ಸಚಿವ ಸ್ಥಾನದ ಆಸೆ ಇದೆ.. ಆದರೆ ಅಸಮಾಧಾನವಿಲ್ಲ..: ಮುರುಗೇಶ ನಿರಾಣಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಕಳೆದ ನಾಲ್ಕುವರೆ ತಿಂಗಳು ಹಿಂದೆ ದಾವಣಗೆರೆಯಲ್ಲಿ ನಡೆದ ಹರಜಾತ್ರೆ ಬಳಿಕ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದಾರೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಕಳೆದ ನಾಲ್ಕುವರೆ ತಿಂಗಳು ಹಿಂದೆ ದಾವಣಗೆರೆಯಲ್ಲಿ ನಡೆದ ಹರಜಾತ್ರೆ ಬಳಿಕ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉತ್ತರ ಕರ್ನಾಟಕದ ಮೂವರು ಬಿಜೆಪಿ ಮುಖಂಡರು ಸೇರಿದಂತೆ ಹಲವಾರು ಶಾಸಕರು ಕಳೆದ ರಾತ್ರಿ ಊಟಕ್ಕೆಂದು ಸೇರಿದ್ದೇ ಇಂದು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಸುದ್ದಿಯಾಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ  ಮಾಜಿ ಸಚಿವರಾದ ಮುರಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ್ ಮತ್ತು ಉಮೇಶ ಕತ್ತಿ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಮಂತ್ರಿಗಳಾಗಲು ಸಾಕಷ್ಟು ಕಸರತ್ತು ಮಾಡಬೇಕಾಗಿದೆ. ಕಳೆದ ರಾತ್ರಿ ಊಟಕ್ಕೆಂದು ಸೇರಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಒಬ್ಬೊಬ್ಬರೂ  ಒಂದೊಂದು ರೀತಿಯ ಹೇಳಿಕೆ ನೀಡಲು ಮುಂದಾಗಿದ್ದಾರೆ.

ದಾವಣಗೆರೆ ಹರಜಾತ್ರೆ ಬಳಿಕ ಸಾರ್ವಜನಿಕವಾಗಿ ರಾಜಕೀಯ ಹೇಳಿಕೆಗಳಿಂದ ದೂರವೇ ಉಳಿದಿದ್ದ ಬೀಳಗಿ ಶಾಸಕ ಮುರುಗೇಶ ನಿರಾಣಿ ತಾವು ಊಟಕ್ಕೆ ಹೋಗಿರಲೇ ಇಲ್ಲ. ಊಟದ ವಿಷಯ ತಮಗೆ ಗೊತ್ತೇ ಇಲ್ಲ ಎಂದು ಹೇಳುವ ಜತೆಗೆ “ನಾನು ಸನ್ಯಾಸಿ ಅಲ್ಲ, ನನಗೆ ಸಚಿವನಾಗುವ  ಆಸೆ ಇದೆ. ಹಾಗಂತ ಸಚಿವ ಸ್ಥಾನ ಸಿಗದಿದ್ದರೂ ನನಗೆ ಸಮಾಧಾನವಿಲ್ಲ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ”. ಮುಖ್ಯಮಂತ್ರಿ ವಿರುದ್ಧ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹಾಗೆ ಬಸನಗೌಡ ಪಾಟೀಲ  ಯತ್ನಾಳ್ ಕೂಡ ಹೇಳಿಕೆ ನೀಡಿ, ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ತಮ್ಮ ನಾಯಕರು ಎಂದು ಹೇಳಿಕೊಳ್ಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮನ್ನು ಮಂತ್ರಿ ಮಾಡುವುದೇ ಇಲ್ಲ ಎಂದು ಗಂಭೀರವಾಗಿ  ದೂರಿದ್ದಾರೆ.

ರಕ್ಕಸ ಮಹಾಮಾರಿ ಕೊರೋನಾ ಅಲೆಯ ಅಬ್ಬರ ಹೆಚ್ಚಾಗಿರುವಾಗಲೇ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಇದರಲ್ಲಿ ಅಖಂಡ ವಿಜಯಪುರ ಜಿಲ್ಲೆಗೆ ಸೇರಿರುವ ಶಾಸಕರಾದ ಮುರಗೇಶ ನಿರಾಣಿ ಮತ್ತು ಬಸನಗೌಡ ಪಾಟೀಲ ಯತ್ನಾಳ್  ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಖಂಡ ವಿಜಯಪುರ ಜಿಲ್ಲೆಯ ಕೇಸರಿ ಪಾಳೆಯದಲ್ಲಿನ ಅಸಮಾಧಾನದ ಕರಿ ನೆರಳು ಈಗ ಸಿಎಂ ನೆತ್ತಿಯ ಮೇಲೆ ಕಾಣಿಸಿಕೊಂಡಿದೆ ಎಂದು ಸ್ಥಳೀಯ ರಾಜಕಾರಣದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಳೆದ ೧೧ ತಿಂಗಳು ಹಿಂದೆ ಬಿಜೆಪಿ ರಾಜ್ಯದ ಅಧಿಕಾರ  ಚುಕ್ಕಾಣಿ ಹಿಡಿದಾಗಿನಿಂದಲೂ ಮುರಗೇಶ ನಿರಾಣಿ ಮತ್ತು ಯತ್ನಾಳ್ ಕಣ್ಣಿಟ್ಟವರು. ಆದರೆ ಅವರಿಗೆ ಮಂತ್ರಿಸ್ಥಾನದ ಅವಕಾಶ ಗಗನ ಕುಸುಮವಾಗಿದೆ.

ಅಖಂಡ ಜಿಲ್ಲಾ ಕೇಸರಿ ಪಡೆಯ ಮೇಲೆ ದಳ ಪರಿವಾರದಿಂದ ವಲಸೆ ಬಂದವರು ಬಿಗಿ ಹಿಡಿತ ಸಾಧಿಸಿರುವುದೇ ಉಭಯತರು ಮಂತ್ರಿಸ್ಥಾನ ವಂಚಿತರಾಗಲು ಕಾರಣವೆಂದು ಕಮಲ ಪಾಳೆಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ೨೦೦೩-೦೪ ರಲ್ಲಿ ಜನತಾದಳ ಪರಿವಾರದಲ್ಲಿ ನಡೆದ ರಾಜಕೀಯ  ಬೆಳವಣಿಗೆಗಳ ಪರಿಣಾಮವಾಗಿ ಅಖಂಡ ವಿಜಯಪುರ ಜಿಲ್ಲೆಯ ಜನತಾದಳದ ಪ್ರಮುಖರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ ಸೇರ್ಪಡೆಗೊಂಡರು. ಅಂದಿನಿಂದ ಅಖಂಡ ಜಿಲ್ಲಾ ಬಿಜೆಪಿ ಮೇಲೆ ಅವರೇ ಹಿಡಿತ ಸಾಧಿಸುತ್ತ  ಬಂದಿದ್ದಾರೆ. ಈಗಂತೂ ಬಿಜೆಪಿಯಲ್ಲೇ ಅವರದ್ದೇ ಪಾರುಪತ್ಯ. ಇದರಿಂದಾಗಿ ಬಹುತೇಕ ಮೂಲ ಬಿಜೆಪಿಗರು ಮೂಲೆ ಸೇರುವಂತಾಗಿದೆ.

ದಳ ಪರಿವಾರದ ವಲಸೆ ನಾಯಕರ ಬಿಗಿ ಹಿಡಿತದ ಪರಿಣಾಮವಾಗಿಯೇ ಇಂದು ಶಾಸಕರಾದ ಮುರಗೇಶ ನಿರಾಣಿ ಮತ್ತು ಬಸನಗೌಡ ಪಾಟೀಲ ಯತ್ನಾಳ್‌ರಿಗೆ ಸಚಿವ ಸ್ಥಾನ ಗಗನ ಕುಸುಮವಾಗಲು ಮೂಲ ಕಾರಣ ಎನ್ನುವ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿದೆ. ಸದ್ಯ ರಾಜ್ಯ  ಬಿಜೆಪಿ ಪಾಳೆಯದಲ್ಲಿ ಬಂಡಾಯದ ಕಹಳೆ ಮೊಳಗುತ್ತಿದ್ದು, ಮಂತ್ರಿಸ್ಥಾನಕ್ಕಾಗಿನ ಹಾವು ಏಣಿಯಾಟದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಬಿಜೆಪಿ ಪಾಳೆಯದಲ್ಲಿ ಉಂಟಾಗಲಿರುವ ಮುಂದಿನ ರಾಜಕೀಯ ಬೆಳವಣಿಗೆಗಳು ನಿರ್ದರಿಸಲಿವೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com