ತೀವ್ರ ಸಂಕಷ್ಟದಲ್ಲಿರುವ ಕಾಂಗ್ರೆಸ್: 'ಟ್ರಬಲ್ ಶೂಟರ್' ಡಿ ಕೆ ಶಿವಕುಮಾರ್ ಮೇಲೆ ಅಪಾರ ನಿರೀಕ್ಷೆ

ಇದು ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ಆದ ನೇಮಕಾತಿ ಎನ್ನಬಹುದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ನೇಮಕ ಮಾಡಿ ದಿಢೀರ್ ಆದೇಶ ಹೊರಡಿಸಿತು. 
ತೀವ್ರ ಸಂಕಷ್ಟದಲ್ಲಿರುವ ಕಾಂಗ್ರೆಸ್: 'ಟ್ರಬಲ್ ಶೂಟರ್' ಡಿ ಕೆ ಶಿವಕುಮಾರ್ ಮೇಲೆ ಅಪಾರ ನಿರೀಕ್ಷೆ

ಬೆಂಗಳೂರು: ಇದು ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ಆದ ನೇಮಕಾತಿ ಎನ್ನಬಹುದು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ನೇಮಕ ಮಾಡಿ ದಿಢೀರ್ ಆದೇಶ ಹೊರಡಿಸಿತು. 


ಮಧ್ಯ ಪ್ರದೇಶದಲ್ಲಿ ಸ್ವಂತ ಶಾಸಕರ ಬಲದಿಂದ ಅಧಿಕಾರಕ್ಕೆ ಬಂದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರ ರಾಜೀನಾಮೆಯೊಂದಿಗೆ ತೀವ್ರ ಸಂಕಷ್ಟ ಎದುರಿಸುತ್ತಿದೆ. ಅಲ್ಲಿನ ಅಸಂತುಷ್ಠ 19 ಶಾಸಕರು ಬೆಂಗಳೂರಿನ ಹೊಟೇಲ್ ನಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ಸಮಾಧಾನಪಡಿಸಿ ಮತ್ತೆ ಪಕ್ಷಕ್ಕೆ ಕರೆತರುವ ಕೆಲಸವನ್ನು ಕೂಡ ಹೈಕಮಾಂಡ್ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಹೆಗಲಿಗೆ ವಹಿಸಿದೆ. 


ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಡಿ ಕೆ ಶಿವಕುಮಾರ್ ಈ ಒಂದು ದಿನಕ್ಕೆ ಹಲವು ತಿಂಗಳುಗಳಿಂದ ಕಾಯುತ್ತಿದ್ದರು. ಅವರ ನೇಮಕಾತಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಹುರುಪು ತಂದಿದೆ ಎಂಬುದರಲ್ಲಿ ಸಂಶಯವಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಮತಗಳ ವಿಭಜನೆಯಲ್ಲಿ 2013ರ ವಿಧಾನಸಭೆ ಚುನಾವಣೆಗಿಂತ ಶೇಕಡಾ 1.5ಕ್ಕೆ ಇಳಿದಿದ್ದ ಕಾಂಗ್ರೆಸ್ ಜೆಡಿಎಸ್ ಮತ ಗಳಿಸಿದ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಮತದಾರರ ಮನವೊಲಿಸಿ ಮತ್ತೆ ಕಾಂಗ್ರೆಸ್ ನತ್ತ ಕರೆತರುವ ಸವಾಲು, ಒತ್ತಡದಲ್ಲಿದೆ. ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ಸಹಾಯವಾಗಬಹುದು ಎಂಬ ಲೆಕ್ಕಾಚಾರವಿದೆ.


ಕಾಂಗ್ರೆಸ್ ನ 14 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿರುವುದರಿಂದ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿರುವ ಕಾಂಗ್ರೆಸ್ ಗೆ ಶಿವಕುಮಾರ್ ನೇಮಕ ಅನಿವಾರ್ಯವಾಗಿತ್ತು. ಹಾಗಾದರೆ ಶಿವಕುಮಾರ್ ನೇಮಕ ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ನೋಡಿದರೆ, ಕರ್ನಾಟಕ ರಾಜಕೀಯ ಮೇಲೆ ಪ್ರಮುಖವಾಗಿ ಪರಿಣಾಮ ಬೀರುವ ಎರಡು ಜಾತಿಗಳು ಒಕ್ಕಲಿಗ ಮತ್ತು ಕುರುಬ ಸಮುದಾಯ.ಕೆಲವು ಕಡೆ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್ ಗೆ ಹೋಗುತ್ತವೆ. ಲಿಂಗಾಯತರ ಬೆಂಬಲ ಬಿಜೆಪಿಗೆ ಇದ್ದರೂ ಕೂಡ ಇಲ್ಲಿ ಕಾಂಗ್ರೆಸ್ ಗೆ ಹೆಚ್ಚು ಲಾಭವಾಗಬಹುದು. ನಿನ್ನೆ ನೇಮಕಾತಿ ಆದೇಶ ಹೊರಬಂದ ಕೂಡಲೇ ಟ್ವೀಟ್ ಮಾಡಿದ್ದ ಶಿವಕುಮಾರ್ ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತರಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬರೆದಿದ್ದರು.


ಇನ್ನು ಎರಡು ತಿಂಗಳಲ್ಲಿ 58 ವರ್ಷಕ್ಕೆ ಕಾಲಿಡುತ್ತಿರುವ ಶಿವಕುಮಾರ್ ರಾಜಕೀಯದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿರುವ ಡಿಕೆಶಿ ಪಕ್ಷದ ನಾಯಕತ್ವ ವಹಿಸುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ 2008-09ರಲ್ಲಿ ಆರ್ ವಿ ದೇಶಪಾಂಡೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಡಿಕೆಶಿ ಕಾರ್ಯಾಧ್ಯಕ್ಷರಾಗಿದ್ದರು. ಆ ಸಮಯದಲ್ಲಿ ಬಳ್ಳಾರಿಯ ಗಣಿ ಹಗರಣ ಬಗ್ಗೆ ಪಾದಯಾತ್ರೆ ಮಾಡಿ ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದುಬಂದರು. 


ನಿನ್ನೆ ಶಿವಕುಮಾರ್ ನೇಮಕ ವಿಚಾರ ತಿಳಿದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಆದರೆ ಒಕ್ಕಲಿಗ ಮತದಾರರನ್ನೇ ನಂಬಿಕೊಂಡಿರುವ ಜೆಡಿಎಸ್ ಗೆ ಶಿವಕುಮಾರ್ ನೇಮಕಾತಿ ಬಿಸಿತುಪ್ಪವಾಗಿ ಪರಿಣಮಿಸಬಹುದು. ಇನ್ನು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ರಮೇಶ್ ಬಾಬು ಪಕ್ಷ ತೊರೆದಿದ್ದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com