ಪಕ್ಷ ಸಂಘಟನೆಯಲ್ಲಿ ಪ್ರಧಾನ ಪಾತ್ರ, ರಾಜ್ಯದಿಂದ ಕೇಂದ್ರದತ್ತ ಸಿಟಿ ರವಿ ಚಿತ್ತ!

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಸಿಟಿ ರವಿ ಸಲ್ಲಿಕೆ ಮಾಡಿದ್ದ ರಾಜಿನಾಮೆ ಇದೀಗ ಅಂಗೀಕಾರವಾಗಿದ್ದು, ರವಿ ಇದೀಗ ರಾಜ್ಯದಿಂದ ಕೇಂದ್ರದತ್ತ ಗಮನ ಕೇಂದ್ರೀಕರಿಸಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಸಿಟಿ ರವಿ ಸಲ್ಲಿಕೆ ಮಾಡಿದ್ದ ರಾಜಿನಾಮೆ ಇದೀಗ ಅಂಗೀಕಾರವಾಗಿದ್ದು, ರವಿ ಇದೀಗ ರಾಜ್ಯದಿಂದ ಕೇಂದ್ರದತ್ತ ಗಮನ ಕೇಂದ್ರೀಕರಿಸಿದ್ದಾರೆ.

ಹೌದು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅಂಗೀಕರಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ ರವಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಈ ರಾಜಿನಾಮೆಯನ್ನು ಸಿಎಂ ಬಿಎಸ್ ವೈ ಅಂಗೀಕರಿಸಿರಲಿಲ್ಲ. ಇದೇ ವಿಚಾರವಾಗಿ ಈ ಹಿಂದೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕೆಲಸ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ರಾಜ್ಯ ಮತ್ತು ಭಾಷೆಗೆ ಕೆಲಸ  ಮಾಡುವುದು ಒಂದು ಪುಣ್ಯ ಕೆಲಸ ಮತ್ತು ನನಗೆ ಸಂತೋಷವಾಗಿದೆ. ಆದರೆ ಪಕ್ಷವು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನನಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ನಾನು ಎರಡೂ ಕಡೆ ಗಮನ ಹರಿಸಲಾಗದ ಕಾರಣ, ನಾನು ಅಕ್ಟೋಬರ್ 2 ರಂದು ರಾಜೀನಾಮೆ ನೀಡಿದ್ದೇನೆ. ನನ್ನ ರಾಜಿನಾಮೆಯನ್ನು  ಅಂಗೀಕರಿಸುವಂತೆ ಸಿಎಂ ಬಿಎಸ್ ವೈ ಅವರಿಗೆ ಮನವಿ ಕೂಡ ಮಾಡಿದ್ದೇನೆ. ಶೀಘ್ರದಲ್ಲಿಯೇ ಸಿಎಂ ರಾಜಿನಾಮೆ ಅಂಗೀಕರಿಸುವ ಭರವಸೆ ಇದೆ ಎಂದು ರವಿ ಹೇಳಿದ್ದರು. 

ಇದೀಗ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜಿನಾಮೆ ಅಂಗೀಕರಿಸಿದ್ದು, ಸಿ.ಟಿ.ರವಿ ಅವರು ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿ ಸಚಿವ ಹುದ್ದೆಯಿಂದ ಮುಕ್ತರಾಗಿದ್ದಾರೆ. ಈಗಾಗಲೇ ರಾಷ್ಟ್ರೀಯ ಕಾರ್ಯದರ್ಶಿಯಾಗಿ ತಮ್ಮ ಕೆಲಸ ಆರಂಭಿಸಿರುವ ರವಿ, ಕೇಂದ್ರ ಘಟಕದಲ್ಲಿ ಸ್ಥಾನ ನೀಡಿದಾಗಿನಿಂದಲೂ ಕೇರಳ,  ತಮಿಳುನಾಡು ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದಾರೆ.

ಶೀಘ್ರ ಸಚಿವ ಸಂಪುಟ ವಿಸ್ತರಣೆ
ಇನ್ನು ಸಿಟಿ ರವಿ ರಾಜಿನಾಮೆ ಮತ್ತು ಉಪ ಚುನಾವಣಾ ಫಲಿತಾಂಶದ ದಿನಾಂಕ ಹತ್ತಿರವಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ರವಿ ರಾಜಿನಾಮೆಯಿಂದ ತೆರವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಸಚಿವರನ್ನು ನೇಮಕ  ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಹಣಕಾಸು, ವಿದ್ಯುತ್ (ಇಂಧನ), ಬೆಂಗಳೂರು ಅಭಿವೃದ್ಧಿ, ಯುವ ಜನ ಮತ್ತು ಕ್ರೀಡಾ ಅಭಿವೃದ್ಧಿ ಇಲಾಖೆ ಮತ್ತು ಇನ್ನೂ ಹಲವು ಖಾತೆಗಳು ಖಾಲಿ ಉಳಿದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com