ಮಾಸ್ ಬೇಸ್ ಪಾರ್ಟಿ ಮಾಡಲ್ಲ, ಕೇಡರ್ ಬೇಸ್ ಪಾರ್ಟಿ ಮಾಡಿ ತೋರಿಸುತ್ತೇವೆ: ಡಿ.ಕೆ. ಶಿವಕುಮಾರ್

ನಾವೆಲ್ಲರೂ ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡಲಿದ್ದು, ನಾವು ಮಾಸ್ ಬೇಸ್ ಪಾರ್ಟಿ ಮಾಡುವುದಿಲ್ಲ. ಬದಲಿಗೆ ಕೇಡರ್ ಬೇಸ್ ಪಾರ್ಟಿಮಾಡುತ್ತೇವೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ನಾವೆಲ್ಲರೂ ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡಲಿದ್ದು, ನಾವು ಮಾಸ್ ಬೇಸ್ ಪಾರ್ಟಿ ಮಾಡುವುದಿಲ್ಲ. ಬದಲಿಗೆ ಕೇಡರ್ ಬೇಸ್ ಪಾರ್ಟಿಮಾಡುತ್ತೇವೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರೊಂದಿಗೆ ಸಭೆ ನಡೆಸಿದರು. ಇನ್ನೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದು, ಪರಸ್ಪರ ಸಮನ್ವಯ ಸಾಧಿಸುವುದು, ಬಿಜೆಪಿ ಹಣ ಬಲದಿಂದ ನಡೆಸುತ್ತಿರುವ ಪ್ರಚಾರಕ್ಕೆ ಪ್ರತಿಯಾಗಿ ಪಕ್ಷದ ಸಾಧನೆಯನ್ನು ವಿವರಿಸುವುದು, ಜನ ಸಾಮಾನ್ಯರನ್ನು ಪಕ್ಷ ಸಮರ್ಥವಾಗಿ ತಲುಪುವ ಜತೆಗೆ ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುವ ಕುರಿತಂತೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಹಲವು ಗೊಂದಲಕ್ಕೆ ತೆರೆ ಎಳೆದಿದೆ. ವಿಶ್ವಾಸವಿಟ್ಟು ನಮ್ಮಜೊತೆ ಮೂವರು ಕಾರ್ಯಾಧ್ಯಕ್ಷರನ್ನು ಕೊಟ್ಟಿದೆ. ಅಧಿಕಾರ ಆಸೆ ಬಿಟ್ಟು ಉತ್ತಮವಾಗಿ ಕೆಲಸ ಮಾಡಬೇಕಿದೆ ಎಂದರು.

ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖಂಡರಾದ ಪ್ರಿಯಾಂಕ ಗಾಂಧಿ ಮತ್ತಿತರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಧಿವೇಶನದ ಬಳಿಕ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಅಧಿಕೃತವಾಗಿ ಅಲಂಕರಿಸುತ್ತೇನೆ. ವಿಧಾನಸಭೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಇತರೆ 15ರಿಂದ 20 ಮುಖಂಡರ ಜೊತೆ ದೆಹಲಿಗೆ ತೆರಳಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತೇವೆ ಎಂದರು. 

ತಮಗೆ ಅಧ್ಯಕ್ಷನಾಗಬೇಕೆಂಬ ಆಸೆಯಿರಲಿಲ್ಲ. ಕಾರ್ಯಕರ್ತರು, ಮುಖಂಡರ ಅಭಿಪ್ರಾಯಕ್ಕೆ ವರಿಷ್ಠರು ಮನ್ನಣೆ ಕೊಟ್ಟಿದ್ದಾರೆ. ಜನ ಬಿಜೆಪಿಗೆ ಸಾಕಷ್ಟು ಅಧಿಕಾರ ಕೊಟ್ಟಿದ್ದಾರೆ. ಹೀಗಿದ್ದರೂ ಪಾಪ ಅವರು ಒಂದೊಂದೇ ರಾಜ್ಯದ ಅಧಿಕಾರ ಕೀಳುತ್ತಿದ್ದಾರೆ. ಬಿಜೆಪಿಯವರಿಗೆ ನಾನು ಹೇಳುವುದಿಷ್ಟೇ. ನಮ್ಮ ಪಕ್ಷ ಮಾತ್ರ ದೇಶವನ್ನ ಉಳಿಸಲಿದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಎಂದಿಗೂ ದೇಶದಿಂದ ಮುಕ್ತವಾಗುವುದಿಲ್ಲ. ಗಾಂಧಿ ಕುಟುಂಬ ತ್ಯಾಗ ಮಾಡಿ ಈ ದೇಶ ಉಳಿಸುತ್ತಿದೆ. ಇದನ್ನ ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಕೊರೋನಾ ಮಹಾಮಾರಿ ದೇಶದಲ್ಲಿ ಬಂದಿದೆ. ಕೇಂದ್ರ ಸರ್ಕಾರದ ಮೇಲೆ ಯಾವುದೇ ಆರೋಪ ಮಾಡುವುದಿಲ್ಲ. ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಕೊಡುತ್ತೇವೆ. ಕೇಂದ್ರ ಹಾಗು ರಾಜ್ಯ ಬಿಜೆಪಿ ಸರಕಾರ ಇದನ್ನು ತಮ್ಮ ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದರು. ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಕ್ವಾಂಟಿಟಿ ಬೇಕಿಲ್ಲ,ಕ್ವಾಲಿಟಿ ಬೇಕಿದೆ. ನಮ್ಮ ಮೊದಲ ಪ್ರಯಾರಿಟಿ ಶಿಸ್ತು ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com