ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ: ಶುರುವಾಯ್ತು ರಾಜಕೀಯ ನಾಯಕರ ಕೆಸರೆರಚಾಟ

4 ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಧಾರವಾಡ ಜಿಲ್ಲೆ ಪಂಚಾಯತಿ ಸದಸ್ಯ ಯೋಗೀಶ್ ಗೌಡರ ಬರ್ಬರ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಶುರುವಾಗಿದೆ. 
ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
ವಿನಯ್ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರು: 4 ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಧಾರವಾಡ ಜಿಲ್ಲೆ ಪಂಚಾಯತಿ ಸದಸ್ಯ ಯೋಗೀಶ್ ಗೌಡರ ಬರ್ಬರ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೆಸರೆರಚಾಟ ಶುರುವಾಗಿದೆ. 

ವಿನಯ್ ಕುಲಕರ್ಣಿ ಬಂಧನ ಕುರಿತು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೊಂದು ರಾಜಕೀಯ ಪ್ರೇರಿತವಾಗಿದೆ. ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಬಿಜೆಪಿ ನಡೆಸಿರುವ ರಾಜಕೀಯ ಪಿತೂರಿ ಇದಾಗಿದೆ. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ನಾಯಕರು ಯಾವ ತಪ್ಪನ್ನೂ ಮಾಡಿಲ್ಲ ಎಂದು ಡಿಕೆ. ಶಿವಕುಮಾರ್ ಅವರು ಹೇಳಿದ್ದಾರೆ. 

ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ. ಆದರೆ, ಕಾನೂನು ಚೌಕಟ್ಟಿನಲ್ಲಿಯೇ ಅವರೂ ಕೆಲಸ ಮಾಡಬೇಕಿದೆ. ಸಿಬಿಐ ತನಿಖೆ ಮಾಡಲಿ. ಒಂದು ಬಾರಿಯಲ್ಲ, 10 ಬಾರಿ ತನಿಖೆ ಮಾಡಲಿ. ರಾಜಕೀಯ ಒತ್ತಡಗಳಿಗೆ ಕುಲಕರ್ಣಿ ಕುಗ್ಗಬಾರದು ಎಂದು ತಿಳಿಸಿದ್ದಾರೆ. 

ಸಿದ್ದರಾಮಯ್ಯ ಅವರು ಮಾತನಾಡಿ, ಬೆಂಗಳೂರಿನಲ್ಲಿ ಡಿಕೆ.ಶಿವಕುಮಾರ್ ಅವರ ಆಸ್ತಿಪಾಸ್ತಿಗಳ ಮೇಲೂ ಸಿಬಿಐ ದಾಳಿ ನಡೆಸಿತ್ತು. ಈ ಹಿಂದೆ ನನ್ನೊಂದಿಗೆ ವಿನಯ್ ಕುಲಕರ್ಣಿಯವರು ಮಾತನಾಡಿ, ನಾನು ಮುಗ್ದ, ನನ್ನ ವಿರುದ್ಧ ಕೇಳಿ ಬಂದಿರುವ ಎಲ್ಲಾ ಆರೋಪಗಳೂ ಸುಳ್ಳಿ ಎಂದಿದ್ದರು. ಸಾಕ್ಷ್ಯಾಧಾರಗಳು ದೊರಕದ ಕಾರಣ ರಾಜ್ಯ ಪೊಲೀಸರೂ ಕೂಡ ಆರೋಪಗಳನ್ನು ಕೈಬಿಟ್ಟಿದ್ದರು. ಇದಕ್ಕೆ ಆಶಾಭಂಗಗೊಂಡಿರುವ ಬಿಜೆಪಿ ಸಿಬಿಐ ಮೂಲಕ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಪಕ್ಷದ ನಾಯಕರು ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರೀಯ ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಾಯಕರಿಗೆ ಸಮಸ್ಯೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಈ ಎಲ್ಲಾ ಸಮಸ್ಯೆಗಳಿಂದ ಪಕ್ಷ ಹೊರಬರಲಿದೆ ಎಂದಿದ್ದಾರೆ. 

ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ ನಾರಾಯಣ್ ಅವರು ಮಾತನಾಡಿ, ಇದು ರಾಜಕೀಯ ಪ್ರೇರಿತವಲ್ಲ. ವಿನಯ್ ಕುಲಕರ್ಣಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಸಾಕಷ್ಟು ಜನರು ಪ್ರತಿಭಟನೆ ನಡೆಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದರು. ಕಾನೂನು ತನ್ನ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರತೀ ಬಾರಿ ಇಡಿ, ಸಿಬಿಐ ದಾಳಿ ನಡೆದಾಗಲೂ ಬಿಜೆಪಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com