ಅಭಿವೃದ್ಧಿಗಾಗಿ ಜನರ ಮತ- ರಾಜೇಶ್ ಗೌಡ; ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಜಯಚಂದ್ರ ಸಂಶಯ
ಶಿರಾದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ನನಗೆ 10ನೇ ಚುನಾವಣೆ. ಆದರೆ ಹಿಂದೆಂದೂ ಕಾಣದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆದಿದೆ ಎಂದು ಆರೋಪಿಸಿದರು.
Published: 04th November 2020 07:34 AM | Last Updated: 04th November 2020 01:02 PM | A+A A-

ಟಿ.ಬಿ ಜಯಚಂದ್ರ
ತುಮಕೂರು: ಶಿರಾ ಉಪಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಕಾರ್ಯವೈಖರಿಯ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸಂಶಯ ವ್ಯಕ್ತಪಡಿಸಿದ್ದಾರೆ.
ಶಿರಾದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ನನಗೆ 10ನೇ ಚುನಾವಣೆ. ಆದರೆ ಹಿಂದೆಂದೂ ಕಾಣದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆದಿದೆ ಎಂದು ಆರೋಪಿಸಿದರು.
ಇಲ್ಲಿ ಅಧಿಕಾರ ದುರುಪಯೋಗ ಆಗಿದೆ. ನನಗೆ ಇವಿಎಂ ಮೇಲೆ ಸಂಶಯ ಬರುತ್ತಿದೆ. ನಮ್ಮ ಕಾರ್ಯಕರ್ತರು ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಗೆದ್ದ ಬಳಿಕ ಇವಿಎಂ ಬಗ್ಗೆ ಮತ್ತಷ್ಟು ಮಾತನಾಡುತ್ತೇನೆ ಎಂದು ಹೇಳಿದರು.
ಶಿರಾ ಕ್ಷೇತ್ರದಲ್ಲಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡಿದ್ದು, ಮತಯಂತ್ರಗಳಲ್ಲಿ ಏನೆಲ್ಲ ಪವಾಡ ನಡೆಸಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ಈಗಾಗಲೇ ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಸೋಮವಾರ ನೂರಕ್ಕೂ ಹೆಚ್ಚು ಮಂದಿ ಹಾಸನ ಮೂಲದವರು ಮತದಾರರಿಗೆ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಜನರು ಅವರನ್ನು ಕೂಡಿ ಹಾಕಿದ್ದರು. ಆದರೆ ಮಾನವೀಯ ದೃಷ್ಟಿಯಿಂದ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿಸಿದರು.
ಇನ್ನೂ ಜಯಚಂದ್ರ ಅವರ ಪ್ರಚಾರದಲ್ಲಿ ಪಾಲ್ಗೋಂಡಿದ್ದ ಅವರ ಪತ್ನಿ ನಿರ್ಮಲಾ ತಮ್ಮ ಪತಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ ನನ್ನ ಪತಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಹೀಗಾಗಿ ಅವರು ಗೆಲ್ಲುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿ ಅಭ್ಯರ್ಥಿ ಸಿ.ಎಂ ರಾಜೇಶ್ ಗೌಡ ಇದು ಆಧಾರರಹಿತ ಆರೋಪವಾಗಿದೆ, ಶಿರಾ ಕ್ಷೇತ್ರದ ಮತದಾರರು ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ, ಬಿಜೆಪಿ ಸರ್ಕಾರ ಇದಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ನನ್ನ ಪತಿ ಉತ್ತಮ ಕೆಲಸ ಮಾಡಿದ್ದಾರೆ, ನನ್ನ ಪರ ಅನುಕಂಪದ ಅಲೆಯಿದೆ, ಹೀಗಾಗಿ ತಾವು ಗೆಲ್ಲುವುದಾಗಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ನನ್ನ ಪರವಾಗಿ ಮಾಜಿ ಪ್ರದಾನಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತೀವ್ರ ಪ್ರಚಾರ ನಡೆಸಿದ್ದಾರೆ. ಹೀಗಾಗಿ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.