ದಢೇಸೂಗುರು ಸಾಚಾ ಆಗಿದ್ದರೆ ಕಾಮಗಾರಿ ತನಿಖೆ ಮಾಡಿಸಲಿ: ತಂಗಡಗಿ

ನೆರೆ ಪರಿಹಾರವನ್ನು ದುರ್ಬಳಕೆ ಮಾಡಿರುವ ಕುರಿತು ದಾಖಲೆ ಬಿಡುಗಡೆಗೊಳಿಸಿದ ನಂತರ ಕನಕಗಿರಿ‌ ಕ್ಷೇತ್ರದಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರಿದರು.
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ

ಕೊಪ್ಪಳ: ನೆರೆ ಪರಿಹಾರವನ್ನು ದುರ್ಬಳಕೆ ಮಾಡಿರುವ ಕುರಿತು ದಾಖಲೆ ಬಿಡುಗಡೆಗೊಳಿಸಿದ ನಂತರ ಕನಕಗಿರಿ‌ ಕ್ಷೇತ್ರದಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರಿದರು.

ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೆರೆ ಪರಿಹಾರದ ಅನುದಾನ ಬಂದ ತಕ್ಷಣವೇ ಕಾಮಗಾರಿ ಮಾಡದೇ, ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದೂ ಒಂದೇ ಕಾಮಗಾರಿಗೆ ಎರಡೆರಡು ಖೊಟ್ಟಿ ಬಿಲ್ ಸಿದ್ಧಪಡಿಸಿ ಕೋಟ್ಯಂತರ ರೂಪಾಯಿ ಲೂಟಿ  ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಸುಮಾರು 78 ಕಾಮಗಾರಿಗಳ ಪೈಕಿ 41 ಕಾಮಗಾರಿಗಳ ಫೋಟೋ ಸಮೇತ ದಾಖಲೆ ಬಿಡುಗಡೆ ಮಾಡಿದ ತಂಗಡಗಿ, ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗ ಪಡಿಸಿದ ಬಳಿಕ ತರಾತುರಿಯಲ್ಲಿ ಮರುದಿನವೇ ಸುದ್ದಿಗೋಷ್ಠಿ ನಡೆಸಿ,  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿದೆ. ತಂಗಡಗಿಯವರು ಪ್ರಾಮಾಣಿಕರಂತೆ ಈ ವಿಷಯದ ಬೆನ್ನಿಗೆ‌ ಬಿದ್ದಿದ್ದಾರೆ ಎಂದಿರುವ ದಢೇಸೂಗುರು ಸಾಚಾ ಆಗಿದ್ದರೆ‌ ನನ್ನ ಕಾಲಾವಧಿಯ ಹಗರಣಗಳನ್ನು ಹಾಗೂ ಅವರ ಈಗಿನ ಕಾಮಗಾರಿಗಳನ್ನು ತನಿಖೆ ಮಾಡಿಸಲಿ ಎಂದು ಸವಾಲು  ಹಾಕಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿರುವ ಕಾಮಗಾರಿಗಳಿಗೆ ಬೋಗಸ್ ಬಿಲ್ ಎತ್ತಲಾಗಿದೆ ಎನ್ನುವುದಕ್ಕೆ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದ ಅವರು, ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಶಾಸಕರಿದ್ದಾರೊ ಅಲ್ಲೆಲ್ಲಾ ಬೋಗಸದ ಬಿಲ್ ಎತ್ತಲಾಗಿದೆ. ಕೊರೋನಾ‌ ಹೆಸರಿನಲ್ಲಿ ಎಲ್ಲವೂ  ಮಂಗಮಾಯವಾಗುತ್ತಿವೆ. ಈಗಾಗಲೇ ಜಿಪಂ ಸಿಇಒ ಅವರಿಗೂ ಈ ಬಗ್ಗೆ ಸಾಕ್ಷ್ಯಾಧಾರಗಳ ಸಮೇತ ಮನವಿ ಸಲ್ಲಿಸಿದ್ದೇವೆ. ಪ್ರಕರಣದ ಮುಖ್ಯ ರೂವಾರಿ ಜೆಇ ಡಿ.ಎಂ.ರವಿ ಅಮಾನತುಗೊಳ್ಳಬೇಕು. ಖೊಟ್ಟಿ ಬಿಲ್ ಸೃಷ್ಟಿಗೆ ರವಿಯವರೇ ಮುಖ್ಯ ಕಾರಣ ಎಂದ ತಂಗಡಗಿ, 15 ದಿನಗಳಲ್ಲಿ  ತನಿಖೆಗೆ‌ ಮುಂದಾಗಲಾಗುವುದು ಎಂದು ಭರವಸೆ ನೀಡಿದ್ದ ಜಿಪಂ ಸಿಇಒ, ಈವರೆಗೂ ತನಿಖೆ ನಡೆಸಿಲ್ಲ. ಜೂನ್ 4ರವರೆಗೂ ತನಿಖೆ ನಡೆಸಲು ಗಡುವು ನೀಡುತ್ತೇವೆ. ಆನಂತರ ತನಿಖೆ ನಡೆಯದಿದ್ದರೆ ಜಿಪಂ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗುತ್ತೇವೆ. ಬಿಲ್ ಎತ್ತಿದ ನಂತರ ಈಗ  ಕಾಮಗಾರಿ ನಡೆಸಲು ಮುಂದಾಗಿರೋದನ್ನ ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪೊಲೀಸರು ಬಿಜೆಪಿ ವಿರುದ್ಧ ಅವಹೇಳನಕಾರಿ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಿಲ್ಲ ಎಂದು ಬೆದರಿಸಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ.  ಇದನ್ನೆಲ್ಲಾ ಗಮನಿಸಿದರೆ ಶಾಸಕ ದಢೇಸೂಗುರು, ಅಧಿಕಾರಿಗಳು, ಗುತ್ತಿಗೆದಾರರ ಪರ ವಕಾಲತ್ತು ವಹಿಸುತ್ತಿದ್ದಾರೆ. ಹಾಗೆಯೇ ಶಾಸಕರಿಗೂ ಈ ಅವ್ಯವಹಾರದಲ್ಲಿ ಪಾಲು ಇದೆ ಎಂಬುದು ನನ್ನ ಅಭಿಪ್ರಾಯ ಎಂದರು.

ನಾಮಿನೇಟ್ ಮಾಡಿದ್ರೆ ಹೋರಾಟ:
ಗ್ರಾಮ‌ ಪಂಚಾಯಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಚಾರ ಕುರಿತು ಮಾತನಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ, ಹೀಗಾದರೆ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಗೆ ಧಕ್ಕೆ ತಂದಂತಾಗುತ್ತದೆ. ಗ್ರಾಮ ಪಂಚಾಯತಿ ಸದಸ್ಯರು ಯಾರೂ ಪಕ್ಷದ ಚಿಹ್ನೆ ಮೇಲೆ  ಆಯ್ಕೆಯಾಗಲ್ಲ. ಹಾಗಾಗಿ ಇದ್ದ ಸದಸ್ಯರನ್ನೇ ಮುಂದಯವರೆಸಬೇಕು. ಒಂದು ವೇಳೆ ಗ್ರಾಪಂಗಳಿಗೆ ಸದಸ್ಯರ ನಾಮನಿರ್ದೇಶನಕ್ಕೆ ಮುಂದಾದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ಏಕಕಾಲಕ್ಕೆ ಪ್ರಮಾಣವಚನ:
ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನವೇ ಗ್ರಾಮಮಟ್ಟದ ಕಾಂಗ್ರೆಸ್ ಮುಖಂಡರು, ತಾಲೂಕುಮಟ್ಟದ ಮುಖಂಡರು ಹಾಗೂ ಜಿಲ್ಲಾಧ್ಯಕ್ಷರಾಗಿ ತಾವು ಅಧಿಕಾರ ವಹಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ಮಾಜಿ ಸಚಿವ  ಶಿವರಾಜ ತಂಗಡಗಿ ಹೇಳಿದರು.

ಕನಕಗಿರಿಯವರೇ ಉಸ್ತುವಾರಿ ಸಚಿವರಾದರೆ ಸಂತೋಷ:
ಬಿಜೆಪಿಯಲ್ಲಿ ಜಿಲ್ಲೆಯ ಮೂವರು ಶಾಸಕರಿದ್ದಾರೆ. ಆದರೂ ಬೇರೆ ಜಿಲ್ಲೆಯವರೇ ಇಲ್ಲಿ ಉಸ್ತುವಾರಿ ಸಚಿವರಾಗುತ್ತಿದ್ದಾರೆ. ಸಚಿವ ಸ್ಥಾನ ವಹಿಸಲು ಜಿಲ್ಲೆಯಲ್ಲಿ ಸಮರ್ಥ ಶಾಸಕರಿಲ್ಲವೇ ಎಂದು ಪ್ರಶ್ನಿಸಿದ ತಂಗಡಗಿ, ಕನಕಗಿರಿ ಶಾಸಕರಿಗೆ ಮಂತ್ರಿ ಸ್ಥಾನ ಕೊಟ್ಟರೆ ತುಂಬಾ ಸಂತೋಷ.  ಏಕೆಂದರೆ ಕನಕಗಿರಿ ಶಾಸಕರಿಗೆ ಸಚಿವಸ್ಥಾನದ ಪರಂಪರೆ ಮುಂದುವರೆಯುತ್ತದೆ, ಜಿಲ್ಲೆಯೂ ಅಭಿವೃದ್ಧಿ ಆಗುತ್ತದೆ ಎಂದರು.

ಸಚಿವ ಮಾಧುಸ್ವಾಮಿ ರಾಜೀನಾಮೆ ನೀಡಲಿ:
ಹಿರಿಯರು ಆಗಿರುವ ಸಚಿವ ಮಾಧುಸ್ವಾಮಿಯವರು ಮಹಿಳೆಗೆ ಕೆಟ್ಟ ಪದ ಬಳಕೆ ಮಾಡಬಾರದಿತ್ತು. ಈಗಾಗಲೇ ಕ್ಷಮೆ ಕೋರಿರುವ ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೊಸ ಶಾಸಕರು ಸಚಿವರಾಗಿ ಇಂಥ ಮಾತನ್ನು ಏನಾದರೂ ಹೇಳಿದ್ದರೆ ಬುದ್ದಿ ಹೇಳಬಹುದಿತ್ತು. ಮಾಧುಸ್ವಾಮಿಯವರು  ಹಿರಿಯರು. ಹೀಗೆ ಮಾತನಾಡುವುದು ಅವರಿಗೆ ಶೋಭೆ ತರಲ್ಲ. ತಕ್ಷಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com