ಮೇಲ್ಮನೆಗೆ ನಾಮಕರಣ: ಬಾಗಲಕೋಟೆ ಜಿಲ್ಲೆಗೊಂದು ಸ್ಥಾನ ಸಿಗುವುದು ಡೌಟ್

ಮಹಾಮಾರಿ ಕೊರೋನಾ ಅಬ್ಬರದ ಮಧ್ಯೆಯೇ ಸದ್ದುಗದ್ದಲವಿಲ್ಲದೆ ಮೇಲ್ಮನೆಗೆ ನೂತನ ಸದಸ್ಯರ ನೇಮಕ ಪ್ರಕ್ರಿಯೆ ಕೇಸರಿ ಪಾಳೆಯದಲ್ಲಿ ಜೋರಾಗಿ ನಡೆದಿದ್ದು, ಬಾಗಲಕೋಟೆ ಜಿಲ್ಲೆಗೂ ಒಂದು ಸ್ಥಾನ ಸಿಕ್ಕಲ್ಲಿ ಅದೃಷ್ಟವೇ ಸರಿ.

Published: 15th May 2020 06:39 PM  |   Last Updated: 15th May 2020 06:39 PM   |  A+A-


PS Poojara, Ramanna talewada

ಪಿ.ಎಚ್. ಪೂಜಾರಿ-ರಾಮಣ್ಣ ತಳೇವಾಡ

Posted By : Srinivasamurthy VN
Source : RC Network

ಬಾಗಲಕೋಟೆ: ಮಹಾಮಾರಿ ಕೊರೋನಾ ಅಬ್ಬರದ ಮಧ್ಯೆಯೇ ಸದ್ದುಗದ್ದಲವಿಲ್ಲದೆ ಮೇಲ್ಮನೆಗೆ ನೂತನ ಸದಸ್ಯರ ನೇಮಕ ಪ್ರಕ್ರಿಯೆ ಕೇಸರಿ ಪಾಳೆಯದಲ್ಲಿ ಜೋರಾಗಿ ನಡೆದಿದ್ದು, ಬಾಗಲಕೋಟೆ ಜಿಲ್ಲೆಗೂ ಒಂದು ಸ್ಥಾನ ಸಿಕ್ಕಲ್ಲಿ ಅದೃಷ್ಟವೇ ಸರಿ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗೊಮ್ಮೆ ಬಾಗಲಕೋಟೆ ಜಿಲ್ಲೆಯ ಒಬ್ಬರು ಸಂಘ ನಿಷ್ಠರು ಮೇಲ್ಮನೆಗೆ ನಾಮಕರಣಗೊಂಡ ಉದಾಹರಣೆಗಳಿವೆ. ಬಿಜೆಪಿ ಹಿರಿಯ ಮುಖಂಡ ಅರವಿಂದ ಲಿಂಬಾವಳಿ ಮೊದಲ ಬಾರಿಗೆ ಮೇಲ್ಮನೆಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ  ಆಯ್ಕೆಗೊಂಡಿದ್ದರು. ಬಳಿದ ಸಂಘದ ಇನ್ನೊಬ್ಬ ನಿಷ್ಠ ಮುಖಂಡ ನಾರಾಯಣಸಾ ಭಾಂಡಗೆ ನೇಮಕಗೊಂಡಿದ್ದರು. ಅದಾದ ಬಳಿಕ ಈಗ ಮತ್ತೊಮ್ಮೆ ಜಿಲ್ಲೆಯಲ್ಲಿಂದ ಒಬ್ಬರು ಆಯ್ಕೆಗೊಳ್ಳುವ ಅವಕಾಶ ಸಿಕ್ಕಿದೆ. ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಚಿವರ ಮನಸ್ಸು ಮಾಡಬೇಕಿದೆ. ಮೇಲ್ಮನೆ  ಪ್ರವೇಶಕ್ಕೆ ಅನೇಕ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಗುಟ್ಟಾಗಿಲ್ಲ. ಕಳೆದ ೧೬ ವರ್ಷಗಳಿಂದ ನಡೆದ ರಾಜಕೀಯ ಸ್ಥಿತ್ಯಂತರಗಳಲ್ಲಿ ಹಲವರ ಗೆಲುವಿಗೆ ಕಾರಣರಾದ ಸಂಘ ನಿಷ್ಠ ಮಾಜಿ ಶಾಸಕ ಪಿ.ಎಚ್. ಪೂಜಾರ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರು ಮುಧೋಳ  ವಿಧಾನಸಭೆ ಕ್ಷೇತ್ರದಲ್ಲಿ ಐದನೇ ಬಾರಿಗೆ ಗೆಲುವನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರು ಜಿಲ್ಲೆಯಿಂದ ಮೇಲ್ಮನೆಗೆ ಆಯ್ಕೆಗೊಳ್ಳುವಲ್ಲಿ ಪ್ರಮುಖ ಅರ್ಹರು ಎನ್ನುವ ಮಾತು ಜಿಲ್ಲೆಯ ಕಮಲ  ಪಾಳೆಯದಲ್ಲಿ ಕೇಳಿ ಬರುತ್ತಿದೆ.

ಇವರೊಂದಿಗೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ, ಬಾದಾಮಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರ ಹೆಸರು ಮುಂಚೂಣಿಯಲ್ಲಿವೆ. ವಿಧಾನಸಭೆಯಿಂದ ಮೇಲ್ಮನೆಗೆ ಆಯ್ಕೆಗೊಳ್ಳುವುದಕ್ಕಾಗಲಿ, ನಾಮಕರಣಗೊಳ್ಳುವುದಕ್ಕಾಗಲಿ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಎಷ್ಟೇ  ಪ್ರಭಾವಶಾಲಿ ಆಗಿದ್ದರೂ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಚಿವರು ಅಸ್ತು ಎನ್ನಬೇಕಿದೆ. ಏತನ್ಮಧ್ಯೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಯಾರ ಪರ ಒಲವು ತೋರುತ್ತಾರೋ ಅವರಿಗೆ ಅದೃಷ್ಟ ಗ್ಯಾರಂಟಿ ಎನ್ನುವುದು  ಕಮಲ ನಾಯಕರ ಅಭಿಪ್ರಾಯವಾಗಿದೆ. ಇವರೊಟ್ಟಿಗೆ ಶಾಸಕ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲರ ನಿಲುವು ನಿರ್ಣಾಯಕ ಎನ್ನಲಾಗುತ್ತಿದೆ.

೨೦೦೪ ರಲ್ಲಿ ನಡೆದ ರಾಜಕೀಯ ಸ್ಥಿತ್ಯಂತರ ಬಳಿಕ ಮಾಜಿ ಶಾಸಕ ಪಿ.ಎಚ್. ಪೂಜಾರ ವಿಧಾನಸಭೆ ಪ್ರವೇಶಕ್ಕೆ ಎಷ್ಟೆ ತಿಪ್ಪರಲಾಗ ಹಾಕಿದರೂ ಸಾಧ್ಯವಾಗುತ್ತಿಲ್ಲ. ಆದರೆ ಅವರು ಬೆಂಬಲಿಸುವ ವ್ಯಕ್ತಿ ಮತ್ತು ಪಕ್ಷ ಗೆಲುವು ಸಾಧ್ಯವಾಗುತ್ತಿವೆ. ಅವರು ರಾಜಕೀಯವಾಗಿ  ಎಲ್ಲಿಯೇ ಇದ್ದರೂ  ಸಂಘ ನಿಷ್ಠೆಮಾತ್ರ ಬದಲಾಗಿರಲಿಲ್ಲ ಎನ್ನುವುದು ಗಮನಾರ್ಹ. ಕಳೆದ ಚುನಾವಣೆಯಲ್ಲಿ ಸಂಘದ ಮುಖಂಡರ ಪ್ರಯತ್ನದ ಫಲವಾಗಿಯೇ ಅವರು ಘರ ವಾಪಸಿ ಆಗಿದ್ದಾರೆ. ಅದರಿಂದ ಪಕ್ಷಕ್ಕೆ ಸಾಕಷ್ಟು ಅನುಕೂಲವೇ ಆಗಿದೆ. ಇದನ್ನು ಯಾರೂ ಅಲ್ಲಗಳೆಯಲಾರರು. ಈಗಲೂ ಸಂಘ  ಪರಿವಾರದ ಮುಖಂಡರ ಮನವೊಲಿಕೆ ಸಫಲವಾದಲ್ಲಿ ಪೂಜಾರ್ ಮೇಲ್ಮನೆ ಪ್ರವೇಶ ಸುಲಭವಾಗಲಿದೆ ಎನ್ನುವ ಮಾತಿದೆ.

ಇವರೊಟ್ಟಿಗೆ ಗೋವಿಂದ ಕಾರಜೋಳರ ನಿರಂತರ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತಿರುವ ಇದುವರೆಗೂ ರಾಜಕೀಯವಾಗಿ ಏನನ್ನೂ ಬಯಸದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ. ತಳೇವಾಡ ಇಷ್ಟು ಹೊತ್ತಿಗೆ ಮೇಲ್ಮನೆ ಸದಸ್ಯರಾಗಿರಬೇಕಿತ್ತು. ಸ್ಥಳೀಯ  ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಒಂದೊಮ್ಮೆ ಪ್ರಯತ್ನಿಸಿದ್ದರಾದರೂ ಪಕ್ಷದ ಗ್ರೀನ್ ಸಿಗ್ನಲ್ ಸಿಗದ ಕಾರಣ ಹಾಗೆ ಉಳಿದು ಬಿಟ್ಟರು.  ಪಿ.ಎಚ್. ಪೂಜಾರ ಮತ್ತು ಆರ್.ಎಸ್. ತಳೇವಾಡ ಅವರಿಗೆ ಅವಕಾಶಗಳು ಇವೆಯಾದರೂ ಸರ್ಕಾರ ಮತ್ತು ಪಕ್ಷದಲ್ಲಿ ಸಾಕಷ್ಟು ಪ್ರಭಾವಿ  ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ವೀರಣ್ಣ ಚರಂತಿಮಠ ಅವರಿಗೆ ಯಾರ ಪರ ಬ್ಯಾಟಿಂಗ್ ಮಾಡಬೇಕು ಎನ್ನುವುದು ತಂತಿಯ ಮೇಲಿನ ನಡಿಗೆಯಂತ ಸ್ಥಿತಿ ಇದೆ. ಶಾಸಕರಾದ ಮುರುಗೇಶ ನಿರಾಣಿ, ದೊಡ್ಡನಗೌಡ ಪಾಟೀಲ ಮತ್ತು ಸಿದ್ದು ಸವದಿ ಕೂಡ  ತಮ್ಮದೇ ಆದ ಹೊಸ ದಾಳಗಳನ್ನು ಉರುಳಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ.

ಬಾಗಲಕೋಟೆ ಜಿಲ್ಲೆ ಕೇಸರಿಪಡೆಯ ಭದ್ರಕೋಟೆಯಾಗಿದೆ. ಮುಂಬರುವ ಸರಣಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯ ನಾಯಕರು ಹೆಜ್ಜೆ ಇಡಬೇಕಿದೆ. ಹಾಗಾಗಿ ಜಿಲ್ಲೆಯ ಎಲ್ಲ ಮುಖಂಡರು ತೆಗೆದುಕೊಳ್ಳುವ ನಿರ್ಧಾರವನ್ನು ಡಿಸಿಎಂ ಕಾರಜೋಳ ಒಪ್ಪಿಕೊಳ್ಳುವ ಜಾಣ  ನಡೆಯತ್ತ ಹೆಜ್ಜೆ ಹಾಕಲಿದ್ದಾರಂತೆ. ಜಿಲ್ಲಾ ಬಿಜೆಪಿಯಿಂದ ಸಾಂಘಿಕ ಪ್ರಯತ್ನ ಹಾಗೂ ಪಕ್ಷದ ಹೈ ಕಮಾಂಡದ್ ಮೇಲೆ ಪ್ರಾಮಾಣಿಕ ಒತ್ತಡ ಹಾಕಿದಲ್ಲಿ ಮೇಲ್ಮನೆಗೆ ಸದ್ಯ ನಡೆಯಲಿರುವ ನಾಮಕರಣ ಹಾಗೂ ಆಯ್ಕೆ ಸಮಯದಲ್ಲಿ ಜಿಲ್ಲೆಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ. ಆದರೆ ಒಗ್ಗಟ್ಟಿನ  ಮಂತ್ರ ಜಪಿಸುವುದು ಕಷ್ಟಸಾಧ್ಯ ಎನ್ನುವ ವಾತಾವರಣ ಮೇಲ್ಮೋಟಕ್ಕೆ ಕಾಣಿಸುತ್ತಿದ್ದರೂ ಮುಖಂಡರ ನಡುವೆ ಒಳಬೇಗುದಿ ಬೇರೆಯೇ ಆಗಿದೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲೆಗೊಂದು ಅವಕಾಶ ಸಿಕ್ಕರೆ ಅದು ಪವಾಡ ಎನ್ನುವ ಮಾತನ್ನು ಪಕ್ಷದ ಸಕ್ರೀಯ ಕಾರ್ಯಕರ್ತರೆ ಹೇಳುತ್ತಿದ್ದಾರೆ

-ವಿಠ್ಠಲ ಆರ್. ಬಲಕುಂದಿ

Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp