ಮಧ್ಯ ಪ್ರದೇಶದಲ್ಲಿ ಸಂವಿಧಾನದ ಮಾರಣಹೋಮ: ದಿಗ್ವಿಜಯ್ ಸಿಂಗ್

ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕವಾಗಿರುವ ಶಾಸಕರನ್ನು ಭೇಟಿ ಮಾಡಲು ವಿಫಲ ಯತ್ನ ನಡೆಸಿದ ಕಾಂಗ್ರೆಸ್ ನಾಯಕರು, ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುತ್ತಿರುವ ಬಿಬಿಜೆ ವಿರುದ್ಧ ಮುಗಿ ಬಿದ್ದಿದ್ದಾರೆ.
ದಿಗ್ವಿಜಯ್ ಸಿಂಗ್ ಪತ್ರಿಕಾಗೋಷ್ಠಿ
ದಿಗ್ವಿಜಯ್ ಸಿಂಗ್ ಪತ್ರಿಕಾಗೋಷ್ಠಿ

ಬೆಂಗಳೂರು: ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕವಾಗಿರುವ ಶಾಸಕರನ್ನು ಭೇಟಿ ಮಾಡಲು ವಿಫಲ ಯತ್ನ ನಡೆಸಿದ ಕಾಂಗ್ರೆಸ್ ನಾಯಕರು, ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುತ್ತಿರುವ ಬಿಬಿಜೆ ವಿರುದ್ಧ ಮುಗಿ ಬಿದ್ದಿದ್ದಾರೆ.

ನಗರದ ಯಲಹಂಕ ಬಳಿ ಇರುವ ರಮಣ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗದೇ ಪೊಲೀಸರಿಂದ ಬಂಧನಕ್ಕೊಳಗಾಗಿ, ಪೊಲೀಸರ ಕಾರ್ಯವೈಖರಿ ವಿರೋಧಿಸಿ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದರು. 

ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಹೆಚ್.ಕೆ ಪಾಟೀಲ್, ಆರ್.ವಿ ದೇಶಪಾಂಡೆ, ಶಾಸಕರಾದ ಅಜೇಯ್ ಧರ್ಮಸಿಂಗ್,  ಪ್ರದೇಶ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತಿತರರು ಸಭೆ ನಡೆಸಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, ಬಿಜೆಪಿ ನಾಯಕರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಕಾಂಗ್ರೆಸ್ ಶಾಸಕರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದು ಬಿಜೆಪಿ, ಹೊಟೇಲ್ ಮತ್ತು ರೆಸಾರ್ಟ್   ಬುಕ್ ಮಾಡಿರುವುದು ಸಹ ಕೇಸರಿ ಪಕ್ಷದವರು. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡುತ್ತಿರುವುದು ಸಹ ಬಿಜೆಪಿ. ಇದೆಲ್ಲವೂ ಬಹಿರಂಗವಾಗಿಯೇ ನಡೆಯುತ್ತಿದೆ ಎಂದು ಆಪಾದಿಸಿದರು. 

ಆದರೆ ದೇಶದ ಪ್ರಜೆಗಳಾಗಿ ನಾವು ಹೋಟೆಲ್, ರೆಸಾರ್ಟ್ ಗೆ ತೆರಳಲು ಅವಕಾಶ ನಿರಾಕರಿಸಲಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಎಲ್ಲರೂ ಹೋಗಬಹುದು. ಆದರೆ ನಮ್ನನ್ನು ರಾಜ್ಯದ ಪೊಲೀಸರು ತಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಷ್ಟೊಂದು ಪೊಲೀಸರನ್ನು ಹಾಕಿದ್ದು ಯಾಕೆ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದರು. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ ಶಾಸಕರಿಗೆ ಪೊಲೀಸ್ ಕಾವಲು ಹಾಕಲಾಗಿದೆ. ಶಾಸಕರನ್ನ ಖರೀದಿಸುತ್ತಿರುವುದಕ್ಕೆ ಇನ್ನೇನು ಸಾಕ್ಷಿ ಬೇಕು. ಶಾಸಕ ಮನೋಜ್ ಚೌಧರಿ ರೆಸಾರ್ಟ್ ನಲ್ಲಿದ್ದಾರೆ. ಅವರನ್ನು ಭೇಟಿ ಮಾಡಲು ಅವರ ತಂದೆ ನಾರಾಯಣಚೌಧರಿ ಅವರಿಗೆ ಅವಕಾಶ ನೀಡಿಲ್ಲ. ಮಗನನ್ನು ನೋಡಲು ತಂದೆಗೆ ಅವಕಾಶವಿಲ್ಲ ಎಂದರೆ ಹೇಗೆ? ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದರು.

'ನಾನೇನು ಕುದುರೆ ವ್ಯಾಪಾರಕ್ಕಾಗಿ ರೆಸಾರ್ಟ್ ಗೆ ಹೋಗಿರಲಿಲ್ಲ. ನಮ್ಮ ಪಕ್ಷದ ಶಾಸಕರು ಅಲ್ಲಿದ್ದರು, ರಾಜ್ಯಸಭೆ ಚುನಾವಣೆ ಅಭ್ಯರ್ಥಿಯಾಗಿರುವ ತಾವು ಅವರನ್ನು ಭೇಟಿ ಮಾಡಿ ಮತ ಕೇಳಲು ಹೋಗಿದ್ದೆ. ಆದರೆ ನಮ್ಮನ್ನು ರೆಸಾರ್ಟ್ ಒಳಗೆ ಬಿಡಲಿಲ್ಲ, ಬದಲಿಗೆ ಬಂಧಿಸಿದರು. ಈ ರೀತಿ ಬಂಧಿಸಲು ಅವಕಾಶ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು. 

ರೆಸಾರ್ಟ್ ಸಾರ್ವಜನಿಕ ಸ್ಥಳ, ಅಲ್ಲಿಗೆ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಕರ್ನಾಟಕ ಪೊಲೀಸರೇಕೆ ತಡೆಯುತ್ತಿದ್ದಾರೆ, ಯಾವ ಕಾನೂನಿನಡಿ ನಮ್ಮನ್ನು ತಡೆಯಲಾಗುತ್ತದೆ. ಆ ವರ್ತನೆ ಏಕೆಂಬುದು ನನ್ನ ಆಕ್ಷೇಪ. ರೆಸಾರ್ಟ್ ನಲ್ಲಿರುವವರು ಹಲವು ದಶಕದಿಂದ ನನ್ನ ಜತೆ ಇದ್ದವರು. ಈಗ ಅಮಿತ್ ಶಾ, ನರೇಂದ್ರ ಮೋದಿ ನಿರ್ದೇಶನದ ಮೇಲೆ ಇದೆಲ್ಲ ನಡೆಯುತ್ತಿದೆ. ಬಿಜೆಪಿ ಪ್ರಜಾತಂತ್ರ ಮೌಲ್ಯವನ್ನು ಹಾಳು ಮಾಡುತ್ತಿದೆ ಎಂದರು.

ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ರಾಜ್ಯ ಪೊಲೀಸರು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಜನರು ಗಮನಿಸುತ್ತಿದ್ದಾರೆ. ಬಿಜೆಪಿಯ ಕಾರ್ಯಕ್ರಮಗಳು ಜನರಿಗೆ ಅರ್ಥವಾಗುತ್ತಿವೆ. ವ್ಯಾಪಂ ಕೇಸ್, ಮನಿ ಲ್ಯಾಂಡರಿಂಗ್, ಹನಿಟ್ರ್ಯಾಪ್ ಪ್ರಕರಣ ನಡೆದಿವೆ. ಇದೆಲ್ಲದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದರು.

ಮೈನಿಂಗ್ ಮಾಫಿಯಾಗೆ ಮುಖ್ಯಮಂತ್ರಿ ಕಮಲ್ ನಾಥ್ ಕಡಿವಾಣ ಹಾಕಿ, ಆಡಳಿತದಲ್ಲಿ ಪಾರದರ್ಶಕತೆ ತಂದಿದ್ದರು. ಕರ್ನಾಟಕದಲ್ಲೂ ಕುದುರೆ ವ್ಯಾಪಾರ ಮಾಡಿದ್ದು ಗೊತ್ತಿದೆ. ಅದನ್ನು ಬಿಜೆಪಿ ಈಗಲೂ ಮುಂದುವರಿಸಿಕೊಂಡು ಬರುತ್ತಿದೆ. ನಮ್ಮದು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಪಕ್ಷ. ಮಹಾತ್ಮಗಾಂಧಿ, ನೆಹರು ಅವರ ಸಿದ್ಧಾಂತದ ಮೇಲೆ ಮೇಲೆ ನಿಂತಿರುವ ಪಕ್ಷ. ಆದರೆ ಇಂದು ಪ್ರಜಾಪ್ರಭುತ್ವ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವಕ್ಕೆ ಮಾನ್ಯತೆ ನೀಡುತ್ತಿಲ್ಲ. ವಾಜಪೇಯಿಯಂತಹ ನಾಯಕರು ಬಿಜೆಪಿಯಲ್ಲಿದ್ದರು. ಆದರೆ ಇಂದು ಆ ಪಕ್ಷದಲ್ಲಿ ಇವರದ್ದೇ ಕಾರುಬಾರು. ದೇಶದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಉದ್ಯೋಗವಿಲ್ಲದೆ ಜನ ಪರದಾಡುತ್ತಿದ್ದಾರೆ. ಕೊರೋನಾ ವೈರಸ್ ಇಂದು ತಲ್ಲಣವನ್ನೇ ಮೂಡಿಸಿದೆ. ಈ ಬಗ್ಗೆ ಗಮನ ಹರಿಸಲು ಪ್ರಧಾನಿಗೆ ಬಿಡುವಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಒತ್ತು ನೀಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಬಂದ ಸರ್ಕಾರಗಳನ್ನು ಉರುಳಿಸುತ್ತಿದ್ದಾರೆ ಎಂದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮಧ್ಯ ಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ ಎಂದು ಟೀಕಿಸಿದರು. 

ದಿಗ್ವಿಜಯ್ ಸಿಂಗ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಶಾಸಕರ ಬಳಿ ಮತ ಕೇಳಲು ಅವರಿಗೆ ಅಧಿಕಾರವಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ತಡೆದು ಅವರ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದರು.

ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಪೊಲೀಸ್ ಆಯುಕ್ತ, ಡಿಜಿಯನ್ನೂ ಕೇಳಿದ್ದೇವೆ. ಭೇಟಿ ಮಾಡಲು ಅವಕಾಶ ನೀಡದಿರಲು ಏನಾದರೂ ಕಾನೂನು ಇದೆಯೇ? ಮಧ್ಯ ಪ್ರದೇಶ ಶಾಸಕರು ತಮಗೆ ರಕ್ಷಣೆ ಬೇಕು ಎಂದು ಕೇಳಿದ್ದಾರೆ ಹೊರತು, ತಾವು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿಲ್ಲ. ಬರಿ ಬಿಜೆಪಿಯವರು ರೆಸಾರ್ಟ್ ನಲ್ಲಿ ಇರಬಹುದೇ ಎಂದು ಪೊಲೀಸರನ್ನು ಪ್ರಶ್ನಿಸಿರುವುದಾಗಿ ಹೇಳಿದರು. 

ರೆಸಾರ್ಟ್ ನಲ್ಲಿರುವ ಶಾಸಕರು ತಮಗೆ ಎಸ್ಕಾರ್ಟ್ ನೀಡುವಂತೆ, ಭದ್ರತೆ ನೀಡುವಂತೆ ಕರ್ನಾಟಕ ಪೊಲೀಸರಿಗೆ ಪತ್ರ ಕೊಟ್ಟಿದ್ದಾರೆ. ಆದರೆ, ನಮಗೆ ರೆಸಾರ್ಟ್ ಒಳಗೆ ಬಿಡುತ್ತಿಲ್ಲ. ಅವರನ್ನು ಅಲ್ಲಿಂದ ತೆರವುಗೊಳಿಸದಿದ್ದರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದರು.

ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬಾರದು. ಸಂವಿಧಾನದಲ್ಲಿ ನಿಮಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದೆ. ನಾವು ರೆಸಾರ್ಟ್ ಗೆ ಹೋಗಬೇಡಿ ಎಂದು ಹೇಳಲು ಪೊಲೀಸರಿಗೆ ಹಕ್ಕಿಲ್ಲ. ದಿಗ್ವಿಜಯ್ ಸಿಂಗ್ ಅವರನ್ನು ರೆಸಾರ್ಟ್ ಪ್ರವೇಶ ತಡೆಯಲು ಕಾರಣವೇನು? ಅವರೇನು ಶಸ್ತ್ರಾಸ್ತ್ರಗಳೊಂದಿಗೆ ರೆಸಾರ್ಟ್ ಪ್ರವೇಶ ಮಾಡುತ್ತಿದ್ದರೆ?' ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com