅವಿರತವಾಗಿ ದುಡಿದವರು. ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಸಂದರ್ಭದಲ್ಲೂ ಪಕ್ಷದ ಟ್ರಬಲ್ ಶೂಟರ್​ ಆಗಿ ಆ ಸಮಸ್ಯೆಯನ್ನು ನಿಭಾಯಿಸಿದರು. ಕೊನೆಗೂ ಅವರ ಪರಿಶ್ರಮಕ್ಕೆ ಮಣೆಹಾಕಿರುವ ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಮಾನವನ್ನು ನೀಡಿದ್ದಾರೆ.

ಈ ಮೂಲಕ ಮಾಜಿ ಸಿಎಂ ಎಸ್​.ಎಂ. ಕೃಷ್ಣ ನಂತರ 20 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯದ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಮಾನ ದೊರೆತಂತಾಗಿದೆ. ಆದರೆ, ಮಾಜಿ ಸಿಎಂ ಹೆಚ್​ಡಿಕೆ ಜೊತೆಗಿನ ಸ್ನೇಹವೇ ಡಿಕೆಶಿ ಅವರಿಗೆ ಮುಳುವಾಗುತ್ತಾ? ಎಂಬ ವಾದವೂ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಆಪರೇಷನ್ ಕಮಲದ ಎಫೆಕ್ಟ್​ನಿಂದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಉರುಳಿದ್ದರೂ ಸಹ ಹೆಚ್​ಡಿಕೆ ಮತ್ತು ಡಿಕೆಶಿ ಆಪ್ತ ಸ್ನೇಹಿತರಾಗಿಯೇ ಮುಂದುವರೆದಿದ್ದಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಈ ಹಿಂದೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವ ಪಣ ತೊಟ್ಟಿದ್ದ ಡಿಕೆಶಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದರು. ಆದರೆ, ಆ ಪ್ರಯತ್ನದಲ್ಲಿ ವಿಫಲರಾಗಿದ್ದರು.

ಆದರೆ, ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ರಾಮನಗರ ಜಿಲ್ಲೆ ಮತ್ತು ರಾಜ್ಯದಲ್ಲಿ ಬಿಜೆಪಿ ಮಾತ್ರವಲ್ಲ ಜೆಡಿಎಸ್​ ವಿರುದ್ಧವೂ ಹೋರಾಟ ನಡೆಸಬೇಕಿದೆ. ರಾಮನಗರ ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧವೂ ಹೋರಾಟ ನಡೆಸಲೇಬೇಕಾದ ಸಂದಿಗ್ಧತೆಯಲ್ಲಿ ಅವರಿದ್ದಾರೆ. 

ಒಂದು ವೇಳೆ ಅವರು ಹೆಚ್​ಡಿಕೆ ಪರ ಸಾಫ್ಟ್​ ಕಾರ್ನರ್​  ತೋರಿದರೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದು ಹೈಕಮಾಂಡ್ ಗೆ ದೂರು ನೀಡಬಹುದು. ಇದು ಭವಿಷ್ಯದಲ್ಲಿ ಡಿಕೆಶಿ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ.

ಅಸೆಂಬ್ಲಿ ಚುನಾವಣೆಗೆ ಮೂರು ವರ್ಷಗಳ ಮುಂಚಿತವಾಗಿ ಶಿವಕುಮಾರ್ ಅವರ ನೇಮಕಾತಿ  ಒಕ್ಕಲಿಗ ಸಮುದಾಯವನ್ನು ಓಲೈಸಲು ಸಾಕಷ್ಟು ಸಮಯ ಬಾಕಿ ಉಳಿದಿದೆ.  ಜೊತೆಗೆ ಬಿಜೆಪಿ ವಿರುದ್ಧ ಹೋರಾಡಲು ಅಹಿಂದಾ ಮತ್ತು ಅಲ್ಪಸಂಖ್ಯಾತರನ್ನು ಒಗ್ಗೂಡಿಸಬಹುದಾಗಿದೆ,  ಜೊತೆಗೆ ಲಿಂಗಾಯತ ಮತಗಳನ್ನು ಕ್ರೂಢೀಕರಿಸಲು ಸಾಧ್ಯವಾಗುತ್ತದೆ. 

ಆದರೆ ಹೆಚ್​ಡಿಕೆ ಜೊತೆಗಿನ ಸ್ನೇಹ ಕಳೆದುಕೊಂಡರೇ ಒಕ್ಕಲಿಗ ಮತಗಳು ಕೈತಪ್ಪುವ ಚಿಂತೆಯೂ ಡಿಕೆ ಶಿವಕುಮಾರ್  ಅವರನ್ನು ಕಾಡುತ್ತಿದೆ. ಹೀಗಾಗಿ ಹೆಚ್​ಡಿಕೆ-ಡಿಕೆಶಿ ಸ್ನೇಹ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com