ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಜ್ಜು, ಶಾಸಕಾಂಗ ಸಭೆಯಲ್ಲಿ ನಿರ್ಧಾರ

ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನು ರಾಜಕೀಯವಾಗಿ ಬಳಸಿಕೊಂಡು ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಹೋರಾಟ ಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನ ಕೈಗೊಂಡಿದೆ.
ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ನಾಯಕರು

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನು ರಾಜಕೀಯವಾಗಿ ಬಳಸಿಕೊಂಡು ಜನಸಾಮಾನ್ಯರ ಸಮಸ್ಯೆಗಳ ಪರವಾಗಿ ಹೋರಾಟ ಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನ ಕೈಗೊಂಡಿದೆ.

ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಪಿಎಂಸಿ ಕಾಯಿದೆಗೆ ತಿದ್ದುಪಡಿ, ಕಾರ್ಮಿಕ ಕಾಯಿದೆಗೆ ತಿದ್ದುಪಡಿ, ಪಂಚಾಯಿತಿಗಳಿಗೆ ನಾಮನಿರ್ದೇಶನ ಸೇರಿದಂತೆ ಸರ್ಕಾರದ ವಿವಿಧ ಜನ ವಿರೋಧಿ ಕ್ರಮಗಳನ್ನು ಖಂಡಿಸಿ ಬುಧವಾರದಿಂದ ಎಲ್ಲಾ ಸ್ತರಗಳಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದೆ.

ಗ್ರಾಮ ಪಂಚಾಯತಿ ಚುನಾವಣೆ ನಡೆಸದ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕರು, ಗ್ರಾಮ ಪಂಚಾಯತಿಗಳಲ್ಲಿ ಆಡಳಿತ ಸಮಿತಿ ನೇಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ಬಲವಾಗಿ ಖಂಡಿಸಬೇಕು. ಬಿಜೆಪಿ ಪರವಾಗಿರುವವರಿಗೆ ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದು ತಳಮಟ್ಟದಲ್ಲಿ ಬಿಜೆಪಿ ಗಟ್ಟಿಗೊಳಿಸುವ ಯೋಜನೆಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರದಿಂದ ವಂಚಿತರಾಗುತ್ತಿದ್ದಾರೆ. ತಳಮಟ್ಟದಲ್ಲಿಯೇ ಕಾಂಗ್ರೆಸ್ ಗೆ ಹೊಡೆತ ಬೀಳಲಿದೆ. ಹೀಗಾಗಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಕಮುಖವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಯಾರ ಜೊತೆಗೂ ಅವರು ಚರ್ಚೆ ಮಾಡುವುದಿಲ್ಲ. ಪ್ರತಿಪಕ್ಷಗಳ ಜೊತೆ ಅವರು ಚರ್ಚೆ ನಡೆಸುವುದಿಲ್ಲ. ಹೀಗಾಗಿ ಕೊರೋನಾ ಸೋಂಕು ವ್ಯಾಪಕವಾಗಿದ್ದು ದೇಶದ ಆರ್ಥಿಕ ಪರಿಸ್ಥಿತಿ ಪಾತಾಳ ತಲುಪಿದೆ. ನಿರುದ್ಯೋಗ ಪ್ರಮಾಣ ಭಾರೀ ಹೆಚ್ಚಾಗಿದೆ. ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ರೈತರು ಕಾಯಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಮುಂಜಾಗ್ರತಾ ಕ್ರಮಗಳ ಕೊರತೆ ಇದಕ್ಕೆಲ್ಲ ಕಾರಣ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಆರೋಪಿಸಿದರು.

ವಿಮಾನಗಳ ಹಾರಾಟ ಮೊದಲೇ ರದ್ದು ಮಾಡಿದ್ದರೆ ಸೋಂಕು ಭಾರೀ ಪ್ರಮಾಣದಲ್ಲಿ ಹಬ್ಬುತ್ತಿರಲಿಲ್ಲ. ಈಗ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com