ರಾಜ್ಯಕ್ಕೆ ವಿಶೇಷ ಅನುದಾನ ನೀಡದಂತೆ ನಿರ್ಮಲಾ ಸೀತಾರಾಮನ್ ಅವರಿಂದ ಆಯೋಗಕ್ಕೆ ಪತ್ರ: ಸಿದ್ದರಾಮಯ್ಯ ಆರೋಪ

ರಾಜ್ಯಕ್ಕೆ ವಿಶೇಷ ಅನುದಾನ ನೀಡದಂತೆ ನಿರ್ಮಲಾ ಸೀತಾರಾಮನ್ ಅವರಿಂದ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಕ್ಕೆ ವಿಶೇಷ ಅನುದಾನ ನೀಡದಂತೆ ನಿರ್ಮಲಾ ಸೀತಾರಾಮನ್ ಅವರಿಂದ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ತೆರಿಗೆ ಪಾಲು ಹಾಗೂ ಅನುದಾನ ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗ, ರಾಜ್ಯಕ್ಕೆ 5495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಶಿಫಾರಸ್ಸನ್ನು ರದ್ದುಪಡಿಸುವಂತೆ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ರಾಜ್ಯಕ್ಕೆ ಅನುದಾನ ಸಿಗದಂತೆ ಮಾಡಿದ್ದಾರೆ. ಇದನ್ನು ನಾವು ಸಹಿಸಿಕೊಂಡು ಸುಮ್ಮನಿರಬೇಕೇ ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ತೆರಿಗೆ ಪಾಲು ಕಡಿಮೆಯಾಗಿದೆ ಎಂಬ ಉದ್ದೇಶದಿಂದ ಕರ್ನಾಟಕಕ್ಕೆ 5495 ಕೋಟಿ ರೂ., ಮಿಜೋರಾಂಗೆ 546 ಕೋಟಿ, ತೆಲಂಗಾಣಕ್ಕೆ 723 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ ಸೀತಾರಾಮನ್ ಪತ್ರ ಬರೆದು ಕರ್ನಾಟಕಕ್ಕೆ ಅನುದಾನ ನೀಡದಂತೆ ಸೂಚಿಸಿದ್ದಾರೆ. ಇದು ಯಾವ ನ್ಯಾಯ, ಇದರ ಬಗ್ಗೆ ಧ್ವನಿ ಎತ್ತಬೇಡವೇ? ಎಂದು ಪ್ರಶ್ನಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮಾಡಿದ್ದು ನಿಜ. ಆದರೆ ವಿತ್ತೀಯ ಕೊರತೆಯ ಪ್ರಮಾಣದೊಳಗೆ ಸಾಲ ಮಾಡಿದ್ದೆ. 2018-19ರಲ್ಲಿ ತಾವು 2,85, 238 ಕೋಟಿ ರೂ. ಸಾಲ ಮಾಡಿದ್ದೆ. 2019-20ರಲ್ಲಿ 3,25,969 ಕೋಟಿ ರೂ. ಹಾಗೂ 2020-21ರಲ್ಲಿ 3,68,698 ಕೋಟಿ ರೂ. ಸಾಲ ಮಾಡಲಾಗಿದೆ. ಇದೇ ರೀತಿ ಸಾಲ ಮುಂದುವರಿದರೆ ರಾಜ್ಯದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು. ದೇಶದ ಅರ್ಥಿಕತೆಯನ್ನು 5 ಟ್ರಿಲಿಯನ್ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಅಂತಹ ಯಾವುದೇ ಸೂಚನೆ ಕಾಣುತ್ತಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಜಿಡಿಪಿ ಕುಸಿಯುತ್ತಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ದುಷ್ಪರಿಣಾಮದಿಂದಾಗಿ ಈ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಕಳೆದ ವರ್ಷ ಶೇ. 4.9 ಜಿಡಿಪಿ ಇತ್ತು. ಜಿಡಿಪಿಯೇ ಆರ್ಥಿಕ ಬೆಳವಣಿಗೆ ಮಾನದಂಡ. 2016 ಮತ್ತು 2017ರಿಂದ ಜಿಡಿಪಿ ಇಳಿಮುಖ ಆರಂಭವಾಯಿತು. ದೇಶದಲ್ಲಿ 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಸಮಸ್ಯೆ ಉಂಟಾಗಿದೆ. 10 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಲಾಗಿತ್ತು. ಆದರೆ ಎಷ್ಟು ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ತಿಳಿಸಿ ಎಂದು ಸವಾಲು ಹಾಕಿದರು. ಪೀಣ್ಯ ಕೈಗಾರಿಕೆಯಲ್ಲಿ ಎಷ್ಟು ಉದ್ಯೋಗ ಕಡಿತ ಮಾಡಲಾಗಿದೆ. ಬಹುತೇಕ ಕೈಗಾರಿಕೆಗಳು ಮುಚ್ಚಿವೆ. ಹಲವರು ನಿರುದ್ಯೋಗಿಗಳಾಗಿದ್ದಾರೆ. ಜಾಗತಿಕ ಆರ್ಥಿಕ ಹಿಂಜರಿತವೂ ಸ್ವಲ್ಪ ಪ್ರಮಾಣದಲ್ಲಿ ಇರಬಹುದು. ಆದರೆ ದೇಶದ ಆರ್ಥಿಕತೆ ಬಹಳ ವೇಗದಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಿದರು.

2004-05ರಲ್ಲಿ ಹಣಕಾಸು ಸಚಿವರಾಗಿದ್ದಾಗ ವಿತ್ತೀಯ ಕೊರತೆ ಕಾಯ್ದೆ ಜಾರಿಯಾಯಿತು. 2005-06ಕ್ಕೆ ಕಾಯ್ದೆಯ ನಿಯಮಗಳನ್ನು. ಸಾಲ ಜಿಡಿಪಿಯ ಶೇಕಡಾ 25ರೊಳಗೆ ಇರಬೇಕು. 2009-10ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿತ್ತೀಯ ಕೊರತೆ ಶೇ.3.5ಕ್ಕೆ ಏರಿತ್ತು. ಆದರೆ ತಾವು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆಯೂ ನಿಯಮ ಮೀರಿ ಹೋಗಿಲ್ಲ. ವಿತ್ತೀಯ ಕೊರತೆ ಶೇಕಡಾ 3ರನ್ನು ಮೀರಿ ಹೋಗಿಲ್ಲ ಎಂದರು.

ಆಗ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, 2009-10ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಶೇ. 3.5ಕ್ಕೆ ವಿತ್ತೀಯ ಕೊರತೆಯನ್ನು ವಿಸ್ತರಿಸುವಂತೆ ಅಂದಿನ ಯುಪಿಎ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಎಲ್ಲಾ ರಾಜ್ಯಗಳು ಇದನ್ನು ಪಾಲಿಸಿದ್ದವು. ತಾವು ಕೂಡ ಅದರ ಪ್ರಮಾಣ ಸಾಲದ ಪ್ರಮಾಣವನ್ನು ವಿತ್ತೀಯ ಕೊರತೆಯನ್ನು ಶೇಕಡಾ 3.5ಕ್ಕೆ ನಿಗದಿ ಪಡಿಸಿದ್ದೆ ಎಂದು ಸ್ಪಷ್ಟಪಡಿಸಿದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 8 ತಿಂಗಳಾಯಿತು. ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಲಾಗುತ್ತಿದೆ. ಅನ್ನಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ ನಿಲ್ಲಿಸಲಾಗಿದೆ. ಅಲ್ಪಸಂಖ್ಯಾತರ 707 ಕೋಟಿ ರೂ. ಕಡಿಮೆ ಮಾಡಲಾಗಿದೆ. ಕೃಷಿ ಹೊಂಡ ಯೋಜನೆ ನಿಲ್ಲಿಸಲಾಗಿದೆ ಎಂದು ಹರಿಹಾಯ್ದ ಅವರು, ಸಮಾನತೆಗೆ ನಮಗೆ ಪಾಠ ಮಾಡುವ ಅಗತ್ಯವಿಲ್ಲ ಎಂದು ಸಿ.ಟಿ.ರವಿಗೆ ತಿರುಗೇಟು ಮಾಡಿದರು.

ಮುಂದಿನ ದಿನಗಳು ಕತ್ತಲಾಗಿ ಕಾಣುತ್ತಿದೆ. ಜಿಎಸ್ಟಿ, ನೋಟು ಅಮಾನ್ಯೀಕರಣದಿಂದ ಆರ್ಥಿಕ ಚಿತ್ರಣ ಮಂಕಾಗಿ ಕಾಣುತ್ತಿದೆ. ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯದ ಮೂಲ ಹೆಚ್ಚು ಮಾಡಿ, ಯೋಜನಾ ವೆಚ್ಚ ಕಡಿಮೆ ಮಾಡುವಂತೆ ನೋಡಿಕೊಳ್ಳಬೇಕಾಗಿದೆ ಎಂದರು. ಜಿಎಸ್‌ಟಿ ನ್ಯೂನ್ಯತೆ, ನೋಟು ಅಮಾನ್ಯೀಕರಣದ ದುಷ್ಪರಿಣಾಮಗಳನ್ನು ಸರಿಪಡಿಸಬೇಕು. ಕೇಂದ್ರದಿಂದ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು. 14ನೇ ಹಣಕಾಸು ಆಯೋಗ ನೀಡಿದ್ದ ಅನುದಾನವನ್ನು ಕೇಳಬೇಕು. ನಿರ್ಮಲಾ ಸೀತಾರಾಮನ್ ಅವರ ಬಳಿಗೆ ಹೋಗಿ ನಮ್ಮ ಪಾಲು ಕೇಳಬೇಕು. ರಾಜ್ಯದ ಹಿತದೃಷ್ಟಿಯಿಂದ ಇವೆಲ್ಲವನ್ನೂ ನಾವು ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. 

ಬಜೆಟ್‌ ನಿರಾಶದಾಯಕವಾಗಿದೆ. ಈ ಬಾರಿಯ ಬಜೆಟ್‌ ಅನ್ನು 6 ವಲಯಗಳಾಗಿ ಮಾಡಲಾಗಿದೆ. ಕೃಷಿಗೆ ಕಳೆದ ಬಾರಿಗಿಂತ ಈ ಬಾರಿ ಅನುದಾನ ಕಡಿಮೆಯಾಗಿದೆ. 2020-21ನೇ ಸಾಲಿನಲ್ಲಿ ಈ ಕ್ಷೇತ್ರಕ್ಕೆ 16,472 ಕೋಟಿ ರೂ. ಮಾತ್ರ ನೀಡಲಾಗಿದೆ. ಅಂದರೆ ಶೇಕಡಾ 24ರಷ್ಟು ಕಡಿಮೆಯಾಗಿದೆ. ಹಾಗಾದರೆ ಎಲ್ಲಿಗೆ ಆದ್ಯತೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯಕ್ಕೆ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರಿಗೆ, ಆರೋಗ್ಯ, ಶಿಕ್ಷಣಕ್ಕೆ ಕಡಿಮೆ ಅನುದಾನ ಮಾಡಲಾಗಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ 26131 ಕೋಟಿ ರೂ.ಕೊಟ್ಟಿದ್ದಾರೆ. ಅಂದರೆ ಸುಮಾರು 4000 ಕೋಟಿ ರೂ. ಕಡಿಮೆಯಾಗಿದೆ. ಇದು ಪರಿಶಿಷ್ಟ ಜಾತಿ ಪಂಗಡದ ಜನಾಂಗಕ್ಕೆ ಮಾಡಿದ ಅನ್ಯಾಯವಲ್ಲವೇ ? ಎಂದು ಪ್ರಶ್ನಿಸಿದ ಅವರು ಕಳೆದ ಬಾರಿ 30,144 ಕೋಟಿ ನೀಡಲಾಗಿತ್ತು. ಬಜೆಟ್‌ ಗಾತ್ರಕ್ಕೆ ಹೋಲಿಸಿದರೆ ಈ ಜನಾಂಗಕ್ಕೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಾಗಿತ್ತು. ಆದರೆ ಕಡಿಮೆ ಮಾಡಲಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಹಿಂದುಳಿದ ವರ್ಗದವರಿಗೆ ಕಳೆದ ಬಾರಿ 18-19ರಲ್ಲಿ 2698 ಕೋಟಿ ನೀಡಲಾಗಿತ್ತು. 20-21ಕ್ಕೆ 2453 ಕೋಟಿಗೆ ಇಳಿಯಿತು. ಇದು 102 ಜಾತಿಗಳಿರುವ ಹಿಂದುಳಿದ ವರ್ಗಕ್ಕೆ ಮಾಡಿದ ಅನ್ಯಾಯವಲ್ಲವೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 2011-12ರಲ್ಲಿ ಈ ಸಮುದಾಯಕ್ಕೆ 655 ಕೋಟಿ ಕೊಡಲಾಗಿತ್ತು. ಬಳಿಕದ ವರ್ಷಗಳಲ್ಲಿ ಕ್ರಮವಾಗಿ 834, 1118, 1317, 1695, 2217, 2791, 2698 ಕೋಟಿ ರೂ. ನೀಡಲಾಗಿತ್ತು. ಆದರೆ ಈಗ 2453 ಕೋಟಿ ಅನುದಾನ ನೀಡಲಾಗಿದೆ. ಈ ವರ್ಗದ 15 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಅರ್ಜಿಯೇ ಕೊಡದಂತೆ ಆಯುಕ್ತರು ಆದೇಶಹೊರಡಿಸಿದ್ದಾರೆ. ಎಲ್ಲ ನಿಗಮ ನಿಗಮಗಳಿಗೆ ಅನುದಾನ ಕಡಿಮೆ ಮಾಡಲಾಗಿದೆ. ಎಲ್ಲಿದೆ ಸಾಮಾಜಿಕ ನ್ಯಾಯ ಎಲ್ಲಿದೆ, ಸಬ್‌ ಕಾ ಸಾತ್, ಸಬ್‌ ಕಾ ವಿಕಾಸ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಕ್ರಿಶ್ಚಿಯನ್ಸ್‌ ಸಮುದಾಯಕ್ಕೆ ಕಳೆದ ಬಾರಿ ಕೇವಲ 60 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಈ ಬಾರಿ 200 ಕೋಟಿ ಎಂದು ಹೇಳಲಾಗಿದೆ. ಆದರೆ ಎಷ್ಟು ಖರ್ಚಾಗುತ್ತದೆ ಎಂಬುದೇ ಗೊತ್ತಿಲ್ಲ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್‌ಟಾಪ್‌ ಯೋಜನೆಯನ್ನೇ ನಿಲ್ಲಿಸಲಾಗಿದೆ. ಈ ಯೋಜನೆಯ ವೆಚ್ಚ 14290 ಕೋಟಿಯಿಂದ 28,000 ಕೋಟಿ ರೂ.ಗೆ ಹೆಚ್ಚಾಗಿದೆ. ಅದು ಹೇಗೆ ಸಾಧ್ಯ ? ಎರಡು ಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು. ಈಗ ಮಧ್ಯ ಪ್ರವೇಶಿಸಿದ ರಮೇಶ್ ಕುಮಾರ್, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com