ಶಿರಾ ಕ್ಷೇತ್ರ ದತ್ತು ಪಡೆಯುವುದಾಗಿ ಘೋಷಿಸಿದ ಎಚ್. ಡಿ. ದೇವೇಗೌಡ

ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಭಾನುವಾರ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಿತು. ತೆನೆಹೊತ್ತ ಮಹಿಳೆಯ ಕೋಟೆಯಲ್ಲಿ ಜೆಡಿಎಸ್ ನಾಯಕರು ಅಭ್ಯರ್ಥಿ ಅಮ್ಮಾಜಮ್ಮ ಪರ ಮತಯಾಚಿಸಿ ಜಾಥಾ ನಡೆಸಿದರು.
ಎಚ್. ಡಿ. ದೇವೇಗೌಡ
ಎಚ್. ಡಿ. ದೇವೇಗೌಡ

ತುಮಕೂರು: ಉಪಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಭಾನುವಾರ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಿತು. ತೆನೆಹೊತ್ತ ಮಹಿಳೆಯ ಕೋಟೆಯಲ್ಲಿ ಜೆಡಿಎಸ್ ನಾಯಕರು ಅಭ್ಯರ್ಥಿ ಅಮ್ಮಾಜಮ್ಮ ಪರ ಮತಯಾಚಿಸಿ ಜಾಥಾ ನಡೆಸಿದರು.

ಶಿರಾದ ಬರಗೂರು ರಂಗಮಂದಿರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ತಮ್ಮ ಸಮಾಜ ಯಾರಿಗೂ ದ್ರೋಹ ಮಾಡಿಲ್ಲ. ಯಾರು ಉಳಿಮೆ ಮಾಡುತ್ತಾನೆಯೋ ಅವನೆಲ್ಲಾ ಒಕ್ಕಲಿಗನೇ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸುಮಾರು 30 ಜಾತಿಗಳು ಇವೆ. ನಾಯಕರಿಗಾಗಿ ಮೀಸಲಾತಿ ತಂದವರು ಯಾರು?. ಜೀವನದ ಕೊನೆಯ ಹೋರಾಟ ಇದು. ಯಾರಿಗೆ ತಾವು ದ್ರೋಹ ಮಾಡಿಲ್ಲ. ತಮ್ಮ ಅಹಂ ನಿಂದ ಯಾರನ್ನಾದರೂ ಮುರಿಯುತ್ತೇನೆ ಎನ್ನುವವರು ಕುರುಕ್ಷೇತ್ರ ನೆನಪು ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.

88 ವರ್ಷದ ದೇವೇಗೌಡ ಇಲ್ಲಿಗೆ ಬಂದು ನಿಂತಿರುವುದು ಪಕ್ಷದ ಉಳಿವಿಗಾಗಿ. ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಕ್ಕಾಗಿ ಶಿರಾ ತಾಲೂಕನ್ನು ದತ್ತು ತೆಗೆದುಕೊಂಡಿದ್ದೇನೆ ಈಗಿರುವ ಯಾವ ಮಹಾತ್ಮರು ಹೇಮಾವತಿ ಯಿಂದ ನೀರು ತರಲು ಹೋರಾಟ ಮಾಡಿಲ್ಲ. ಈ ಭಗೀರಥ ನಾನೇ ತಂದಿದ್ದೇನೆ ಎನ್ನುತ್ತಾನಲ್ಲ. ಯಾರಪ್ಪ ಅವನು ಭಗೀರಥ? ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕ್ಷೇತ್ರಕ್ಕೆ ನೀರು ತರುವುದು ಅಷ್ಟು ಸುಲಭವಲ್ಲ. ನೀರು ಹರಿಸುತ್ತೇವೆ ಎಂದು ಇಲ್ಲಿ ಯಾರೋ ಮಾಜಿ ಮುಖ್ಯಮಂತ್ರಿ ಹೇಳುತ್ತಾರೆ?. ಅವರಿಗೆ ನಿಜವಾಗಿಯೂ ನೀರು ಹರಿಸಲು ಸಾಧ್ಯವಾಗುತ್ತದೆಯಾ? 60 ವರ್ಷದ ಜೀವನದಲ್ಲಿ ತಾವು ಯಾವತ್ತು ಯಾವುದೇ ಗ್ರಾಮ ದತ್ತು ಪಡೆದಿಲ್ಲ. ಆದರೆ ಈ ಗ್ರಾಮ ದತ್ತು ಪಡೆಯುತ್ತಿದ್ದೇನೆ. ಈ ತಾಯಿಯನ್ನು ಗೆಲ್ಲಿಸಿ ನನ್ನ ಜೊತೆ ಕಳುಹಿಸಿಕೊಡಿ ಎಂದು ಅಮ್ಮಾಜಮ್ಮ ಪರ ಮತಯಾಚಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ನಾವು ಹಣ ನೀಡಿ ಕಾರ್ಯಕರ್ತರನ್ನು ಕರೆಸಿಲ್ಲ ಎಂದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಈ ಮೂಲಕ ಸಂದೇಶ ರವಾನಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಶಿರಾಗೆ ಬಂದು ತಾವು ಗೆದ್ದಿರುವುದಾಗಿ ಹೇಳಿದ್ದಾರೆ. ಆರು ಕೋಟಿ ಹಣವನ್ನು ಪೊಲೀಸ್ ವಾಹನದಲ್ಲಿ ತಂದಿದ್ದಾರೆ. ಚುನಾವಣೆ ಗೆದ್ದಿದ್ದೇವೆ ಎಂಬ ಅವರ ಅಹಂ ಮುರಿಯಲಿದೆ. ಕೇಸರಿ ಶಲ್ಯ ಹಾಕಿದವರಿಗೆ ಜನ ಬೆಲೆ ಕೊಡುವುದಿಲ್ಲ. ಮತದಾರರು ಹಣಕ್ಕೆ ಮಾರಾಟ ಮಾಡಿಕೊಂಡವರಲ್ಲ ಎಂದರು.

ಅಭ್ಯರ್ಥಿ ಅಮ್ಮಾಜಮ್ಮ ಮಾತನಾಡಿ, ಯಜಮಾನರಿಗೆ ಇನ್ನೂ ಆಸೆಯಿತ್ತು. ಆದರೆ ದೇವರು ಬಹಳ ಬೇಗ ಅವರನ್ನು ಕರೆದುಕೊಂಡ. ಹಿರಿಯರಿದ್ದಾರೆ ತಮಗೆ ಸಹಕಾರ ಕೊಡುತ್ತಿದ್ದಾರೆ. ತಾವು  ಮಡಿಲು ಒಡ್ಡಿದ್ದೇನೆ. ಎಲ್ಲರೂ ನನ್ನ ಸೆರಗಿಗೆ ನಿಮ್ಮ ಮತವನ್ನು ಹಾಕಿ ಎಂದು ಸೆರಗೊಡ್ಡಿ ಮತ ಭಿಕ್ಷೆಯಾಚಿಸಿದರು.

ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ಮತಕ್ಕಾಗಿ ತಂದೆ ತಾಯಿಯಂದರ ಮನಸ್ಸಿನಲ್ಲಿ ಚೆಲ್ಲಾಟವಾಡುತ್ತಿದೆ. ಕೆರೆಗೆ ನೀರು ತುಂಬಿಸುವುದಾಗಿ ಸಿಎಂ ಹೇಳಿದ್ದಾರೆ. ಒಂದು ವೇಳೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಮದಲೂರಿನಿಂದ ವಿಧಾನಸೌಧಕ್ಕೆ ಕುಮಾರಸ್ವಾಮಿ ಪಾದಯಾತ್ರೆ ಮಾಡಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com