ಕಾಂಗ್ರೆಸಿನಲ್ಲೀಗ ಏಕತೆಯ ಮಂತ್ರ: ಪಕ್ಷ ಸಂಘಟನೆಗಾಗಿ ಒಂದಾದ ಎಂಬಿಪಿ ಮತ್ತು ಡಿಕೆಶಿ

ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಸಿದ್ದರಾಮಯ್ಯ ಬಣದಿಂದ ತೀವ್ರ ಪ್ರಯತ್ನ ನಡೆಸಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಒಟ್ಟಿಗೆ ಕರೆದೊಯ್ಯುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನ ಆರಂಭಿಸಿದ್ದಾರೆ.
ಎಂಬಿ ಪಾಟೀಲ್ - ಡಿಕೆ ಶಿವಕುಮಾರ್
ಎಂಬಿ ಪಾಟೀಲ್ - ಡಿಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಸಿದ್ದರಾಮಯ್ಯ ಬಣದಿಂದ ತೀವ್ರ ಪ್ರಯತ್ನ ನಡೆಸಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಒಟ್ಟಿಗೆ ಕರೆದೊಯ್ಯುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನ ಆರಂಭಿಸಿದ್ದಾರೆ.

ಕೆಪಿಸಿಸಿ ನಾಯಕತ್ವಕ್ಕಾಗಿ ಸಾಕಷ್ಟು ಹೋರಾಟ ಮಾಡಿ ಲಿಂಗಾಯತ ಸಮುದಾಯದ ಪ್ರಭಾವ ಬೀರಲೆತ್ನಿಸಿದ್ದರೂ ಸಹ ಎಂ.ಬಿ.ಪಾಟೀಲ್ ಅವರಿಗೆ ಪಕ್ಷದ ಸಾರಥ್ಯ ದೊರೆಯಲಿಲ್ಲ. ಹೀಗಾಗಿ ಡಿ.ಕೆ. ಶಿವಕುಮಾರ್ ತಾವು ಅಧಿಕಾರ ವಹಿಸಿಕೊಳ್ಳುವ ಮುನ್ನ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಖುದ್ದಾಗಿ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು. ಉಭಯ ನಾಯಕರು ಪರಸ್ಪರ ಏಕತೆಯ ಮಂತ್ರ ಜಪಿಸಿದ್ದಾರೆ.

ಭೇಟಿ ಬಳಿಕ ಜಂಟಿಯಾಗಿ ಸುದ್ದಿಗಾರರ ಜತೆ ಮಾತನಾಡಿದರು. ಎಂ.ಬಿ.ಪಾಟೀಲ್, ನಮ್ಮ ನಡುವೆ ಸೌಹಾರ್ದ ಭೇಟಿಯಾಗಿದ್ದು, ನಮ್ಮದು ಸೌಹಾರ್ದಯುತ ಪಕ್ಷ. ಸಂಘಟನೆ ದೃಷ್ಠಿಯಿಂದ ಪರಸ್ಪರ ಮಾತುಕತೆ ಮಾಡಿದ್ದೇವೆ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಸಹಕಾರ ಕೇಳಿದ್ದಾರೆ. ಶಿವಕುಮಾರ್ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇರಲಿದೆ. ನಾವೆಲ್ಲರೂ ಒಟ್ಟಾಗಿ ಕೂಡಿ ಪಕ್ಷವನ್ನು ಬಲಗೊಳಿಸುತ್ತೇವೆ. ಗುಂಪುಗಾರಿಕೆ ತಡೆಯುವ ನಿಟ್ಟಿನಲ್ಲಿ ಈ ಭೇಟಿ ಅನುಕೂಲವಾಗಲಿದೆ. ಕಾರ್ಯಕರ್ತರಿಗೂ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ ಎಂದರು.

ಎಲ್ಲರೂ ಒಗ್ಗಟ್ಟಾಗಿ ದುಡಿದು ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ತಮ್ಮೆಲ್ಲರ ಉದ್ದೇಶವಾಗಿದೆ. ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆಗೆ ಉತ್ಸಾಹ ತುಂಬಬೇಕು. ಈ ನಿಟ್ಟಿನಲ್ಲಿ ಸಹಕಾರ ನೀಡುವುದಕ್ಕೆ ತಾವು ಸಿದ್ಧರಿದ್ದು ಪಕ್ಷವನ್ನು ಸದೃಢಗೊಳಿಸಬೇಕಿದೆ. ಹೀಗಾಗಿ ಪಕ್ಷದ ಎಲ್ಲ ನಾಯಕರನ್ನು ಭೇಟಿ ಮಾಡಿದರೆ ವಾತಾವರಣ ತಿಳಿಯಾಗುತ್ತದೆ ಎಂಬ ಭಾವನೆ ನಮ್ಮದಾಗಿದ್ದು, ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂದು ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಇತಿಶ್ರೀ ಹಾಡಿದ್ದೇವೆ ಎಂದರು. 

ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ನಾಯಕರಿದ್ದು, ಎಲ್ಲರೂ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದ್ದಾರೆ. ಉತ್ತರಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಬಲ ನೀಡಬೇಕಿದೆ. ತಾವು ಹಾಗೂ ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಗೊಳಿಸುತ್ತೇವೆ . ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಅಭಿಪ್ರಾಯ ಸಂಗ್ರಹ ವೇಳೆ ತಮ್ಮ ಹೆಸರನ್ನು ಸಹ ಶಿಫಾರಸ್ಸು ಮಾಡಲಾಗಿತ್ತು. ಆದರೆ ಮಾಧ್ಯಮ ಸ್ನೇಹಿತರಿಗೆ ಮಸಾಲೆ ಬೇಕಿತ್ತು. ಹೀಗಾಗಿ ಮಸಾಲೆ ಸೇರಿಸಿ ವರದಿ ಮಾಡಿದ್ದರು. ಅಧ್ಯಕ್ಷ ಹುದ್ದೆಗೆ ತಮ್ಮ ಹಾಗೂ ಶಿವಕುಮಾರ್ ನಡುವೆ ಯಾವುದೇ ರೀತಿಯ ಪೈಪೋಟಿ ಅಥವಾ ಭಿನ್ನಾಭಿಪ್ರಾಯವೂ ಇರಲಿಲ್ಲ. ಸೂಕ್ತ ಕಾಲದಲ್ಲಿ ನಾವು ಇದಕ್ಕೆಲ್ಲ ತೆರೆ ಎಳೆದಿದ್ದೇವೆ. ವ್ಯಕ್ತಿಗತವಾದ ವಿಚಾರ ಯಾವುದೂ ಇಲ್ಲಿಲ್ಲ ಎಂದು ಎಂ.ಬಿ.ಪಾಟೀಲ್ ಒತ್ತಿ ಹೇಳಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಎಂಬಿ ಪಾಟೀಲ್ ತಂದೆ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದೆನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯೇ ತಮ್ಮೆಲ್ಲರ ಗುರಿಯಾಗಿದೆ. ಜನರ ಭಾವನೆಗೆ ತಕ್ಕಂತೆ ಅಭಿವೃದ್ಧಿ ರಾಷ್ಟ್ರ ನಿರ್ಮಾಣಕ್ಕಾಗಿ ಕಾಂಗ್ರೆಸ್ ಸಿದ್ಧವಾಗಿದೆ ಎಂದರು.

ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಎಂ.ಬಿ.ಪಾಟೀಲ್ ನನ್ನ ಪರವಾಗಿಯೇ ಇದ್ದರು. ನಮ್ಮ ನಡುವೆ ವ್ಯಕ್ತಿಗತ ಭಿನ್ನಾಭಿಪ್ರಾಯ ಗಳಿಲ್ಲ. ವೈಯಕ್ತಿಗತ ನಿಲುವುಗಳು ಏನೇ ಇರಲಿ ಎಲ್ಲವನ್ನೂ ಬದಿಗೊತ್ತಿ ಪಕ್ಷ ಕಟ್ಟುತ್ತೇವೆ. ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ರಾಜ್ಯ, ರಾಷ್ಟ್ರದಲ್ಲಿ ನಾವು ಪಕ್ಷ ಕಟ್ಟುತ್ತೇವೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಮಾಧ್ಯಮಗಳು ಸತ್ಯವನ್ನು ಮಾತ್ರ ವರದಿ ಮಾಡಬೇಕು. ಬಿಜೆಪಿಯವರಂತೆ ತಾವು ಮಾಧ್ಯಮದ ಮೇಲೆ ನಿಷೇಧ ಹೇರುವುದಿಲ್ಲ ಎಂದು ಬಿಜೆಪಿ ಸರ್ಕಾರದ ಧೋರಣೆಯನ್ನು ಟೀಕಿಸಿದರು. 

ಪಕ್ಷ ಸಂಘಟನೆ ವಿಚಾರವಾಗಿ ಕಾರ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಿ ನಂತರ ಶಾಸಕರೊಂದಿಗೂ ಸಮಾಲೋಚನೆ ನಡೆಸಲಾಗುವುದು. ಇದೇ ವೇಳ ಪದಗ್ರಹಣ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಇನ್ನೂ ಚರ್ಚೆಯಾಗಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com