ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು‌ ನಿಜ: ಸಚಿವ ಸುಧಾಕರ್

ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ತಾವು ಕ್ವಾರಂಟೈನ್ ಆಗಬೇಕಾದ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ತಾವು ಕ್ವಾರಂಟೈನ್ ಆಗಬೇಕಾದ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಅವರಿಗೆ ಶುಕ್ರವಾರ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಾದರಾಯನಪುರಕ್ಕೆ ಮೇ 8 ರಂದು ಭೇಟಿ ನೀಡಿದ್ದು, ಈಗಾಗಲೇ 22 ದಿನ ಕಳೆದಿವೆ. ಈಗ ನಿಮ್ಮ ಎದುರಿಗೆ ಗುಂಡು ಕಲ್ಲಿನ ತರಹ ನಿಂತಿದ್ದೇನೆ. ಆದ್ದರಿಂದ ತಾವು ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ತಾವು ಕಾರ್ಯನಿರ್ವಹಿಸುವುದು ನಿಮಗೆ ಇಷ್ಟವಿಲ್ಲವೇ? ಎಂದು ಪ್ರಶ್ನಿಸಿದ ಅವರು, ಪ್ರತಿವಾರ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ಕ್ವಾರಂಟೈನ್ ಆಗಬೇಕಾದ ಅವಶ್ಯಕತೆಯಿಲ್ಲ ಎಂದರು.

ಐವರು ಕೈ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಅವರು ಹೇಳಿರುವ ಮಾತು ಸತ್ಯ. ಬಹಳ ಜನ ಬಿಜೆಪಿಗೆ ಸೇರ್ಪಡೆಗೊಳ್ಳುವವರಿದ್ದಾರೆ. ಹೈಕಮಾಂಡ್ ಕೂಡ ಗಮನಹರಿಸಬೇಕು. ನಾವೇ ಅವರನ್ನು ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೇವೆ ಎಂದು ಸಚಿವರ ಮಾತನ್ನು ‌ಸಮರ್ಥಿಸಿಕೊಂಡರು.

ಉಮೇಶ್ ಕತ್ತಿ ನಿವಾಸದಲ್ಲಿ ಊಟಕ್ಕೆ ಸೇರಿದ ವಿಚಾರ ಕುರಿತು ಮಾತನಾಡಿದ ಅವರು, ಊಟಕ್ಕೆ ಸೇರುವುದು ತಪ್ಪಾ?. ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಾರೆ ತಪ್ಪೇನಿದೆ?. ಅವರೇನಾದರೂ ನಾಯಕರ ಬದಲಾವಣೆ ಬಗ್ಗೆ ಹೇಳಿದ್ದಾರಾ?. ಎಲ್ಲಿಯೂ ಅದರ ಬಗ್ಗೆ ಅವರು ಮಾತನಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಯತ್ನಾಳ್ ಇರಬಹುದು ಬೇರೆಯವರೇ ಇರಬಹುದು. ಯಾರೂ ಏನೂ ಹೇಳಿಕೆ ನೀಡಿಲ್ಲ. ‌ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ನಮಗೆ ಪ್ರಬಲ ಹೈಕಮಾಂಡ್ ಇದೆ. ಇಂತಹ ವಿಚಾರಗಳನ್ನು ನಮ್ಮ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದ ಅವರು, ಕೊರೋನಾ ನಿಯಂತ್ರಿಸುವುದರ ಕಡೆ ಮಾತ್ರ ನಮ್ಮ‌ ಗಮನ ಕೇಂದ್ರಿಕೃತವಾಗಿದೆ ಎಂದರು.

ಈ ವಯಸ್ಸಿನಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಲಸ ಮಾಡುತ್ತಿಲ್ಲವೇ? ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com